


ಪುತ್ತೂರು: ಮಿತಿಯ ಶಕ್ತಿಯನ್ನು ಗಾಂಧೀಜಿಯಂತೆ ತೋರಿಸಿಕೊಟ್ಟವರು ಇನ್ನೊಬ್ಬರಿಲ್ಲ, ಸ್ವನಿಯಂತ್ರಣದಲ್ಲಿ ಗಾಂಧೀಜಿಗೆ ಗಾಂಧಿಯೇ ಸರಿ ಸಾಟಿ ಎಂದು ಹಿರಿಯ ಚಿಂತಕ ಲಕ್ಷ್ಮೀಶ ತೋಳ್ಪಾಡಿ ಹೇಳಿದರು.
ಬಹುವಚನಂ ನ ಆಶ್ರಯದಲ್ಲಿ ದರ್ಬೆ ವಿದ್ಯಾನಗರದ ಪದ್ಮಿನಿ ಸಭಾಂಗಣದಲ್ಲಿ ನಡೆದ ಗಾಂಧಿ-150 ರ
ದಲ್ಲಿ ಅವರು ವಿಶೇಷ ಉಪನ್ಯಾಸ ನೀಡಿದರು.
ಇನ್ನೊಬ್ಬರ ಜೊತೆಗೆ ಹೋಲಿಸಿಕೊಳ್ಳದೆ ತನ್ನ ಮಿತಿಯಲ್ಲಿರುವುದೇ ಜೀವನದ ಯಶಸ್ಸು ಎಂದು ಹೇಳಿಕೊಟ್ಟವರು ಗಾಂಧೀಜಿ ಎಂದ ಅವರು,ಯೋಚನೆಗೆ ನಿಲುಕದ, ಆಳವಾದ ಜೀವನ ಶೈಲಿ ಯನ್ನು ನಡೆಸಿದ ಗಾಂಧೀಜಿಯವರ ವ್ಯಕ್ತಿತ್ವ ವೇ ನಮಗೆ ಆದರ್ಶ ಎಂದರು.
1869 ಅಕ್ಟೋಬರ್ 2 ರಂದು ಮೋಹನದಾಸ ಕರಮಚಂದ ಗಾಂಧಿ ಹುಟ್ಟಿದರು, ಆದರೆ ಮಹಾತ್ಮಾಗಾಂಧೀಜಿ ಹುಟ್ಟಿದ್ದು 1893 ಜೂನ್ 6 ಎಂದು ವಿಶ್ಲೇಷಿಸಿದ ಅವರು, ಬಿಳಿಯನೊಬ್ಬನು ಕಪ್ಪುವರ್ಣದವನೆಂದು ಗಾಂಧೀಜಿಯನ್ನು ರೈಲಿನಿಂದ ಹೊರ ದಬ್ಬಿದ ಆ ಕ್ಷಣದಲ್ಲೇ, ಸುಧಾರಣೆಯ ಸಂಕಲ್ಪತೊಟ್ಟು ಗಾಂಧಿ ಹುಟ್ಟಿಕೊಂಡರು ಎಂದರು.
ಸತ್ಯದೊಂದಿಗಿನ ಮಾತುಕತೆಯೇ ನಿಜವಾದ ಶೋಧನೆ ಎಂದ ಅವರು, ವಿಜ್ಞಾನದ ಪ್ರಯೋಗಗಳೆಲ್ಲಾ ಮತ್ತೊಂದರ ಮೇಲೆಯೇ ನಡೆದರೆ, ಆಧ್ಯಾತ್ಮದ ಪ್ರಯೋಗಗಳೆಲ್ಲವೂ ತನ್ನ ಮೇಲೆಯೇ ನಡೆಯುತ್ತದೆ. ಇದನ್ನು ಜಗತ್ತಿಗೆ ತನ್ನ ಬದುಕಿನ ರೀತಿಯಲ್ಲೇ ಗಾಂಧೀಜಿ ತೋರಿಸಿಕೊಟ್ಟರು ಎಂದರು.
ತನ್ನ ಮೇಲಿನ ನಿಯಂತ್ರಣ ತನಗೆ ಇದ್ದರೆ, ಜಗತ್ತನ್ನೇ ಗೆಲ್ಲಬಹುದು.ತನ್ನನ್ನು ತಾನು ನಿಯಂತ್ರಣದ ಪ್ರಯೋಗಕ್ಕೆ ಒಡ್ಡಿಕೊಳ್ಳದೇ ಇದ್ದರೆ ,ಸ್ವಾತಂತ್ರ್ಯ ಸಿಕ್ಕರೂ ಪ್ರಯೋಜನವಿಲ್ಲ ಎಂದು ಗಾಂಧೀಜಿ ಅಂದೇ ಹೇಳಿದ್ದರು. ಅವರ ಮಾತುಗಳು ಇದೀಗ ಅಲ್ಲಲ್ಲಿ ಪ್ರತಿನಿಧಿಸುತ್ತಿದೆ ಎಂದರು.
ಗಾಂಧೀಜಿಯವರನ್ನು ಅಸಂಖ್ಯಾತ ಅನುಯಾಯಿಗಳು ಅನುಸರಿಸುತ್ತಿದ್ದರು, ಗಾಂಧೀಜಿ ಸ್ವತಃ ಮಾದರಿ ನಡವಳಿಕೆ ಹೊಂದಿದ್ದರಿಂದ ಅವರಿಗೆ ಅಸಂಖ್ಯಾತ ಅನುಯಾಯಿಗಳು
ಹುಟ್ಟಿಕೊಂಡಿದ್ದರು ಎಂದು ತೋಳ್ಪಾಡಿ ಹೇಳಿದರು. ತನ್ನ ಬದುಕಿನ ಅಂತಿಮ ಗಳಿಗೆಯವರೆಗೂ ತನ್ನನ್ನು ತಾನು ಪ್ರಯೋಗಕ್ಕೆ ಒಡ್ಡಿಕೊಂಡ ಗಾಂಧೀಜಿ ತಾನು ಮಹಾತ್ಮ ಎಂಬುದನ್ನು ಸಾಬೀತುಮಾಡಿ ತೋರಿಸಿದರು ಎಂದು ತೋಳ್ಪಾಡಿ ಹೇಳಿದರು.
ಪ್ರಿಯಂವದಾ ಪ್ರಾರ್ಥಿಸಿದರು. ಬಹುವಚನಂ ನ ಡಾ.ಶ್ರೀಶ ಕುಮಾರ್ ಸ್ವಾಗತಿಸಿ, ವಂದಿಸಿದರು. ರಂಗಕರ್ಮಿ ಐಕೆ ಬೊಳುವಾರು ಕಾರ್ಯಕ್ರಮ ನಿರೂಪಿಸಿದರು.







