ಯಾದವ ಕುಲಾಲ್
ಬಂಟ್ವಾಳ : ವಿಶಾಲವಾದ ಕ್ಯಾಂಪಸ್, ಫಲನೀಡುವ ಹಲವಾರು ತೆಂಗಿನ ಮರಗಳು, ಕುಡಿಯುವ ನೀರಿನ ಶಾಶ್ವತ ವ್ಯವಸ್ಥೆಗಾಗಿ ಬೋರ್‌ವೆಲ್, ಊರಿನವರೇ ಸೇರಿ ನಿರ್ಮಿಸಿದಂತಹ ಸುದೃಢವಾದ ಕಟ್ಟಡವನ್ನು ಹೊಂದಿರುವ ಕರ್ನಾಟಕ ಸರಕಾರ ದ.ಕ.ಜಿ.ಪಂ.ನ ಹಿಂದುಳಿದ ವರ್ಗಗಳ ಮತ್ತು ಅಲ್ಪಸಂಖ್ಯಾತರ ಹಾಸ್ಟೆಲ್ ಕಟ್ಟಡವು ಸರಪಾಡಿ ಗ್ರಾಮ ಪಂಚಾಯತ್ ವ್ಯಾಪ್ತಿಯ ಮಣಿನಾಲ್ಕೂರಿನ ಮುಲ್ಕಾಜೆಮಾಡ ಎಂಬಲ್ಲಿ ಕಾರ್ಯ ನಿರ್ವಹಿಸುತ್ತಿದ್ದು, ಈ ವಿದ್ಯಾರ್ಥಿ ನಿಲಯ ಕಳೆದ  3 ತಿಂಗಳಿಂದ ಮುಚ್ಚಲ್ಪಟ್ಟಿದೆ.
50 ವಿದ್ಯಾರ್ಥಿಗಳಿಗೆ ಉಳಿದುಕೊಳ್ಳಲು ವಿಶಾಲವಾದ ಕೊಠಡಿಗಳು, ಸುಸಜ್ಜಿತ ಕಚೇರಿ ಕೋಣೆ, ಎಲ್ಲ ವ್ಯವಸ್ಥೆಗಳನ್ನೊಳಗೊಂಡ ಸುಸಜ್ಜಿತ ಅಡುಗೆಕೋಣೆ, ಸ್ನಾನಗೃಹ, ಶೌಚಾಲಯಗಳು, ವಿದ್ಯಾರ್ಥಿಗಳಿಗೆ ಹಲವು ಬಟ್ಟೆ ಒಗೆಯುವ ಕಲ್ಲು ಹೀಗೆ ಎಲ್ಲ ಸೌಲಭ್ಯಗಳನ್ನೂ ಈ ವಿದ್ಯಾರ್ಥಿ ನಿಲಯ ಹೊಂದಿದೆ. ಅಲ್ಲದೆ ನಗರದ ಗದ್ದಲವಿಲ್ಲದೆ ಪ್ರಶಾಂತ ಪರಿಸರದಲ್ಲಿ ಈ ವಿದ್ಯಾರ್ಥಿ ನಿಲಯ ಇರುವುದರಿಂದ ವಿದ್ಯಾರ್ಥಿಗಳಿಗೆ ಓದಲೂ ಪೂರಕ ವಾತಾವರಣವನ್ನು ಅದು ಕಲ್ಪಿಸಿದೆ.
1993ರಲ್ಲಿ ಸ್ಥಾಪನೆಗೊಂಡ ಈ ಹಾಸ್ಟ್ರೆಲ್‌ನಲ್ಲಿ ಇಷ್ಟೆಲ್ಲಾ ಉತ್ತಮ ವ್ಯವಸ್ಥೆ ಇದ್ದರೂ, ಅಗತ್ಯವಿದ್ದ ಸಣ್ಣಪುಟ್ಟ ರಿಪೇರಿಯನ್ನು ಮಾಡಿಸದೆ, ಬಸ್ಸು ವ್ಯವಸ್ಥೆ ಸರಿಯಾಗಿಲ್ಲ ಎಂಬ ಕಾರಣ ನೀಡಿ ಇಲಾಖೆಯು ಈ ವಿದ್ಯಾರ್ಥಿ ನಿಲಯವನ್ನು ಬಿ.ಸಿ.ರೋಡಿನ ತಲಪಾಡಿಯಲ್ಲಿ ಬಾಡಿಗೆ ಮನೆಗೆ ಸ್ಥಳಾಂತರಿಸಿದೆ. ಸ್ವಂತ ಕಟ್ಟಡವಿದ್ದರೂ ಅದನ್ನು ಸಮರ್ಪಕವಾಗಿ ಬಳಸದೆ ದುಬಾರಿ ಬಾಡಿಗೆಯನ್ನು ನೀಡಿ ವಿದ್ಯಾರ್ಥಿನಿಲಯವನ್ನು ನಡೆಸಬೇಕಾದ ಪರಿಸ್ಥಿತಿ ಇಲಾಖೆಗೆ ಬಂದಿರುವುದು ದುರಂತವೇ ಸರಿ.
