ಬಂಟ್ವಾಳ, ಸೆ. ೨೩: ಪಂಚಾಯತ್‌ರಾಜ್ ಕಾಯಿದೆಯಡಿ ಸರಕಾರವೇ ಸೂಚಿಸಿದಂತೆ ಗ್ರಾಮ ಮಟ್ಟದ ಅನುಷ್ಠಾನಗೊಂಡಿರುವ ವಿವಿಧ ಅಭಿವೃದ್ಧಿ ಕಾರ್ಯಗಳು, ಜನರ ಸಮಸ್ಯೆಗಳ ಕುರಿತಾಗಿ ಆಲಿಸಲು ಹಾಗೂ ಅದಕ್ಕೆ ಪರಿಹಾರೋಪಾಯ ಕಂಡುಕೊಳ್ಳಲು ಈ ಸಭೆಯನ್ನು ಆಯೋಜಿಸಲಾಗಿದೆ. ಈ ಸಂಬಂಧ ಎಲ್ಲ ಇಲಾಖಾ ಅಧಿಕಾರಿಗಳಿಗೆ ಪಂಚಾಯತ್‌ನಿಂದಲೇ ನೋಟಿಸ್ ರವಾನಿಸುವುದರ ಜೊತೆಗೆ ದೂರವಾಣಿ ಕರೆ ಮಾಡಿ ಆಹ್ವಾನಿಸಿದ್ದರೂ ಕೇವಲ ೯ ಇಲಾಖಾ ಅಧಿಕಾರಿಗಳು ಹಾಜರಾಗಿದ್ದಾರೆ ಎಂದು ಗ್ರಾಪಂ ಅಧ್ಯಕ್ಷ ಮುಹಮ್ಮದ್ ನಾಸಿರ್ ಸಜೀಪ ಅಸಮಧಾನ ವ್ಯಕ್ತಪಡಿಸಿದರು.


ಬಂಟ್ವಾಳ ತಾಲೂಕಿನಲ್ಲಿ ಇದೇ ಮೊದಲ ಬಾರಿಗೆ ಸಜಿಪನಡು ಗ್ರಾಮ ಪಂಚಾಯತ್‌ನ ಗ್ರಾಮ ಮಟ್ಟದ ಅಭಿವೃದ್ಧಿ ಕಾರ್ಯಕ್ರಮಗಳ (೨೦ ಅಂಶ ಕಾರ್ಯಕ್ರಮ) ಸೇರಿದಂತೆ ಮೊದಲ ಕೆಡಿಪಿ ಸಭೆಗೆ ಪ್ರಮುಖ ಇಲಾಖೆಗಳು ಗೈರು ಹಾಜರಿಯ ಬಗ್ಗೆ ಅಧ್ಯಕ್ಷ ಮುಹಮ್ಮದ್ ನಾಸೀರ್ ಸಜಿಪ ಅಸಮಧಾನ ವ್ಯಕ್ತಪಡಿಸಿ, ಗೈರು ಹಾಜರಾದ ಅಧಿಕಾರಿಗಳ ವಿರುದ್ಧ ಮೇಲಾಧಿಕಾರಿಗಳಿಗೆ ಪತ್ರ ಬರೆಯುವಂತೆ ಪಿಡಿಒ ಅವರಿಗೆ ಸೂಚಿಸಿದರು.
ಸೋಮವಾರ ಸಜಿಪನಡು ಗ್ರಾಮ ಪಂಚಾಯತ್‌ನ ಕಚೇರಿ ಸಭಾಂಗಣದಲ್ಲಿ ನಡೆದ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿ, ಗ್ರಾಮ ಪಂಚಾಯತ್ ಸ್ಥಳೀಯವಾಗಿ ಸರಕಾರ ಇದ್ದಂತೆ, ಅಧಿಕಾರಿಗಳು ಗ್ರಾಪಂಯನ್ನು ನಿರ್ಲಕ್ಷ ಸಲ್ಲದು. ಸರಕಾರ ವಿವಿಧ ಯೋಜನೆ, ಸವಲತ್ತುಗಳ ಬಗ್ಗೆ ಗ್ರಾಪಂ ಹಾಗೂ ಜನರಿಗೆ ಮಾಹಿತಿ ನೀಡುವುದು ಅಧಿಕಾರಿಗಳ ಕರ್ತವ್ಯವಾಗಿದೆ ಎಂದು ತಿಳಿಸಿದರು.
