ಬಳಕೆಯಲ್ಲಿರುವ ಪದವೊಂದು ಹೇಗೆ ನೋಡನೋಡುತ್ತಿರುವಾಗಲೇ ಕಣ್ಮರೆಯಾಗಿ ಸಾವನ್ನಪ್ಪುತ್ತದೆ ಎಂಬುವುದು ಒಂದು ವಿಸ್ಮಯಕರವಾದ ವಿದ್ಯಮಾನ. ಮನುಷ್ಯರಂತೆ ಪದಗಳಿಗೂ ಹುಟ್ಟು ಸಾವುಗಳಿವೆ ಎಂದರೆ ಅದರಲ್ಲಿ ಆಶ್ಚರ್ಯವೇನಿಲ್ಲ. ಈವರೆಗೆ ಸಾವನ್ನಪ್ಪಿರುವ ಭಾಷೆಗಳಲ್ಲಿರುವ ಎಷ್ಟೋ ಪದಗಳು ಅದಕ್ಕೂ ತುಂಬಾ ಮೊದಲೇ ಸಾಯಲು ಪ್ರಾರಂಭಿಸಿರಬಹುದು. ನನ್ನ ಬಾಲ್ಯದಲ್ಲಿ ಬ್ರಾಹ್ಮಣ ತುಳು ಮಾತಾಡುವ ಒಂದು ಸೀಮಿತ ಪ್ರದೇಶದಲ್ಲಿ ‘ಇಲಾತಿಕುಡು’ ಹಾಗೂ ‘ಇಲಾತಿ ಕಂಡೆ’ ಎಂಬ ಎರಡು ಶಬ್ದಗಳು ಬಳಕೆಯಲ್ಲಿದ್ವು. ‘ಇಲಾತಿ’ ಎಂದರೆ ವಿಲಾಯತಿ ಎಂದೂ ‘ಕುಡು’ ಎಂದರೆ ಹುರುಳಿ ಎಂದೂ ಅರ್ಥ. ಹಾಗೆಯೇ ‘ಕಂಡೆ’ ಎಂದರೆ ಗೆಡ್ಡೆ ಎಂದೂ, ‘ಇಲಾತಿಕಂಡೆ’ ಎಂದರೆ  ‘ವಿದೇಶದ ಗೆಡ್ಡೆ’ ಎಂದು ಅರ್ಥವಾಗುತ್ತದೆ. ‘ವಿಲಾಯತಿಯ ಹುರುಳಿ’, ‘ವಿಲಾಯತಿಯ ಗೆಡ್ಡೆ’ , ‘ದೇಸೀ ಅಲ್ಲದ್ದು’, ‘ಪರದೇಶದ್ದು’ ಇತ್ಯಾದಿ ಒಟ್ಟಾಗಿ ನೋಡಿದಾಗ ಸಿಗುವ ಅರ್ಥಗಳು. ಅಂದರೆ ನಾವೀಗ ಬೀನ್ಸ್ ಎಂದು ಕರೆಯುವ ಅಚ್ಛ ಕನ್ನಡದಲ್ಲಿ ಹುರುಳಿಕಾಯಿ ಎನ್ನುವ ತರಕಾರಿಗೂ ಹಾಗೆಯೇ ಆಲೂಗೆಡ್ಡೆ, ಬಟಾಟೆ ಎಂದು ಜನಸಾಮಾನ್ಯರಿಗೆ ಪರಿಚಿತವಾಗಿರುವ ಗೆಡ್ಡೆಗೂ ಒಂದು ಭಾಷೆಯನ್ನು ಮಾತಾಡುವ ಸ್ಥಳೀಯ ಪಂಗಡ ಮಾಡಿಕೊಂಡ ಪರ್ಯಾಯ ಹೆಸರುಗಳು ಇವು. ಆದರೆ ನನ್ನ ಅಜ್ಜ ಅಜ್ಜಿಯ ತಲೆಮಾರಿನ ಅಂತ್ಯದ ಜತೆಗೆ ಈ ಎರಡು ಪದಗಳ ಅಂತ್ಯವೂ ಆಯಿತು. ಆ ನಂತರ ಅದರ ಬಳಕೆಯನ್ನು ನಾನು ಕೇಳಿಲ್ಲ. (ಎಲ್ಲಾದರು ಈ ಪದಗಳು ಬಳಕೆಯಲ್ಲಿದ್ದರೆ ದಯವಿಟ್ಟು ತಿಳಿಸಿ) ಕೆಲವು ಭಾಷಾ ವಿದ್ವಾಂಸರಲ್ಲಿ ಈ ಬಗ್ಗೆ ವಿಚಾರಿಸಿದರೆ ತಿಳಿಯಬಹುದೇನೋ ಎಂದು ಪ್ರಯತ್ನಿಸಿದೆ. ಅಲ್ಲೂ ಅದರ ಬಗ್ಗೆ ಯಾವ ಮಾಹಿತಿಯೂ ದಕ್ಕಲಿಲ್ಲ. ಈ ಬದಲಾವಣೆಯಲ್ಲಿ ಮನುಷ್ಯನ ಸೌಲಭ್ಯಾಕಾಂಕ್ಷೆ ಅಥವಾ ಅನುಕೂಲಾಕಾಂಕ್ಷೆ ಕೆಲಸ ಮಾಡಿರಬಹುದು. ಅಂದರೆ ‘ಇಲಾತಿಕುಡು’ ಹಾಗೂ ‘ಇಲಾತಿಕಂಡೆ’ ಎನ್ನುವ ಐದು ಅಕ್ಷರಗಳ ಪದಗಳಿಗೆ ಬದಲಾಗಿ ಬೀನ್ಸ್, ಬಟಾಟೆ ಅಥವಾ ಆಲೂ ಎನ್ನುವ ಎರಡು ಅಥವಾ ಮೂರು ಅಕ್ಷರಗಳ ಪದಗಳನ್ನು ಉಚ್ಛರಿಸುವುದು ಸುಲಭವೂ ಹೌದು; ಹಾಗೆಯೇ ಉಚ್ಛರಿಸಲು ಬೇಕಾಗುವ ಸಮಯವೂ ಕಡಿಮೆ ಸಾಕಾಗುವುದರಿಂದ ಈ ಬದಲಾವಣೆ ಆಗಿರಬಹುದು. ಅಷ್ಟೇ ಅಲ್ಲ ಇಂಗ್ಲೀಶ್ ಎನ್ನುವುದು ನಮ್ಮನ್ನು ಆಳಿದವರ ಭಾಷೆ ಎಂಬ ಮೇಲರಿಮೆ ಇರುವುದರಿಂದಲೂ ಇದು ಆಗಿರಬಹುದು. ಹಾಗೆ ನೋಡಿದರೆ ಆಲೂಗೆಡ್ಡೆಗೆ ದಕ್ಷಿಣ ಕನ್ನಡದಲ್ಲಿ ಬಳಕೆಯಲ್ಲಿರುವ ಬಟಾಟೆ ಎಂಬುದು ಇಂಗ್ಲಿಶಿನ ಪೊಟೆಟೋ ಪದದ  ಅಪಭ್ರಂಶ ರೂಪವೇ ಆಗಿದೆ. 

