ಬಂಟ್ವಾಳ: ಅಲ್ಲಿಪಾದೆ ಪರಿಸರ ಹೆಚ್ಚು ಶಾಂತಿಯುತವಾಗಿದೆ. ಇಲ್ಲಿ ಎಲ್ಲಾ ವರ್ಗದ ಜನರಿದ್ದರೂ ಸಹಬಾಳ್ವೆ ಹಾಗೂ ನ್ಯಾಯಯುತವಾಗಿ ಬದುಕುತ್ತಿದ್ದಾರೆ. ಆದ್ದರಿಂದ ಇಲ್ಲಿ ಸಂಘರ್ಷಗಳು ಕಡಿಮೆ ಎಂದು ಬಂಟ್ವಾಳ ಗ್ರಾಮಾಂತರ ಪೊಲೀಸ್ ಠಾಣೆಯ ಉಪನಿರೀಕ್ಷಕ ಪ್ರಸನ್ನ ಎಂ.ಎಸ್. ಹೇಳಿದರು.


ಸಂತ ಜೋನರ ಹಿ.ಪ್ರಾ.ಶಾಲೆ ಹಾಗೂ ಸಂತ ಅಂತೋನಿಯವರ ಆಂಗ್ಲ ಮಾಧ್ಯಮ ಶಾಲೆ ಅಲ್ಲಿಪಾದೆ ಆಶ್ರಯದಲ್ಲಿ ರೋಟರಿ ಕ್ಲಬ್ ಬಂಟ್ವಾಳ ಲೊರೆಟ್ಟೊ ಹಿಲ್ಸ್, ಬಂಟ್ವಾಳ ಗ್ರಾಮಾಂತರ ಪೊಲೀಸ್ ಠಾಣೆ, ರಿಕ್ಷಾ ಚಾಲಕರು ಮತ್ತು ಮಾಲಕರು ಅಲ್ಲಿಪಾದೆ ಇವರ ಸಹಯೋಗದಲ್ಲಿ ಸೋಮವಾರ ನಡೆದ ರಸ್ತೆ ಸುರಕ್ಷ ಅಭಿಯಾನ ಹಾಗೂ ಹಿರಿಯ ರಿಕ್ಷಾ ಚಾಲಕರಿಗೆ ಸನ್ಮಾನ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು. ಆಟೋ ಚಾಲಕರು ಪೊಲೀಸರ ಆಪ್ತರು. ಹೆಚ್ಚಾಗಿ ಪೊಲೀಸರಿಗೆ ಪ್ರಥಮ ಹಂತದ ಮಾಹಿತಿ ನೀಡುವವರು ಅವರೇ. ಅವರನ್ನು ಗೌರವದಿಂದ ಕಾಣಬೇಕು ಎಂದರು. ಆರಟಿಓ ಕಚೇರಿಗಳಲ್ಲಿ ಮಧ್ಯವರ್ತಿ ಗಳನ್ನು ಸಂಪರ್ಕಿಸದೇ ಸ್ವಯಂ ಕೆಲಸ ಮಾಡುವಂತೆ ಚಾಲಕರಿಗೆ ಅವರು ಸಲಹೆ ನೀಡಿದರು.
ಅಲ್ಲಿಪಾದೆ ಚರ್ಚ್‌ನ ಧರ್ಮಗುರುಗಳಾದ ವಂ. ಫಾ| ಫೆಡ್ರಿಕ್ ಮೊಂತೆರೋ ಅಧ್ಯಕ್ಷತೆ ವಹಿಸಿ ಮಾತನಾಡಿ ಮಾನವೀಯತೆ ಮತ್ತು ಸಾಮಾಜಿಕ ಕಾಳಜಿಯಿಂದ ಕೆಲಸ ಮಾಡಿದಾಗ ಸಮಾಜ ಅಭಿವೃದ್ಧಿಯಾಗಲು ಸಾಧ್ಯವಿದೆ. ದೇವರು ಪ್ರತಿಯೊಬ್ಬರಿಗೂ ಒಂದು ಜವಬ್ದಾರಿ ನೀಡಿರುತ್ತಾನೆ, ಅದನ್ನು ಅರಿತುಕೊಂಡು ಬಾಳ ಬೇಕು ಎಂದು ತಿಳಿಸಿದರು. ರಸ್ತೆ ಸುರಕ್ಷತೆಯ ಜೊತೆ ಪರಿಸರ ಕಾಪಾಡುವ ಕೆಲಸ ನಮ್ಮೆಲ್ಲರಿಂದ ಆಗಬೇಕು ಎಂದು ಆಶಿಸಿದರು. ರೋಟರಿ ಕ್ಲಬ್ ಬಂಟ್ವಾಳ ಲೊರೆಟ್ಟೊ ಹಿಲ್ಸ್ ಅಧ್ಯಕ್ಷ ಪದ್ಮರಾಜ್ ಬಲ್ಲಾಳ್ ಶುಭ ಹಾರೈಸಿದರು.
ಇದೇ ಸಂದರ್ಭ ಸಾರ್ವಜನಿಕರು ಹಾಗೂ ಮಕ್ಕಳಿಗೆ ಸುರಕ್ಷತಾ ದೃಷ್ಡಿಯಿಂದ ನೀಡಲಾದ ಬ್ಯಾರೀಕೇಡ್‌ಗಳನ್ನು ಪೊಲೀಸರಿಗೆ ಹಸ್ತಾಂತರಿಸಲಾಯಿತು. ಹಿರಿಯ ರಿಕ್ಷಾ ಚಾಲಕ ಐತಪ್ಪ ಬಂಗೇರ ಅವರನ್ನು ಸನ್ಮಾನಿಸಲಾಯಿತು. ರೋಟರಿ ಕ್ಲಬ್ ಕಾರ್ಯದರ್ಶಿ ಶೃತಿ ಮಾಡ್ತ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಸಂತ ಜೋನರ ಹಿ.ಪ್ರಾ.ಶಾಲೆ ಮುಖ್ಯ ಶಿಕ್ಷಕಿ ಅಂಜಲೀನಾ, ಸಂತ ಅಂತೋನಿಯವರ ಆಂಗ್ಲ ಮಾಧ್ಯಮ ಶಾಲೆಯ ಮುಖ್ಯ ಶಿಕ್ಷಕಿ ಲವೀನಾ ವೇಗಸ್, ಪಾಲನ ಸಮಿತಿ ಉಪಾಧ್ಯಕ್ಷ ಲಿಯೋ ಫೆರ್ನಾಂಡೀಸ್ ಮತ್ತಿತರರು ಉಪಸ್ಥಿತರಿದ್ದರು.
ಸರಪಾಡಿ ಗ್ರಾ.ಪಂ. ಸದಸ್ಯ ವಿನ್ಸೆಂಟ್ ಪಿಂಟೊ ಸ್ವಾಗತಿಸಿದರು, ಡೆಂಝಿಲ್ ಹರ್ಮನ್ ನೊರೋನ್ಹ ಸನ್ಮಾನಿತರ ಬಗ್ಗೆ ಮಾತನಾಡಿದರು.
ಮಿಥುನ್ ಸಿಕ್ವೇರಾ ವಂದಿಸಿದರು. ಕೆವಿನ್ ಸಿಕ್ವೇರಾ ಕಾರ್ಯಕ್ರಮ ನಿರೂಪಿಸಿದರು.

LEAVE A REPLY

 Click this button or press Ctrl+G to toggle between Kannada and English

Please enter your comment!
Please enter your name here