


ಬಂಟ್ವಾಳ: ಅವಕಾಶಗಳನ್ನು ಸದುಪಯೋಗಪಡಿಸಿಕೊಳ್ಳುವ ಮೂಲಕ ವಿದ್ಯಾರ್ಥಿಗಳು ತಮ್ಮ ಪ್ರತಿಭೆಯನ್ನು ವಿಸ್ತಾರಗೊಳಿಸಬೇಕು ಎಂದು ನಿವೃತ್ತ ಶಿಕ್ಷಕ, ಕಾರ್ಯಕ್ರಮ ಉದ್ಘೋಷಕ ಬಿ.ರಾಮಚಂದ್ರ ರಾವ್ ಹೇಳಿದರು.
ನಮ್ಮ ಬಂಟ್ವಾಳ ವೆಬ್ ನ್ಯೂಸ್ ವತಿಯಿಂದ ಗಣೇಶ ಚತುರ್ಥಿಯ ಅಂಗವಾಗಿ ಏರ್ಪಡಿಸಲಾಗಿದ್ದ ನಮ್ಮ ಗಣಪ ಗಣೇಶ ಚಿತ್ರರಚನಾ ಸ್ಪರ್ಧೆಯ ಬಹುಮಾನ ವಿತರಿಸಿ ಮಾತನಾಡಿದರು.
ವಿದ್ಯಾರ್ಜನೆಯ ಸಂದರ್ಭ ಹಲವಾರು ಅವಕಾಶಗಳು ನಮ್ಮನ್ನು ಹುಡುಕಿಕೊಂಡು ಬರುತ್ತವೆ, ಆದರೆ ಅವಕಾಶಗಳನ್ನು ಕೈ ಚೆಲ್ಲಿದರೆ ಅದು ನಮ್ಮ ಏಳಿಗೆಗೆ ಹಿನ್ನಡೆಯಾಗುತ್ತದೆ ಎಂದ ಅವರು, ಬದುಕಿನಲ್ಲಿ ಕಾಣುವ ಸೋಲನ್ನೂ ಸವಾಲಾಗಿ ಸ್ವೀಕರಿಸಿ ಮುನ್ನಡೆಯಬೇಕು. ನಮ್ಮ ಪ್ರತಿಭೆ ಮತ್ತಷ್ಟು ಮಂದಿಗೆ ಪ್ರೇರಣೆಯಾಗಲಿ ಎಂದರು. ನಮ್ಮ ಗಣಪ ನ ಹೆಸರಿನಲ್ಲಿ ವಿದ್ಯಾರ್ಥಿಗಳಿಗೆ ಗಣೇಶನ ಚಿತ್ರ ರಚನಾ ಸ್ಪರ್ಧೆ ಏರ್ಪಡಿಸಿದ ನಮ್ಮ ಬಂಟ್ವಾಳ ಸಂಸ್ಥೆಯನ್ನು ಅಭಿನಂದಿಸಿದ ಅವರು, ಇಂತಹ ಪ್ರೇರಣೆಯ ಕಾರ್ಯ ಇನ್ನೂ ಮುಂದುವರಿಯಲಿ ಎಂದರು.
ಓಂ ಪವರ್ ಟರ್ಮಿನರ್ಸ್ ನ ಮಾಲಕ, ಉದ್ಯಮಿ ಓಂ ಪ್ರಸಾದ್, ಬಂಟ್ವಾಳ ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಹರೀಶ್ ಮಾಂಬಾಡಿ ವೇದಿಕೆಯಲ್ಲಿ ಉಪಸ್ಥಿತರಿದ್ದರು. ನಮ್ಮ ಬಂಟ್ವಾಳ ವೆಬ್ ನ್ಯೂಸ್ ನ ಸಂಪಾದಕ, ಬಂಟ್ವಾಳ ಪ್ರೆಸ್ ಕ್ಲಬ್ ಅಧ್ಯಕ್ಷ ಪ್ರಶಾಂತ್ ಪೂಂಜಾಲಕಟ್ಟೆ ಅತಿಥಿಗಳನ್ನು ಸ್ವಾಗತಿಸಿದರು. ಪತ್ರಕರ್ತ ಮೌನೇಶ ವಿಶ್ವಕರ್ಮ ಕಾರ್ಯಕ್ರಮ ನಿರೂಪಿಸಿ ವಂದಿಸಿದರು.






