

ಬಂಟ್ವಾಳ: ತಾಲೂಕು ಕಚೇರಿಯಲ್ಲಿ ಆಧಾರ್ ತಿದ್ದುಪಡಿ ಶುಲ್ಕದಲ್ಲಿ ಲಕ್ಷಾಂತರ ರೂಪಾಯಿ ಹಣ ವಂಚನೆಯಾಗಿದೆ ಎಂಬ ಸಂಶಯದ ಆರೋಪ ಸಾರ್ವಜನಿಕವಾಗಿ ವ್ಯಕ್ತವಾದ ಹಿನ್ನಲೆಯಲ್ಲಿ ಈ ವಿಚಾರದಲ್ಲಿ ಸಮಗ್ರ ತನಿಖೆ ನಡೆಸುವಂತೆ ಬಂಟ್ವಾಳ ತಾ.ಪಂ.ಸದಸ್ಯ ಪ್ರಭಾಕರ ಪ್ರಭು ಅವರು ಬಂಟ್ವಾಳ ತಹಶೀಲ್ದಾರರಿಗೆ ಮನವಿ ಮಾಡಿದ್ದಾರೆ.
ಬಂಟ್ವಾಳ ತಾಲೂಕು ಕಛೇರಿ ಯಲ್ಲಿನ ಜನಸ್ನೇಹಿ ಕೇಂದ್ರ ಗಳಲ್ಲಿನ ಎರಡು ಹೋಬಳಿಗಳಲ್ಲಿ ಆಧಾರ್ ತಿದ್ದುಪಡಿ ಮಾಡುವ ಬಗ್ಗೆ ಶುಲ್ಕದಲ್ಲಿ ಭಾರಿ ಅವ್ಯವಹಾರವಾಗಿದ್ದು ಹಾಗೂ ಸರಕಾರಕ್ಕೆ ಲಕ್ಷಾಂತರ ಹಣ ಪಾವತಿಸದೆ ವಂಚನೆ ಮಾಡಿರುವುದು ಪತ್ರಿಕೆಯಲ್ಲಿ ಪ್ರಕಟವಾದ ವರದಿಯಂತೆ ತಡವಾಗಿ ಬೆಳಕಿಗೆ ಸಾರ್ವಜನಿಕ ವಲಯಕ್ಕೆ ಗಮನಕ್ಕೆ ಬಂದಿದ್ದು,ಗೊಂದಲಕ್ಕೆ ಕಾರಣವಾಗಿದೆ ಎಂದು ಅವರು ಮನವಿಯಲ್ಲಿ ತಿಳಿಸಿದ್ದಾರೆ.
2018 ರಿಂದ ಆಧಾರ್ ತಿದ್ದುಪಡಿ ಶುಲ್ಕ. ನಿಗದಿಯಾಗಿ ಸುತ್ತೋಲೆಯಂತೆ 25 ರೂ ನಿಗದಿಗೊಳಿಸಲಾಗಿತ್ತು. ಬಳಿಕ 2019 ರಲ್ಲಿ 50 ರೂ.ವಿಗೆ ಶುಲ್ಕವನ್ನು ಹೆಚ್ಚಿಸಲಾಗಿತ್ತು.
15 ವರ್ಷ ಪ್ರಾಯ ಒಳಗಿನ ಮಕ್ಕಳಿಗೆ ತಿದ್ದುಪಡಿ ಶುಲ್ಕದಲ್ಲಿ ವಿನಾಯಿತಿ ನೀಡಲಾಗಿದೆ ಎಂದು ತಾವು ಹೇಳಿರುವಂತೆ,ಕಳೆದ 2 ವರ್ಷ ಗಳಿಂದ ಆಧಾರ್ ತಿದ್ದುಪಡಿ ಶುಲ್ಕದ ಬಗ್ಗೆ ಅರ್ಜಿದಾರರಿಗೆ ಸ್ವೀಕೃತಿ ರಶೀದಿಯನ್ನು ನೀಡದೆ ಸಾರ್ವತ್ರಿಕ ವಾಗಿ 2018 ರಲ್ಲಿ 25 ರೂ.ವಿನಂತೆ ಹಾಗೂ 2019 ರಲ್ಲಿ 50 ರೂ. ನಂತೆ ಇಷ್ಟ ರವರೆಗೆ ಸ್ವೀಕರಿಸಲಾಗುತ್ತಿದೆ
ಅದಲ್ಲದೆ ಬ್ರೊಕರ್ ಗಳ ಮೂಲಕ ಕೆಲವರು ತಮ್ಮ ಅಗತ್ಯದ ಕೆಲಸಕ್ಕಾಗಿ ಅನಿವಾರ್ಯ ಎಂಬಂತೆ 1000 ರೂ.ಪಾವತಿಸಿ ಆಧಾರ್ ತಿದ್ದುಪಡಿ ಮಾಇರುವ ಉದಾಹರಣೆಯು ಇದೆ ಎಂದೂ ಇದೀಗ ಸಾರ್ವಜನಿಕವಾಗಿ ಕೇಳಿ ಬರುವ ಸಂಗತಿಯಾಗಿದೆ ಎಂದು ಪ್ರಭು ಮನವಿಯಲ್ಲಿ ತಿಳಿಸಿದ್ದಾರೆ.
ಈ ಬಗ್ಗೆ ಶಾಸಕ ರಾಜೇಶ್ ನಾಯ್ಕ್ ರವರಿಗೂ ಸಾರ್ವಜನಿಕರೊಬ್ಬರು ದೂರು ಸಲ್ಲಿಸಿದ ಹಿನ್ನಲೆಯಲ್ಲಿ ಶಾಸಕರ ಸೂಚನೆಯಂತೆ ತಹಶಿಲ್ದಾರರು ಕೂಲಂಕುಷ ತನಿಖೆ ನಡೆಸಿದಾಗ ವಂಚನೆ ಪ್ರಕರಣ ಬೆಳಕಿಗೆ ಬಂದಿರುವುದು ತಿಳಿದು ಬಂದಿದೆ. ಹಾಗಾಗಿ ಆಧಾರ್ ಕೇಂದ್ರದ ಸಿಬ್ಬಂದಿಗಳು ಲಕ್ಷಾಂತರ ರೂ. ಸರಕಾರಕ್ಕೆ ಪಾವತಿಸದಿರಲು ಕಾರಣವೆನು? ಇದರ ಬಗ್ಗೆ ಸಂಪೂರ್ಣವಾದ ತನಿಖೆ ನಡೆಸಬೇಕು ಮತ್ತು ಜಿಲ್ಲಾ ಸಂಯೋಜಕರನ್ನು ಕೂಡ ವಿಚಾರಣೆ ಗೊಳಪಡಿಸಿ. ತಪ್ಪಿತಸ್ಥರ ವಿರುದ್ದ ಕಠಿಣ ಕ್ರಮಕೈಗೊಳ್ಳಬೇಕು ಎಂದು ಮನವಿಯಲ್ಲಿ ಒತ್ತಾಯಿಸಿದ್ದಾರೆ.







