

ವಿಟ್ಲ: ವಿಟ್ಲ ಕಸಬಾ ಗ್ರಾಮದ ಆಲಂಗಾರು ಭಾಗದ ರೈತರಿಗೆ ಗಣಿಗಾರಿಕೆಯಿಂದ ಕೃಷಿ ನಾಶವಾಗುವ ದೂರಿನ ಹಿನ್ನಲೆಯಲ್ಲಿ ಸ್ಥಳೀಯ ಪರಿಸರ ರಕ್ಷಣೆಯ ನಿಟ್ಟಿನಲ್ಲಿ ರೈತ ಸಂಘ 2016ರಿಂದ ಹೋರಾಟಕ್ಕೆ ಮುಂದಾಗಿದ್ದು, ಗಣಿ ಇಲಾಖೆ ಕಲ್ಲು ಗಣಿ ಗುತ್ತಿಗೆಯನ್ನು ರದ್ದುಗೊಳಿಸಿದ ಬಗ್ಗೆ ಆದೇಶ ಹೊರಡಿಸಿ 11 ದಿನ ಕಳೆದರೂ ಕಲ್ಲು ಕೋರೆ ನಡೆಯುತ್ತಿದೆ. ಇದನ್ನು ತಕ್ಷಣ ಸಂಬಂಧಪಟ್ಟವರು ನಿಲ್ಲಿಸಬೇಕೆಂದು ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆಯ ಜಿಲ್ಲಾಧ್ಯಕ್ಷ ಶ್ರೀಧರ ಶೆಟ್ಟಿ ಬೈಲುಗುತ್ತು ಹೇಳಿದರು.
ಅವರು ವಿಟ್ಲ ಪ್ರೆಸ್ಕ್ಲಬ್ನಲ್ಲಿ ಪತ್ರಿಕಾಗೋಷ್ಠಿ ನಡೆಸಿ ಆದೇಶ ಪಾಲನೆಗೆ ಆಗ್ರಹಿಸಿದರು. ಅಕ್ರಮವಾಗಿ ಸ್ಪೋಟಕಗಳನ್ನು ಬಳಸಿ ನಡೆಯುತ್ತಿರುವ ಗಣಿಗಾರಿಕೆಯಿಂದ ಬೆಳೆಗಳು ನಾಶವಾಗುತ್ತಿರುವ ಬಗ್ಗೆ ವಿಟ್ಲ ಕಸಬ ಭಾಗದ ರೈತರ ದೂರುಗಳ ಹಿನ್ನೆಲೆಯಲ್ಲಿ ರಾಜ್ಯ ಉಚ್ಚ ನ್ಯಾಯಾಲಯದಲ್ಲಿ ದಾವೆಯನ್ನು ಹೂಡಲಾಗಿತ್ತು. ನ್ಯಾಯಾಲಯ ಪ್ರಕರಣದ ತನಿಖೆಯನ್ನು ಕೈಗೆತ್ತಿಕೊಂಡ ಸಂದರ್ಭದಲ್ಲಿ ಗಣಿ ಇಲಾಖೆ ನೀಡಿದ್ದ ಪರವಾನಿಗೆಯನ್ನು ಹಿಂಪಡೆಯುವುದಾಗಿ ಹೇಳಿ ಆದೇಶ ಹೊರಡಿಸಿದ ಪ್ರಕಾರ ಕಲ್ಲು ಗಣಿಗಾರಿಕೆ ಸ್ಥಗಿತವಾಗಬೇಕಾಗಿತ್ತು. ಆದರೆ ರಾಜಕೀಯ ವ್ಯಕ್ತಿಗಳ ಪ್ರಭಾವದ ಹಿನ್ನಲೆಯಲ್ಲಿ ಆದೇಶವನ್ನು ಉಲ್ಲಂಗಿಸಿ ಗಣಿಗಾರಿಕೆ ಮುಂದುವರಿದಿದೆ. ರೈತರಿಗೆ ಸಮಸ್ಯೆಯಾಗುವ ಗಣಿಗಾರಿಕೆಯನ್ನು ತಡೆ ಹಿಡಿಯಬೇಕು ಎಂದರು.