         ಇದೇ ತುಳು ಭಾಷಾ ಪಂಗಡದಲ್ಲಿ ‘ಬೋಸಿ’ ಎನ್ನುವ ಇನ್ನೊಂದು ಪದ ಬಳಕೆಯಲ್ಲಿದೆ.  ಸಾಂಬಾರು, ಸಾರು ತಯಾರಿಸುವಂಥ ರೀತಿಯ ಪಾತ್ರೆಗೆ ಅಲ್ಲಿ ಈ ಪದ ಬಳಕೆಯಾಗುತ್ತಿದೆ. ಇದು ಹಳೆ ಮೈಸೂರು ಪ್ರಾಂತದ ಕನ್ನಡದಲ್ಲಿಯೂ ಬಳಕೆಯಲ್ಲಿರುವಂತಹ ಪದ. ‘ಬೋಸಿ’ ಎಂದರೆ ಅಗಲವಾದ ಬಾಯುಳ್ಳ ಲೋಹದ ಪಾತ್ರೆ ಎಂದು ನಿಘಂಟುಕಾರರು ಕೊಡುವ ವಿವರಣೆ. ಇದು ಇಂಗ್ಲಿಶಿನ ‘ಬೇಸಿನ್’ನಿಂದ ಬಂದದ್ದು ಎಂದು ಜಿ. ವೆಂಕಟಸುಬ್ಬಯ್ಯನವರು ತಮ್ಮ ‘ಇಗೋ ಕನ್ನಡದಲ್ಲಿ’ ಹೇಳುತ್ತಾರೆ. ಬ್ರಾಹ್ಮಣ ತುಳುವಿಗೆ ಇದು ಹಳೆಯ ಮೈಸೂರಿನ ಕನ್ನಡದಿಂದಲೇ  ಬಂದಿರಬಹುದು ಎಂದು ಊಹಿಸಬಹುದು. ಇನ್ನೂ ತಮಾಶೆಯ ವಿಷಯವೆಂದರೆ ಇಂಗ್ಲಿಶಿಗೆ ಇದು ಫ್ರೆಂಚ್ ಭಾಷೆಯಿಂದ ಬಂದಿದೆ ಎಂಬುದು. ಫ್ರೆಂಚ್ ಭಾಷೆಗೆ ಎಲ್ಲಿಂದ ಬಂತು? ಎಂದು ಕೇಳಿದರೆ ಪೋರ್ಚುಗೀಸ್ ಭಾಷೆಯಲ್ಲಿ ‘ಬಸಿಯ’ ಎಂಬ ಇದೇ ಅರ್ಥ ಕೊಡುವ ಶಬ್ದವಿದೆ. ಅಲ್ಲಿಂದ ಬಂದಿದ್ದರೂ ಬಂದಿರಬಹುದು ಎಂಬುದು ‘ಇಗೋ ಕನ್ನಡಕಾರರ’ ಅಭಿಪ್ರಾಯ. ಪೋರ್ಚುಗೀಸ್ ಭಾಷೆಗೆ ಎಲ್ಲಿಂದ…..? ಇದಕ್ಕೆ ಉತ್ತರ ಸದ್ಯಕ್ಕೆ ಗೊತ್ತಿಲ್ಲ. ಆದರೂ ಕೊಂಕಣ ಸುತ್ತಿ ಮೈಲಾರ ಎಂಬಂತೆ ಹಿಂದಿಯಲ್ಲೂ’ಬಾಸನ್’ ಎಂಬ ಪದವಿದೆ. ಇದರ ಅರ್ಥವೂ ‘ಅಗಲವಾದ ಬಾಯುಳ್ಳ ಪಾತ್ರೆ’ ಎಂದು!! 

