


ಬಂಟ್ವಾಳ: ಶ್ರಿ ಕ್ಷೇತ್ರ ಧ.ಗ್ರಾ. ಯೋಜನೆ ಬಿ.ಸಿ. ಟ್ರಸ್ಟ್ ದ.ಕ. ಜಿಲ್ಲೆ ಹಾಗೂ ಅಖಿಲ ಕರ್ನಾಟಕ ಜಿಲ್ಲಾ ಜನಜಾಗೃತಿ ವೇದಿಕೆಯ ಪದಾಧಿಕಾರಿಗಳ ಸಹಯೋಗ ದೊಂದಿಗೆ ದ.ಕ. ಜಿಲ್ಲೆಯಲ್ಲಿ 292 ಸಮುದಾಯ ಮದ್ಯವರ್ಜನ ಶಿಬಿರ ಗಳನ್ನು ಸಂಘಟಿಸಿ 19,765ಕ್ಕೂ ಹೆಚ್ಚು ಮಂದಿ ಯನ್ನು ವ್ಯಸನಮುಕ್ತಗೊಳಿಸಲಾಗಿದೆ ಎಂದು ಅಖಿಲ ಕರ್ನಾಟಕ ಜನಜಾಗೃತಿ ವೇದಿಕೆಯ ದ.ಕ. ಜಿಲ್ಲಾ ಕಾರ್ಯದರ್ಶಿ, ಯೋಜನೆಯ ನಿರ್ದೇಶಕ ಸತೀಶ್ ಶೆಟ್ಟಿ ಹೇಳಿದರು.
ಮಂಗಳವಾರ ಬಂಟ್ವಾಳ ಶ್ರಿ ಧರ್ಮಸ್ಥಳ ಮಂಜುನಾಥೇಶ್ವರ ಸಭಾಂಗಣದಲ್ಲಿ ನಡೆದ ಜನಜಾಗೃತಿ ವೇದಿಕೆಯ ಜಿಲ್ಲಾ ಪದಾಧಿಕಾರಿಗಳ ಸಭೆಯ ಬಳಿಕ ಪತ್ರಿಕಾ ಗೋಷ್ಠಿಯಲ್ಲಿ ಅವರು ಮಾತನಾಡಿದರು. ಜಿಲ್ಲೆಯಾದ್ಯಂತ 922ಕ್ಕೂ ಹೆಚ್ಚು ನವ ಜೀವನ ಸಮಿತಿಗಳು ಕಾರ್ಯೋನ್ಮುಖ ವಾಗಿದ್ದು, ವಿದ್ಯಾರ್ಥಿ ಸಮುದಾಯವನ್ನು ದುಶ್ಚಟದಿಂದ ಪಾರು ಮಾಡುವ ದೃಷ್ಟಿ ಯಿಂದ ವಾರ್ಷಿಕವಾಗಿ 356 ಸ್ವಾಸ್ಥ್ಯ ಸಂಕಲ್ಪ ಕಾರ್ಯಕ್ರಮಗಳನ್ನು ನಡೆಸಿ 4,635 ವಿದ್ಯಾರ್ಥಿಗಳಿಗೆ ಸಂಪನ್ಮೂಲ ವ್ಯಕ್ತಿಗಳಿಂದ ಮಾಹಿತಿ ನೀಡಲಾಗಿದೆ. ಜಿಲ್ಲೆಯಲ್ಲಿ ವಾರ್ಷಿಕ 7 ಮದ್ಯವರ್ಜನ ಶಿಬಿರಗಳನ್ನು ಸಂಘಟಿಸಿ, ಸ್ಥಳೀಯವಾಗಿ ಮದ್ಯವರ್ಜನ ವ್ಯವಸ್ಥಾಪನ ಸಮಿತಿಗಳನ್ನು ರಚಿಸಿ ಶಿಬಿರ ನಡೆಸಲಾಗುತ್ತದೆ. ಸುಮಾರು 3 ಲಕ್ಷ ರೂ. ವೆಚ್ಚದ ಶಿಬಿರಕ್ಕೆ ಯೋಜನೆ ಯಿಂದ ಶೇ. 20 ಸಹಾಯಧನ ನೀಡಲಾಗುತ್ತಿದ್ದು, ಉಳಿದ ಖರ್ಚನ್ನು ಸಮುದಾಯದಿಂದ ಭರಿಸಲಾಗುತ್ತದೆ ಎಂದರು.
ಶಿಬಿರದ ಬಳಿಕ ವ್ಯಸನದಿಂದ ಮುಕ್ತಿ ಪಡೆದವರು ಸೇರಿ ನವಜೀವನ ಸಮಿತಿ ರಚಿಸಿ ಪ್ರಥಮ 6 ತಿಂಗಳಿಗೆ ವಾರಕ್ಕೊಮ್ಮೆ ಸಭೆ,2 ವರ್ಷಗಳವರೆಗೆ ತಿಂಗಳಿಗೆ 2 ಬಾರಿ ಸಭೆ, ಬಳಿಕ 5 ವರ್ಷಗಳವರೆಗೆ ತಿಂಗಳಿಗೊಮ್ಮೆ ಸಭೆ ನಡೆಸಲಾಗುತ್ತದೆ. ಶಿಬಿರ ಮುಗಿದ 100 ದಿನಗಳ ಬಳಿಕ ಶ್ರಿ ಸ್ವಾಮಿಯ ದರ್ಶನ, ಕ್ಷೆಕ್ಷೇತ್ರ ಭೇಟಿ, ಧರ್ಮಾಧಿಕಾರಿಗಳ ಮಾರ್ಗದರ್ಶನ ನಡೆಸಲಾಗುತ್ತದೆ ಎಂದು ಸತೀಶ್ ಶೆಟ್ಟಿ ತಿಳಿಸಿದರು.
ಮಾಜಿ ಶಾಸಕ ರುಕ್ಮಯ ಪೂಜಾರಿ, ವೇದಿಕೆಯ ಸ್ಥಾಪಕಾಧ್ಯಕ್ಷ ವಸಂತ ಸಾಲ್ಯಾನ್, ಜಿಲ್ಲಾಧ್ಯಕ್ಷ ಎನ್.ಎ. ರಾಮಚಂದ್ರ, ಮಾಜಿ ಅಧ್ಯಕ್ಷ ಸಾಜ ರಾಧಾಕೃಷ್ಣ ಆಳ್ವ, ವಿವಿಧ ತಾಲೂಕು ಅಧ್ಯಕ್ಷರಾದ ಬಾಲಕೃಷ್ಣ ಆಳ್ವ, ಅಶ್ವತ್ಥ್ ಪೂಜಾರಿ, ಶಾರದಾ ರೈ, ವಿಶ್ವನಾಥ ರೈ, ಮಹಾಬಲ ಚೌಟ, ಮಹಾಬಲ ರೈ, ತಾಲೂಕು ಮಾಜಿ ಅಧ್ಯಕ್ಷರಾದ ಪ್ರಕಾಶ್ ಕಾರಂತ, ಕಿರಣ್ ಹೆಗ್ಡೆ, ಪ್ರಾತಾಪ್ ಸಿಂಹ ನಾಯಕ್, ಯೋಜನಾಧಿಕಾರಿ ಜಯಾನಂದ ಪಿ. ಉಪಸ್ಥಿತರಿದ್ದರು.






