


ವಿಟ್ಲ: ರೈತರನ್ನು ವಂಚಿಸುವ ಉದ್ದೇಶದಿಂದ ರಾಜಕೀಯ ಪಕ್ಷಗಳು ತಮ್ಮ ಅಜಂಡಾವನ್ನು ಬದಲಾಯಿಸಿಕೊಂಡಿವೆ. ವಿಧಾನ ಸಭೆಯನ್ನು ಸೇವನೆ ಮಾಡುವ ಜನರೇ ಅಲ್ಲಿ ತುಂಬುತ್ತಿದ್ದು, ಸೇವೆ ಎನ್ನುವುದು ಸದ್ಯ ವ್ಯವಹಾರವಾಗಿದೆ. ಚಳುವಳಿಗಳ ಮೂಲಕ ಇಂತಹ ಮೌಢ್ಯಗಳನ್ನು ದೇಶದಿಂದ ಹೊರ ತಳ್ಳಬೇಕಾಗಿದೆ ಎಂದು ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ರಾಜ್ಯಾಧ್ಯಕ್ಷ ಕೋಡಿಹಳ್ಳಿ ಚಂದ್ರಶೇಖರ್ ಹೇಳಿದರು.
ಅವರು ಮಂಗಳವಾರ ವಿಟ್ಲ ಕೇಂದ್ರೀಯ ಅಡಕೆ ಸಂಶೋಧನಾ ಕೇಂದ್ರದ ಸಮೀಪದ ಮಂಗಳ ಮಂಟಪದಲ್ಲಿ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ವತಿಯಿಂದ ನಡೆದ ರಾಜ್ಯಮಟ್ಟದ ಅಧ್ಯಯನ ಶಿಬಿರದ ಅಧ್ಯಕ್ಷತೆ ವಹಿಸಿದ ಮಾತನಾಡಿದರು. ಗಿಡಮರಗಳ ನಡುವೆ ಬೆಳೆದ ಕೃಷಿಕರು ಬೆಳೆ ಕಳೆದುಕೊಂಡು ಜೀವನ ನಡೆಸಲಾಗುವುದಿಲ್ಲ ಎಂದು ಆತ್ಮಹತ್ಯೆ ಮಾಡಿದಾಗ ಮೌನವಾಗಿದ್ದವರು, ಬ್ರಷ್ಟರನ್ನು ಬೆಂಬಲಿಸಿ ಹೋರಾಟಕ್ಕೆ ಇಳಿಯುವವರಿಗೆ ಮಾನ ಮರ್ಯಾದೆ ಇಲ್ಲ ಎಂದು ತಿಳಿಸಿದರು.
ಗಿಡ ನೆಡುವ ಮೂಲಕ ಉದ್ಘಾಟಿಸಿದ ವಿಟ್ಲ ಸಿಪಿಸಿಆರ್ಐ ನಿರ್ದೇಶಕ ಡಾ. ಸಿ. ಟಿ. ಜೋಷ್ ಮಾತನಾಡಿ ಕೃಷಿಕರ ಬೇಡಿಕೆಗಳನ್ನು ಸರ್ಕಾರಕ್ಕೆ ತಲುಪಿಸಲು ಹಾಗೂ ಗ್ರಾಮೀಣ ಮಟ್ಟದ ರೈತರಿಗೆ ಯೋಜನೆಗಳನ್ನು ತಲುಪಿಸಲು ರೈತ ಸಂಘಟನೆಗಳು ಅತ್ಯಗತ್ಯ. ರೈತರ ಹಕ್ಕು ಮತ್ತು ಜವಾಬ್ದಾರಿಗಳನ್ನು ತಿಳಿಸಲು ಶಿಬಿರಗಳು ಸಹಕಾರಿ. ಗ್ರಾಮದ ಅಭಿವೃದ್ಧಿಯಿಂದ ದೇಶದ ಅಭಿವೃದ್ಧಿ ಸಾಧ್ಯ ಎಂದು ಹೇಳಿದರು.
ಕೃಷಿ ಆರ್ಥಿಕ ತಜ್ಞ ಡಾ. ವಿಘ್ನೇಶ್ವರ ವರ್ಮುಡಿ, ಹಸಿರು ಸೇನೆ ರಾಜ್ಯ ಗೌರವಾಧ್ಯಕ್ಷ ಹೆಚ್. ಆರ್. ಬಸವರಾಜಪ್ಪ, ಅಖಿಲ ಭಾರತ ಅಡಿಕೆ ಬೆಳೆಗಾರರ ಸಂಘದ ಸ್ಥಾಪಕಾಧ್ಯಕ್ಷ ಡಾ. ಪಿ. ಕೆ. ಎಸ್. ಭಟ್ ಮಾತನಾಡಿದರು.
ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಜಿಲ್ಲಾಧ್ಯಕ್ಷ ಶ್ರೀಧರ ಶೆಟ್ಟಿ ಬೈಲುಗುತ್ತು ಮಾತನಾಡಿದರು. ರೈತ ವಿಜ್ಞಾನಿ ಬದನಾಜೆ ಶಂಕರ ಭಟ್ ಅವರನ್ನು ಸಂಘದ ಕಡೆಯಿಂದ ಸನ್ಮಾನಿಸಲಾಯಿತು.
ಪ್ರಗತಿಪರ ಚಿಂತಕ ಡಾ. ರಂಜಾನ್ ದರ್ಗಾ, ಮಂಗಳೂರು ವಿವಿ ನೆಹರು ಚಿಂತನ ಕೇಂದ್ರ ಪ್ರಬಾರ ನಿರ್ದೇಶಕ ಪ್ರೊ. ರಾಜರಾಮ್ ತೋಳ್ಪಾಡಿ, ಜಿಲ್ಲಾ ಗೌರವಾಧ್ಯಕ್ಷ ಧನಕೀರ್ತಿ ಬಲಿಪ, ಜಿಲ್ಲಾ ಸಂಘಟನಾ ಕಾರ್ಯದರ್ಶಿ ಮಹೋಹರ ಶೆಟ್ಟಿ ಮತ್ತಿತರರು ಉಪಸ್ಥಿತರಿದ್ದರು.
ರಾಜ್ಯ ಕಾರ್ಯದರ್ಶಿ ಸಿ. ಕುಮಾರ ಸುಬ್ರಹ್ಮಣ್ಯ ಶಾಸ್ತ್ರಿ ಸನ್ಮಾನ ಪತ್ರ ವಾಚಿಸಿದರು. ರಾಜ್ಯ ಪ್ರಧಾನ ಕಾರ್ಯದರ್ಶಿ ಅಬ್ಬಾನಿ ಶಿವಪ್ಪ ಕಾರ್ಯಕ್ರಮ ನಿರೂಪಿಸಿದರು.