ಸರಕಾರದಿಂದ ನೀಡಲ್ಪಟ್ಟ ಉತ್ತಮ ಸ್ಥಳಾವಕಾಶವನ್ನು ಸರಿಯಾಗಿ ಬಳಸಿಕೊಳ್ಳದೆ, ತಮ್ಮ ಅನುಕೂಲಕ್ಕಾಗಿ ಜಾಗದ ಬದಲಾವಣೆ ಮಾಡಿರುವುದು ಸರಿಯಲ್ಲ. ಸರಕಾರದ ಸ್ವತ್ತನ್ನು ಸಮರ್ಪಕವಾಗಿ ಬಳಸುವುದರ ಜೊತೆಗೆ ಅದರ  ನಿರ್ವಹಣೆಯನ್ನು ಕೂಡಾ ಅಚ್ಚುಕಟ್ಟಾಗಿ ಮಾಡಬೇಕಾದದ್ದು ಸಂಬಂಧಪಟ್ಟ ಇಲಾಖೆಯ ಕರ್ತವ್ಯ. ಅದು ಬಿಟ್ಟು ಈ ರೀತಿಯಾಗಿ ಏಕಾಏಕಿ ಒಂದು ಕಟ್ಟಡವನ್ನೇ ನಿಷ್ಪ್ರಯೋಜಕವಾಗಿ ಮಾಡುವುದು ಸರಿಯಲ್ಲ.
ಮೂರು ತಿಂಗಳಿಂದ ವಿದ್ಯಾರ್ಥಿನಿಲಯದ ಕಟ್ಟಡಕ್ಕೆ ಬೀಗ ಜಡಿದಿರುವುದರಿಂದ ಅಲ್ಲಿ ಕಳ್ಳತನದ ಘಟನೆಯೂ ನಡೆದಿದೆ. ಈಗಾಗಲೇ ಗೇಟನ್ನು ಕಳ್ಳತನ ಮಾಡಿದ್ದಾರೆ. ಹೀಗೇ ಮುಂದುವರಿದರೆ ಇನ್ನಷ್ಟು ರೀತಿಯಲ್ಲಿ ಕಟ್ಟಡಕ್ಕೆ ತೊಂದರೆಯಾಗಬಹುದು.
ಬಾಡಿಗೆ ಮನೆಯ ವ್ಯವಸ್ಥೆ : ಗ್ರಾಮೀಣ ಪ್ರದೇಶದಿಂದ ನಗರ ಪ್ರದೇಶಕ್ಕೆ ಬಂದಿದೆ. ಇದರಿಂದಾಗಿ ವಿದ್ಯಾರ್ಥಿಗಳಿಗೆ ಬಸ್ಸಿನ ವ್ಯವಸ್ಥೆ ಸರಾಗವಾಗಿ ಇದೆ ಎಂಬುದನ್ನು ಬಿಟ್ಟರೆ ಬೇರೆ ಏನೂ ಪ್ರಯೋಜನವಿಲ್ಲ. ಒಂದು ಕುಟುಂಬ ಜೀವನ ನಡೆಸುವ ಮನೆಯನ್ನು ಬಾಡಿಗೆ ಪಡೆದಿರುವುದರಿಂದ ಸಣ್ಣ ಸಣ್ಣ ಕೋಣೆಗಳಿವೆ. ಅಡುಗೆಕೋಣೆಯೂ ಸಣ್ಣದಾಗಿದೆ. ಅಲ್ಲದೆ ಶೌಚಾಲಯಗಳೂ ಕಡಿಮೆ. 26 ವಿದ್ಯಾರ್ಥಿಗಳು ಇಲ್ಲಿ ಆಶ್ರಯ ಪಡೆದಿದ್ದು ಅವರ ನಿತ್ಯ ಕ್ರಮಗಳಿಗೆ ಇಲ್ಲಿ ಸಮರ್ಪಕ ವ್ಯವಸ್ಥೆ ಇಲ್ಲ.
