ಯಾದವ ಕುಲಾಲ್
ಬಂಟ್ವಾಳ: ಒಂದು ವಿದ್ಯಾ ಸಂಸ್ಥೆ ಹುಟ್ಟು ಹಾಕಿ ಅದರ ರಜತ ವರ್ಷ ಪೂರೈಸುವ ಸಂತೋಷವಾಗುತ್ತಿದ್ದರೆ ಆದರೆ ಈ ವಿದ್ಯಾ ಸಂಸ್ಥೆಯು 25 ವರ್ಷ ಪೂರೈಸುವ ಹೆಸರಿಗೆ ಮಾತ್ರ ಖುಷಿ ಇದ್ದು ಅವ್ಯವಸ್ಥೆಯಿಂದ ತುಂಬಾ ಬೇಸರದಲ್ಲಿದೆ. ಇಲ್ಲಿ ಹೆಚ್ಚು ಸಮಸ್ಯೆಗಳೇ ಜಾಸ್ತಿ. ಮಳೆಗಾಲದಲ್ಲಿ ಮಳೆ ನೀರು ತರಗತಿಯೊಳಗೆ, ಕಿಟಕಿ ಬಾಗಿಲುಗಳು ಅದೇ ಹಳೆಯ ಕಾಲದ್ದು. ಯಾವುದೂ ಬಾಗಿಲು ಹಾಕಿಕೊಳ್ಳಕ್ಕಾಗುವುದಿಲ್ಲ. ಶೌಚಾಲಯದ ಕೊರತೆ, ದುರಸ್ತಿಯಲ್ಲಿರುವ ಮೂತ್ರಾಲಯ. ಕಂಪ್ಯೂಟರ್ ಘಟಕವಿಲ್ಲ, ಸರಿಯಾದ ಪೀಠೋಪಕರಣಗಳಿಲ್ಲ, ಬೋರ್‌ವೆಲ್ ಉಂಟು ಅದರ ಅಳವಡಿಕೆಗೆ ಪಂಪ್ ಹಾಗೂ ವಯರಿಂಗ್‌ಗೆ ಹಣಕಾಸಿನ ಕೊರತೆ. ಹೀಗೆ ಹಲವು ಸಮಸ್ಯೆಗಳನ್ನಿಟ್ಟುಕೊಂಡೇ ರಜತ ಸಂಭ್ರಮ ಆಚರಣೆ ಮಾಡುವ ಸ್ಥಿತಿ ಎದುರಾಗಿದೆ.
ತೀರಾ ಗ್ರಾಮೀಣ ಭಾಗದಲ್ಲಿದೆ ಈ ವಿದ್ಯಾ ಸಂಸ್ಥೆ : ಬಂಟ್ವಾಳ-ಬೆಳ್ತಂಗಡಿಯ ಗಡಿ ಭಾಗದಲ್ಲಿದೆ ಪಿಲಾತಬೆಟ್ಟು ಗ್ರಾಮದ ನೈನಾಡು ಊರು. ಇದು ತುಂಬಾ ಗ್ರಾಮೀಣ ಪ್ರದೇಶ.  ಇಲ್ಲಿರುವ ಸರಕಾರಿ ಪ್ರೌಢಶಾಲೆಗೆ ಈ 25 ವರ್ಷ ಪೂರ್ತಿಯಾಗುತ್ತದೆ. ಆದರೆ ರಜತ ವರ್ಷಾಚರಣೆಯ ಸಂಭ್ರಮ ಮಾತ್ರ ಎಲ್ಲಿಯೂ ಕಾಣಸಿಗುವುದಿಲ್ಲ. ಯಾಕೆಂದರೆ ಈ ಶಾಲೆಗೆ ಕೆಲವೊಂದು ಮೂಲಭೂತ ಸೌಕರ್ಯಗಳೇ ಇಲ್ಲ. ಹೀಗಿರುವಾಗ ಸಂಭ್ರಮಾಚರಣೆಯ ಉತ್ಸಾಹವಾದರೂ ಹೇಗೆ ಬಂದೀತು? ನೈನಾಡು ಸರಕಾರಿ ಪ್ರೌಢಶಾಲೆಯಿಂದ ಒಂದು ಅರ್ಧ ಕಿ.