               ಬೇರೆ ಭಾಷೆಗಳಿಂದ ನಾವು ಈ ರೀತಿ ತೆಗೆದುಕೊಂಡ ಪದಗಳನ್ನು ಎರವಲು ಪದಗಳು (ಲೋನ್ ವರ್ಡ್ಸ್) ಎಂದು ಭಾಷಾ ವಿಜ್ಞಾನದಲ್ಲಿ ಗುರುತಿಸುತ್ತಾರೆ. ಎಲ್ಲಾ ಭಾಷೆಗಳಲ್ಲೂ ಈ ಎರವಲು ಪದಗಳಿರುತ್ತವೆ. ಕನ್ನಡ ಅನೇಕ ಬಾಷೆಗಳಿಂದ ಈ ರೀತಿ ಎರವಲು ಪದಗಳನ್ನು ತೆಗೆದುಕೊಂಡಿದೆ. ಯಾವುದೇ ಭಾಷೆಯಾದರೂ ಕಾಲಕ್ರಮೇಣ ಇಂಥಾ ಎರವಲು ಪದಗಳನ್ನು ತನ್ನದನ್ನಾಗಿ ಮಾಡಿಕೊಳ್ಳುತ್ತದೆ. ಉದಾಹರಣೆಗೆ ಕನ್ನಡದಲ್ಲಿ ‘ಎಫ್’ ಹಾಗೂ ‘ಝೆಡ್’ ಸ್ವರಗಳು ಇಲ್ಲ. ಇಂಗ್ಲಿಶ್ ನಿಂದ ಬಂದ ‘ಎಫ್’ ‘ಝೆಡ್’ ಸ್ವರಗಳನ್ನು ಕನ್ನಡ ‘ಫ’, ‘ಜ’ ಆಗಿ ಮಾರ್ಪಡಿಸಿ ಉಚ್ಛರಿಸುತ್ತದೆ. ಫಾದರ್ ಎಂಬುದು ಪಾದ್ರಿ ಆಗಿಯೂ, ಝೂ ಎನ್ನುವ ಇಂಗ್ಲಿಶಿನ ಮೃಗಾಲಯವನ್ನು ಜೂ ಆಗಿಯೂ ಉಚ್ಛರಿಸಲಾಗುತ್ತದೆ. ಎಲ್ಲಾ ಭಾಷೆಗಳ ಧ್ವನಿಗಳನ್ನು ಲಿಪಿಯಲ್ಲಿ ಗುರುತಿಸಲು   ಅನುಕೂಲವಾಗಲು ಭಾಷಾ ಶಾಸ್ತ್ರಜ್ಞರು ‘ಅಂತಾರಾಷ್ಟ್ರೀಯ ಧ್ವನಿ ಲಿಪಿ’ (‘ಐಪಿಎ’) ಅಂದರೆ ‘ಇಂಟರ್ ನ್ಯಾಶನಲ್ ಫೋನೆಟಿಕ್ ಅಲ್ಫಾಬೆಟ್’ ನ್ನು ಬಳಸುತ್ತಾರೆ. ಇದು ಪ್ರಪಂಚದಾದ್ಯಂತ ಇರುವ ಭಾಷೆಗಳ ಎಲ್ಲಾ ಧ್ವನಿಗಳನ್ನೂ ಒಳಗೊಂಡಿದೆ.