ಆದ್ದರಿಂದ ಇಲಾಖೆಯು ಆದಷ್ಟು ಬೇಗ ಎಚ್ಚೆತ್ತುಕೊಂಡು ಅಗತ್ಯವಿರುವ ಸಣ್ಣಪುಟ್ಟ ರಿಪೇರಿಗಳನ್ನು ಮಾಡಿಸಿ ವಿದ್ಯಾರ್ಥಿ ನಿಲಯವು ತನ್ನ ಸ್ವಂತ ಕಟ್ಟಡದಲ್ಲಿ ಕಾರ್ಯನಿರ್ವಹಿಸುವಂತೆ ಮಾಡಿದರೆ ಒಳ್ಳೆಯದು. ಇದರಿಂದ ಇಲಾಖೆಗೂ ಪ್ರಯೋಜನ ಮತ್ತು ವಿದ್ಯಾರ್ಥಿಗಳಿಗೂ ಉತ್ತಮ ಸೌಲಭ್ಯ ದೊರಕಿದಂತಾಗುತ್ತದೆ.
*********
ವಿದ್ಯಾರ್ಥಿ ನಿಲಯದಲ್ಲಿ ಕೆಲವು ಹಂಚು ಹೋದ ಕಾರಣ ಮಳೆ ನೀರು ಬೀಳುತ್ತದೆ ಹಾಗೂ ಹೆಚ್ಚಿನ ವಿದ್ಯಾರ್ಥಿಗಳಿಗೆ ಇಲ್ಲಿಂದ ಕಾಲೇಜಿಗೆ ಹೋಗಲು ಬಸ್ಸಿನ ಸಮಸ್ಯೆ ಇರುವುದರಿಂದ ಬಿ.ಸಿ.ರೋಡಿನ ತಲಪಾಡಿಗೆ ವಿದ್ಯಾರ್ಥಿ ನಿಲಯವನ್ನು ಸ್ಥಳಾಂತರ ಮಾಡಲಾಗಿದೆ. ಬಸ್ಸು ವ್ಯವಸ್ಥೆ ಸರಾಗವಾಗಿರುವುದರಿಂದ ಮಕ್ಕಳಿಗೆ ತಮ್ಮ ತಮ್ಮ ವಿದ್ಯಾಸಂಸ್ಥೆಗೆ ತೆರಳಲು ಅನುಕೂಲವಾಗುತ್ತಿದೆ.
-ಎಚ್. ಶಿವಣ್ಣ, ತಾಲೂಕು ವಿಸ್ತರಣಾಕಾರಿ, ಹಿಂದುಳಿದ ವರ್ಗಗಳ ಇಲಾಖೆ
********
ವಿದ್ಯಾರ್ಥಿಗಳು ಕಾಲೇಜಿಗೆ ಹೋಗಲು ಅನುಕೂಲವಾಗಲಿ ಎಂಬ ದೃಷ್ಟಿಯಿಂದ ಇಲಾಖೆಯ ಅಕಾರಿಗಳು ಗ್ರಾಮೀಣ ಪರಿಸರದಿಂದ ನಗರ ಪ್ರದೇಶಕ್ಕೆ ಹಾಸ್ಟೆನ್ನು ಸ್ಥಳಾಂತರ ಮಾಡಿದ್ದಾರೆ. ಆದರೆ ಇರುವ ಮೂಲ ಕಟ್ಟಡವನ್ನು ಪಾಳು ಬೀಳದಂತೆ ವ್ಯವಸ್ಥಿತವಾಗಿ ಅದನ್ನು ನಿರ್ವಹಣೆ ಸಂಬಂಧಪಟ್ಟ ಇಲಾಖೆಯೊಂದಿಗೆ ಮಾತನಾಡಿ ಸರಕಾರದ ಬೇರೆ ಇಲಾಖೆಗಾದರೂ ಆ ಕಟ್ಟಡವನ್ನು ನೀಡುವ ಪ್ರಯತ್ನ ಮಾಡುತ್ತೇನೆ.
-ಪದ್ಮಶೇಖರ ಜೈನ್, ಜಿಲ್ಲಾ ಪಂಚಾಯತ್ ಸದಸ್ಯ
*****

LEAVE A REPLY

 Click this button or press Ctrl+G to toggle between Kannada and English

Please enter your comment!
Please enter your name here