ಮೀ ದೂರ ಹೋದರೆ ಬೆಳ್ತಂಗಡಿ ತಾಲೂಕು. ಹಾಗಾಗಿ ಬೆಳ್ತಂಗಡಿ ತಾಲೂಕಿನ 3 ಆಂಗ್ಲ ಮಾಧ್ಯಮ ಶಾಲೆ ಹತ್ತಿರದಲ್ಲೇ ಇದೆ. ಇತ್ತ ಬಂಟ್ವಾಳ ತಾಲೂಕಿಗೆ ಸೇರಿದ 2 ಆಂಗ್ಲ ಮಾಧ್ಯಮ ಶಾಲೆಗಳೂ ಇವೆ. ಆದರೂ ಈ ಸರಕಾರಿ ಪ್ರೌಢಶಾಲೆಯಲ್ಲಿ ಸುಮಾರು 90 ಮಕ್ಕಳು ವಿದ್ಯಾಭ್ಯಾಸ ಮಾಡುತ್ತಿರುವುದು ಹೆಮ್ಮೆಯ ವಿಷಯವೇ ಸರಿ.
ಅಭಿವೃದ್ಧಿಗೆ ಹಣದ ಕೊರತೆ : ಸುಮಾರು 4 ಎಕ್ರೆ ಜಾಗವನ್ನು ಹೊಂದಿರುವ ಈ ಶಾಲೆಯಲ್ಲಿ ಅಗತ್ಯವಾಗಿ ಬೇಕಾದ ನೀರಿನ ವ್ಯವಸ್ಥೆ, ಶೌಚಾಲಯಗಳ ವ್ಯವಸ್ಥೆಯೇ ಸರಿಯಾಗಿಲ್ಲ. ಕಳೆದ ಬೇಸಿಗೆಯಲ್ಲಿ ಕುಡಿಯು ನೀರಿನ ಸಮಸ್ಯೆ ಎದುರಾದಾಗ ಶಾಸಕರ ಅನುದಾನದಿಂದ ನೂತನ ಬೋರವೆಲ್ ತೋಡಲಾಗಿದೆ. ಆದರೆ ಅದಕ್ಕೆ ಪಂಪ್ ಹಾಗೂ ವಯರಿಂಗ್ ಮಾಡಲು ಆರ್ಥಿಕ ಸಮಸ್ಯೆ ಎದುರಾಗುತ್ತಿದೆ. ಶೌಚಾಲಯಗಳೂ ತೀರಾ ಹಾಳಾಗಿದೆ. ಇದು ಗ್ರಾಮೀಣ ಪ್ರದೇಶವಾಗಿರುವುದರಿಂದ ಇಲ್ಲಿನ ಜನರಾರೂ ಆರ್ಥಿಕವಾಗಿ ಶ್ರೀಮಂತರಲ್ಲ. ಹೆಚ್ಚಿನವರು ದಿನಗೂಲಿ ಸಂಪಾದನೆ ಮಾಡುವವರೇ. ಬಡ ಮತ್ತು ಮಧ್ಯಮ ವರ್ಗದ ಕುಟುಂಬಗಳೇ ಹೆಚ್ಚಾಗಿರುವುದರಿಂದ ಶಾಲಾಭಿವೃದ್ಧಿ ಸಮಿತಿಯ ಮೂಲಕವೂ ಕಾರ್ಯ ಕೈಗೊಳ್ಳಲು ಸಾಧ್ಯವಾಗುತ್ತಿಲ್ಲ.