ರಾಷ್ಟ್ರೀಯ ಉದ್ಯೋಗ ಖಾತರಿ ಯೋಜನೆಯಲ್ಲಿ ಒಟ್ಟು ೧೭ ಕಾಮಗಾರಿಗಳ ಪೈಕಿ ೧೩ ಕಾಮಗಾರಿಗಳು ಪೂರ್ಣಗೊಂಡಿದ್ದು, ಉಳಿದವು ಕಾಮಗಾರಿಗಳು ಪ್ರಗತಿಯಲ್ಲಿವೆ. ಕೇಂದ್ರ ಸರಕಾರದ ೧೪ನೇ ಹಣಕಾಸು ಯೋಜನೆಯಡಿ ೨೪ ಕಾಮಗಾರಿಗಳ ಪೈಕಿ ೬ ಪೂರ್ಣಗೊಂಡಿದೆ. ವಸತಿ ಯೋಜನೆಯಡಿ ೮ ಮನೆಗಳ ಪೈಕಿ ೬ ಮನೆಗಳನ್ನು ಪೂರ್ಣಗೊಳಿಸಿದ್ದು, ೨ ಪ್ರಗತಿಯಲ್ಲಿವೆ ಎಂದು ಅಧ್ಯಕ್ಷ ಮುಹಮ್ಮದ್ ನಾಸಿರ್ ಸಭೆಗೆ ಮಾಹಿತಿ ನೀಡಿದರು.
ಇದೇ ವೇಳೆ ಗ್ರಾಮಕರಣಿಕ ಪ್ರಕಾಶ್ ಅವರು ಕಂದಾಯ ಇಲಾಖೆಗೆ ಸಂಬಂಧಿಸಿ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಇತ್ತೀಚೆಗೆ ಸಂಭವಿಸಿದ ನೆರೆ ಹಾನಿಯಿಂದ ೨೭ ಸಂತ್ರಸ್ತರಿಗೆ ಪರಿಹಾರ ನೀಡಲಾಗಿದ್ದು, ೪ ಸಂತ್ರಸ್ತರ ಅರ್ಜಿಗಳು ವಿಲೇವಾರಿ ಬಾಕಿಯಿದ್ದು, ಈ ಬಗ್ಗೆ ತಹಶೀಲ್ದಾರ್ ಅವರಿಗೆ ವರದಿ ನೀಡಲಾಗಿದೆ. ಬೆಳೆ ನಷ್ಟಕ್ಕೆ ಸಂಬಂಧಿಸಿ ಸರಕಾರವೇ ನೇಮಕಾತಿಗೊಳಿಸಿದ ಅಧಿಕಾರಿಗಳ ತಂಡ ಸಮೀಕ್ಷೆ ಕಾರ್ಯ ನಡೆಸುತ್ತಿದೆ. ಈ ಸಂದರ್ಭದಲ್ಲಿ ಸಂತ್ರಸ್ತರು ಸಮೀಕ್ಷಾ ತಂಡಕ್ಕೆ ಪೂರ್ಣ ವಿವರ ನೀಡುವ ನಿಟ್ಟಿನಲ್ಲಿ ಪಂಚಾಯತ್ ಸಂಬಂಧಿಸಿದವರಿಗೆ ಸೂಚನೆ ನೀಡುವಂತೆ ಮನವಿ ಮಾಡಿದರು. ಬಂಟ್ವಾಳ ತಾಲೂಕಿನಲ್ಲಿ ಕೃಷಿ ದಾಸ್ತಾನು ಕೊಠಡಿಯಿಲ್ಲ ಎಂದು ಅಧ್ಯಕ್ಷ ನಾಸಿರ್ ಅವರ ಪ್ರಶ್ನೆಗೆ ಕೃಷಿ ಅಧಿಕಾರಿ ನೀಡಿದರು.