       ಗಣಕಯಂತ್ರ ಬಂದ ಪ್ರಾರಂಭದಲ್ಲಿ ಅದರ ಎಲ್ಲಾ ಬಿಡಿಭಾಗಗಳಿಗೂ ಕನ್ನಡದ ಹೆಸರನ್ನು ಕೊಡಲಾಯಿತು. ಕೀಬೋರ್ಡಿಗೆ ಕೀಲಿಮಣೆ ಎಂಬ ಸುಂದರ ಹೆಸರೂ ಬಂತು. ಆದರೆ ಇವು ಯಾವುವೂ ಆಡು ಮಾತಿನಲ್ಲಿ ನಿಲ್ಲಲೇ ಇಲ್ಲ. ಬರವಣಿಗೆಯಲ್ಲಿ ಮಾತ್ರ ಬಳಕೆಯಲ್ಲಿವೆ. ಹಾಗೆಯೇ ನಾನು ಇತ್ತೀಚೆಗೆ ಕೇಳಿದ ಒಂದು ವಿಷಯವೆಂದರೆ ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಚೀಫ್ ಎಕ್ಸಿಕ್ಯುಟಿವ್ , ಜೂನಿಯರ್ ಇಂಜಿನಿಯರ್, ಜನರಲ್ ಮೇನೇಜರ್ ಮುಂತಾದ ಪದಗಳಿಗೆ ಕನ್ನಡದ ಹೆಸರನ್ನು ಬರೆಯಿರಿ ಎಂಬ ಒಂದು ಪ್ರಶ್ನೆ ಇರುತ್ತದೆ ಎಂದು. ಇದರರ್ಥ ನಾವು ಇಂಗ್ಲಿಶ್ ಪದಗಳನ್ನೇ ಹೆಚ್ಚಾಗಿ ಬಳಸಿ ಕನ್ನಡದ ರೂಪಗಳ ಬಗ್ಗೆ ಅವಜ್ಞೆ ಹೊಂದಿದ್ದೇವೆ ಎಂದಲ್ಲವೇ? ಇಂಗ್ಲಿಶಿನ ಬಸ್, ಕಾರ್, ವೈರಸ್… ಮುಂತಾದ ಪದಗಳಿಗೆ ಕನ್ನಡ ತನ್ನ ಜಾಯಮಾನದಂತೆ  ಕೊನೆಯಲ್ಲಿ ಸ್ವರವನ್ನು ಸೇರಿಸಿ ಬಸ್ಸು, ಕಾರು, ವೈರಸ್ಸು… ಎಂದು ತನ್ನದೇ ಪದಗಳನ್ನಾಗಿ ಮಾಡಿಕೊಂಡಿದೆ.

       ಭಾಷೆ ನಿಂತ ನೀರಲ್ಲ; ಅದು ಸದಾ ಚಲಿಸುತ್ತಿರುವ ನದಿಯಂತೆ. ಪದಗಳು ಬಂದು ಸೇರುವುದು… ಮಧ್ಯದಲ್ಲಿ ಕೆಲವು ಕಳಚಿಕೊಳ್ಳುವುದು…ಇವೆಲ್ಲ ಪ್ರಕ್ರಿಯೆಗಳು ಈ ಚಲನೆಯಲ್ಲಿ ನಡೆದೇ ತೀರುತ್ತವೆ.  ಘೋಷಣೆಗಳಿಂದ ಬಾಷೆಯನ್ನು ಉಳಿಸಲು ಸಾಧ್ಯವಿಲ್ಲ. ಕಾಲದೊಂದಿಗೆ ಹೋರಾಡುತ್ತಾ ಅದು ಉಳಿಯಬೇಕು ಅಷ್ಟೆ.

                                                     *******

                                                                         

 *-ರೇಶ್ಮಾ ಭಟ್.

 

LEAVE A REPLY

 Click this button or press Ctrl+G to toggle between Kannada and English

Please enter your comment!
Please enter your name here