ಸೂಪರ್ ಶಾಲಾ ಮೈದಾನ : ನೈನಾಡು ಪ್ರೌಢ ಶಾಲೆ ವಿಶಾಲವಾದ ಶಾಲಾ ಮೈದಾನ ಹೊಂದಿರುವುದಿಂದ ಇಲ್ಲಿ ಬರುವ ವಿದ್ಯಾರ್ಥಿಗಳಿಗೆ ಕ್ರೀಡಾಸ್ಪೂರ್ತಿ ಹೆಚ್ಚಿಸುತ್ತದೆ. ಕಳೆದ 5 ವರ್ಷಗಳ ಹಿಂದೆ ತಾಲೂಕು ಮಟ್ಟದ ಕ್ರೀಡಾಕೂಟವನ್ನು ನೆರವೇರಿಸಿ ಎಲ್ಲಾ ಇಲಾಖೆಗಳಿಂದಲೂ ಭೇಷ್ ಎನಿಸಿಕೊಂಡಿತ್ತು. ಈ ಶಾಲಾ ಮಕ್ಕಳು ಎಲ್ಲಾ ಕ್ರೀಡೆಯಲ್ಲಿ ಮುಂಚೂಣಿಯಲ್ಲಿದ್ದು 2019ರ ತಾಲೂಕು ಮಟ್ಟದ ಕೋಕೋ ಸ್ಪರ್ಧೆಯಲ್ಲಿ ಹುಡುಗ ಪ್ರಥಮ ಹಾಗೂ ಹುಡುಗಿರ ವಿಭಾಗದಲ್ಲಿ ದ್ವಿತೀಯ ಸ್ಥಾನ ಪಡೆದಿತ್ತು. ಕಲಿಕೆಯಲ್ಲಿಯೂ ಕಳೆದ ಮೂರು ವರ್ಷದಿಂದ ಶೇಕಡಾ 100 ಫಲಿತಾಂಶ ಪಡೆದಿರುವ ಹೆಗ್ಗಳಿಕೆ ಈ ಶಾಲೆಯಲ್ಲಿದೆ.
ಇಂತಹ ಸರಕಾರಿ ಪ್ರೌಢ ಶಾಲೆಯು ರಜತ ಸಂಭ್ರಮದ ಹೊಸ್ತಿಲಲ್ಲಿರುವಾಗ ಈ ಶಾಲೆಗೆ ಮೂಲಭೂತ ಸೌಲಭ್ಯಗಳನ್ನು ಹೆಚ್ಚಿಸಿ ಇನ್ನಷ್ಟು ವಿದ್ಯಾರ್ಥಿಗಳು ಇಲ್ಲಿ ವಿದ್ಯಾಭ್ಯಾಸಕ್ಕೆ ಬರುವಂತೆ ಮಾಡಬೇಕಾದುದು ತುಂಬಾ ಅಗತ್ಯವಾದ ವಿಷಯವಾಗಿದೆ. ಆದ್ದರಿಂದ ಇದರ ಕುರಿತಾಗಿ ಜನಪ್ರತಿನಿಧಿಗಳು ಗಮನ ಹರಿಸಬೇಕು.
**
ಕಳೆದ 25ವರ್ಷದ ಹಿಂದಿರುವ ಈ ಶಾಲಾ ಕಟ್ಟಡವನ್ನು ವರ್ಷಕ್ಕೊಮ್ಮೆ ರಿಪೇರಿ ಮಾಡುತ್ತಿದ್ದೇವೆ. ವಿದ್ಯಾರ್ಥಿಗಳಿಗೆ ಇಲ್ಲಿ ಶೌಚ ಗೃಹದ ಸಮಸ್ಯೆ. ಗ್ರಾಮೀಣ ಪ್ರದೇಶವಾದ್ದರಿಂದ ಯಾರೂ ದೊಡ್ಡಮಟ್ಟದಲ್ಲಿ ದೇಣಿಗೆ ನೀಡುವವರಿಲ್ಲ. ಕುಡಿಯುವ ನೀರಿಗಾಗಿ ಮಾಡಿದ ಬೋರ್‌ವೆಲ್‌ಗೆ ಪಂಪ್ ಅಳವಡಿಸಲು ತೊಂದರೆಯಾಗಿದೆ. ಪಂಚಾಯತ್ ವತಿಯಿಂದ ನೀರು ಬರದಿದ್ದಾಗ ಶಾಲಾ ಬಳಿಯ ಮನೆಯನ್ನೇ ಆಶ್ರಯಿಸಬೇಕಾದ ಪರಿಸ್ಥಿತಿ ಬಂದಿದೆ. ಬಡ ಮತ್ತು ಮಧ್ಯಮ ವರ್ಗದವರು ಈ ಪರಿಸರದಲ್ಲಿರುವುದರಿಂದ ಶಾಲೆಯನ್ನು ಹೆಚ್ಚಿನ ಅಭಿವೃದ್ಧಿಯತ್ತ ಕೊಂಡೊಯ್ಯಲು ಕಷ್ಟವಾಗಿದೆ. ಸರಕಾರದಿಂದ ನೂತನ ಕಟ್ಟಡ, ಶೌಚಾಲಯಕ್ಕೆ ಅನುದಾನ ದೊರೆತರೆ ಶಾಲೆಯನ್ನೂ ಇನ್ನೂ ಉತ್ತಮವಾಗಿಡಬಹುದು.