ಶೈಕ್ಷಣಿಕವಾಗಿ ಅರ್ಧವಾರ್ಷಿಕವಾದರೂ ವಿದ್ಯಾರ್ಥಿಗಳಿಗೆ ಸಮವಸ್ತ್ರ, ಶೂ, ಸಾಕ್ಸ್ ವಿತರಣೆಯಾದಾಗ ಬಗ್ಗೆ ಅಧ್ಯಕ್ಷರು ಅತೃಪ್ತಿ ವ್ಯಕ್ತಪಡಿಸಿ, ಮುಂದಿನ ವರ್ಷ ನೀಡುವಂತೆ ಗರಂ ಆದರು. ಪ್ರಾಥಮಿಕ ಶಾಲಾ ಮುಖ್ಯಶಿಕ್ಷಕಿ ಅವರು ಸೈಕಲ್ ವಿತರಣೆಯ ವೇಳೆ ಗುಣಮಟ್ಟವನ್ನು ಪರಿಶೀಲಿಸುವಂತೆ ಸೂಚಿಸಿದರು.
ಸಭೆಯಲ್ಲಿ ಹಾಜರಿದ್ದ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ, ಗ್ರಂಥಾಲಯ, ಮೆಸ್ಕಾಂ, ಪಶುಸಂಗೋಪಣೆ ಇಲಾಖಾ ಅಧಿಕಾರಿಗಳು ಇಲಾಖಾ ಅಭಿವೃದ್ಧಿ ಹಾಗೂ ಯೋಜನೆಗಳ ಬಗ್ಗೆ ಮಾಹಿತಿ ನೀಡಿದರು. ವೇದಿಕೆಯಲ್ಲಿ ಗ್ರಾಪಂ ಉಪಾಧ್ಯಕ್ಷತೆ ಸುನಿತಾ ಶಾಂತಿ ಮೋರೆಸ್ ಹಾಜರಿದ್ದರು. ಪಿಡಿಒ ಶಿವಗೊಂಡಪ್ಪ ಬಿರಾದಾರ್ ಸ್ವಾಗತಿಸಿ, ವಂದಿಸಿದರು. ಸಿಬ್ಬಂದಿ ಮುಝಮ್ಮಿಲ್ ಸಹಕರಿಸಿದರು.
ಸಜಿಪನಡು ಗ್ರಾಪಂ ಕೆಡಿಪಿ ಸಭೆಗೆ ಪಂಚಾಯತ್‌ನಿಂದ ಆಹ್ವಾನಿಸಲಾದ ಇಲಾಖೆಗಳ ಪೈಕಿ ತೋಟಗಾರಿಕೆ, ಸಾಮಾಜಿಕ ಅರಣ್ಯ, ಮೀನುಗಾರಿಕೆ, ಪಂಚಾಯತ್ ರಾಜ್ ಇಂಜಿನಿಯರಿಂಗ್ ಇಲಾಖೆ, ಆಹಾರ ನಾಗರಿಕ ಸರಬರಾಜು ಪೂರೈಕಾ ಇಲಾಖೆ, ಸಣ್ಣ ನಿರಾವರಿ ಇಲಾಖೆ, ಸಮಾಜ ಕಲ್ಯಾಣ, ಪ್ರವಾಸೋದ್ಯಮ ಇಲಾಖೆಗಳು ಗೈರು ಹಾಜರಾಗಿದ್ದವು.

LEAVE A REPLY

 Click this button or press Ctrl+G to toggle between Kannada and English

Please enter your comment!
Please enter your name here