

ವಿಟ್ಲ: ರೈತರ ಕಲ್ಯಾಣ ನಿಧಿಯ ಮೂಲಕ ಸಂಕಷ್ಟಕ್ಕೆ ಒಳಗಾದ ರೈತರಿಗೆ ನೆರವು ನೀಡುವ ಯೋಜನೆ ಮುಂದಿನ ದಿನಗಳಲ್ಲಿ ಹಾಕಿಕೊಳ್ಳಲಾಗಿದೆ. ನೆರೆ ಪರಿಹಾರ ನಿಧಿಗೆ ೧೦ ಸಾವಿರ ರೂ. ಈಗಾಗಲೇ ಡಿಸಿಸಿ ಬ್ಯಾಂಕ್ ಮೂಲಕ ನೀಡಲಾಗಿದೆ. ಸದಸ್ಯರ ಬೇಡಿಕೆಯಂತೆ ಶೇ.11 ಡಿವಿಡೆಂಟ್ ನೀಡಲಾಗುವುದು ಎಂದು ವಿಟ್ಲ ವ್ಯವಸಾಯ ಸೇವಾ ಸಹಕಾರಿ ಸಂಘದ ಅದ್ಯಕ್ಷ ಎಂ. ಕೆ. ಪುರುಷೋತ್ತಮ ಭಟ್ ಹೇಳಿದರು.
ಅವರು ಪೊನ್ನೊಟ್ಟು ಬ್ರಹ್ಮಶ್ರೀ ನಾರಾಯಣ ಗುರು ಸಮುದಾಯ ಭವನದಲ್ಲಿ ನಡೆದ ವಿಟ್ಲ ವ್ಯವಸಾಯ ಸೇವಾ ಸಹಕಾರಿ ಸಂಘ ನಿಯಮಿತ ವಾರ್ಷಿಕ ಮಹಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.
2018-19ನೇ ಸಾಲಿನಲ್ಲಿ 124.74 ಕೋಟಿ ರೂ.ಗೂ ಮಿಕ್ಕಿ ವ್ಯವಹಾರ ನಡೆಸಿದ್ದು, ಸುಮಾರು 45.78 ಲಕ್ಷ ರೂ. ನಿವ್ವಳ ಲಾಭ ಗಳಿಸಿದೆ. 127 ಮಂದಿ ಸದಸ್ಯರಾಗಿ ಸೇರ್ಪಡೆಯಾಗಿದ್ದು, 25.70ಲಕ್ಷ ರೂ. ಪಾಲು ಬಂಡವಾಳ ಜಮೆಯಾಗಿದೆ. ಒಟ್ಟು ಠೇವಣಾತಿಯಲ್ಲಿ ಶೇ.8.02 ಹೆಚ್ಚಳವಾಗಿದೆ ಎಂದು ತಿಳಿಸಿದರು.
ಸದಸ್ಯ ಬೆಳೆಗಾರರ ಎಸ್ಸೆಸ್ಸೆಲ್ಸಿ ಹಾಗೂ ಪಿಯುಸಿಯಲ್ಲಿ ವಿಶೇಷ ಸಾಧನೆ ಮಾಡಿದ ಮಕ್ಕಳಿಗೆ ಪ್ರತಿಭಾ ಪುರಸ್ಕಾರ ನೀಡುವ ಕಾರ್ಯಕ್ರಮ ನಡೆಯಿತು.
ಉಪಾಧ್ಯಕ್ಷ ದಯಾನಂದ ಶೆಟ್ಟಿ ಉಜಿರೆಮಾರ್, ನಿರ್ದೇಶಕರಾದ ಜೋನ್ ಡಿಸೋಜಾ, ನರ್ಸಪ್ಪ ಪೂಜಾರಿ, ಉದಯಕುಮಾರ್, ಲೋಕನಾಥ ಶೆಟ್ಟಿ, ಅಚ್ಚುತ ನಾಯಕ್, ಶಿವಪ್ಪ ನಾಯ್ಕ, ಗೌರಿ ಎಸ್.ಎನ್ ಭಟ್, ರೇವತಿ, ಮುಖ್ಯ ಕಾರ್ಯನಿರ್ವಹಣಾಧಿಕಾರಿ ಶಶಿಕಲಾ ಕೆ.ಪಿ ಉಪಸ್ಥಿತರಿದ್ದರು.