– ಹರೀಶ, ಎಸ್‌ಡಿಎಂಸಿ ಅಧ್ಯಕ್ಷರು, ಸರಕಾರಿ ಪ್ರೌಢ ಶಾಲೆ, ನೈನಾಡು
****
ನೈನಾಡು ಪರಿಸರದಲ್ಲಿ ಪ್ರಾಥಮಿಕ ಶಾಲೆಯ ನಂತರ ಪ್ರೌಢ ಶಿಕ್ಷಣಕ್ಕೆ ದೂರದ ಪುಂಜಾಲಕಟ್ಟೆ ಅಥವಾ ವೇಣೂರು ಅಥವಾ ವಾಮದಪದವು ಕಡೆ ತೆರಳಬೇಕಾಗಿತ್ತು. ಅಲ್ಲಿನ ಗ್ರಾಮಸ್ಥರು ಒಟ್ಟು ಸೇರಿ ನೈನಾಡು ಪರಿಸರದಲ್ಲಿ ಪ್ರೌಢ ಶಾಲೆ ನಿರ್ಮಾಣ ಮಾಡಬೇಕೆಂದು ಸಂಕಲ್ಪ ಮಾಡಿಕೊಂಡೆವು.  ಕಳೆದ ೨೫ ವರ್ಷಗಳ ಹಿಂದೆ ಹಳ್ಳಿ ಹಳ್ಳಿಗೆ ತೆರಳಿ ವಿದ್ಯಾರ್ಥಿಗಳನ್ನು ಸೇರಿಸಿ ಶಾಲೆಯನ್ನು ಆರಂಭಿಸಲಾಯಿತು.  ಶಾಲೆಯನ್ನು ಊರವರ ಸಹಕಾರದಿಂದ ಕಟ್ಟಲ್ಪಟ್ಟು ಬಂದ ವಿದ್ಯಾರ್ಥಿಗಳಿಗೆ ಕಲಿಕೆಯಲ್ಲಿ ಏನೂ ತೊಂದರೆಯಾಗದಂತೆ ಕೆಲವು ತಿಂಗಳು ಹತ್ತಿರದಲ್ಲಿರುವ ಭಜನಾ ಮಂಡಳಿಯಲ್ಲಿಯೂ ತರಗತಿಗಳನ್ನು ನಡೆಸಿದೆವು. ಮೊದಲಿಗೆ ೪ ಅಧ್ಯಾಪಕರಿಗೆ ಊರಿನವರೇ ಹಣ ಒಟ್ಟು ಸೇರಿಸಿ ಸಂಬಳ ನೀಡಿ ನಂತರ ಸರಕಾರದಿಂದ ಅಧಿಕೃತವಾಗಿ ಅಧ್ಯಾಪಕರ ನೇಮಕಾತಿಯಾಯಿತು.
– ವೆಂಕಪ್ಪ ಸಾಲ್ಯಾನ್, ಸ್ಥಾಪಕಾಧ್ಯಕ್ಷರು, ಸರಕಾರಿ ಪ್ರೌಢ ಶಾಲೆ, ನೈನಾಡು

LEAVE A REPLY

 Click this button or press Ctrl+G to toggle between Kannada and English

Please enter your comment!
Please enter your name here