ನ್ಯಾಯಾಲಯದ ಆದೇಶವನ್ನು ಪಾಲಿಸಬೇಕಾದ ಸ್ಥಳೀಯ ಪಂಚಾಯಿತಿ ಮುಂದಿವರಿದ ಗಣಿಗಾರಿಕೆಯನ್ನು ಸ್ಥಗಿತ ಮಾಡುತ್ತಿಲ್ಲ. ಇದನ್ನು ಗಮನಿಸಿದರೆ ಅವರು ಕೂಡಾ ಈ ಅಕ್ರಮದಲ್ಲಿ ಶಾಮೀಲಾಗಿದ್ದಾರೆ ಎನ್ನುವ ಬಗ್ಗೆ ಅನುಮಾನಗಳು ಮೂಡುತ್ತಿದೆ. ಪೊಲೀಸ್ ಇಲಾಖೆಗೂ ಈ ಬಗ್ಗೆ ತಿಳಿಸಲಾಗುವುದು. ಅಧಿಕಾರಿಗಳು ನಿಲ್ಲಿಸದೇ ಇದ್ದಲ್ಲಿ ರೈತರೇ ಮುಂದುವರಿದು ಗಣಿಯನ್ನು ನಿಲ್ಲಿಸುವ ಕಾರ್ಯ ಮಾಡಬೇಕಾಗುತ್ತದೆ ಎಂದು ಎಚ್ಚರಿಸಿದರು.
ಸ್ಥಳೀಯ ನಿವಾಸಿ ಶ್ರೀಪತಿ ಎ. ಮಾತನಾಡಿ 10 ವರ್ಷಗಳಿಂದ ಗಣಿಗಾರಿಕೆಯ ಕೆಲಸಗಳು ಆರಂಭವಾಗಿದೆ. ಸ್ಥಳೀಯರೆಲ್ಲರೂ ಸೇರಿಕೊಂಡು ದೊಡ್ಡ ಮಟ್ಟದಲ್ಲಿ ಹೋರಾಟವನ್ನೂ ನಡೆಸಿದ್ದರೂ, ಗಣಿ ಇಲಾಖೆ ಪರವಾನಿಗೆ ನೀಡಿತ್ತು ಎಂದು ತಿಳಿಸಿದರು.
ಹಿರಿಯ ಹೋರಾಟಗಾರ ಮುರುವ ಮಹಾಬಲ ಭಟ್ ಮಾತನಾಡಿ ಪಂಚಾಯಿತಿಯಲ್ಲಿ ಲೈಸನ್ಸ್ ರದ್ದು ಮಾಡಿದರೂ, ಗಣಿ ಇಲಾಖೆಯ ಪರವಾನಿಗೆ ಇದ್ದ ಹಿನ್ನೆಲೆಯಲ್ಲಿ ಕೆಲಸ ಕಾರ್ಯಗಳು ನಡೆಯುತ್ತಿತ್ತು. ಈ ಗಣಿ ಇಲಾಖೆಯೂ ನೀಡಿದ ಪರವಾನಿಗೆಯನ್ನು ರದ್ದುಗೊಳಿಸಿದೆ ಎಂದರು. ಅದನ್ನು ಮಾಡದೇ ಹೋದಲ್ಲಿ ಅ.2ರ ಒಳಗೆ ರೈತರ ಜತೆಗೆಯಾಗಿ ಆಂದೋಲನ ಆಯೋಜಿಸಲಾಗುವುದು ಎಂದು ತಿಳಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಸ್ಥಳೀಯರಾದ ಎ. ರಾಜೇಶ್, ಅಯ್ಯಪ್ಪ ಮೂಲ್ಯ, ರಾಧಾಕೃಷ್ಣ ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.







