

ಬಂಟ್ವಾಳ, ಸೆ. ೧೬: ಕಂಟೈನರ್ ಲಾರಿ ಹಾಗೂ ತ್ಯಾಜ್ಯ ಸಾಗಾಟದ ಪಿಕಪ್ ವಾಹನದ ನಡುವೆ ಅಪಘಾತ ಸಂಭವಿಸಿ ಲಾರಿ ಚಾಲಕ ಗಾಯಗೊಂಡ ಘಟನೆ ಬೆಂಗಳೂರು-ಮಂಗಳೂರು ರಾಷ್ಟ್ರೀಯ ಹೆದ್ದಾರಿ ಮಾರಿಪಳ್ಳ ಸಮೀಪ ಸೋಮವಾರ ಸಂಜೆ ಸಂಭವಿಸಿದೆ.
ಕಂಟೈನರ್ ಲಾರಿಯ ಚಾಲಕ, ವಾಮಂಜೂರು ಶಿವಾನಂದ ಗಾಯಗೊಂಡ ವ್ಯಕ್ತಿ ಎಂದು ಗುರುತಿಸಲಾಗಿದ್ದು, ಚಾಲಕನ್ನು ತುಂಬೆ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.
ಇಂದು ಸಂಜೆ ಮಂಗಳೂರಿನಿಂದ ಬಿ.ಸಿ.ರೋಡ್ ಕಡೆಗೆ ತೆರಳುತ್ತಿದ್ದ ಕಂಟೈನರ್ ಲಾರಿಯು ಮಾರಿಪಳ್ಳ ಸಮೀಪದ ಕಡೆಗೋಳಿ ಎಂಬಲ್ಲಿ ಚಾಲಕನ ನಿಯಂತ್ರಣ ತಪ್ಪಿ ರಸ್ತೆಯ ವಿಭಜಕ್ಕೇರಿದೆ. ಬಳಿಕ ಮುಂದಕ್ಕೆ ಚಲಿಸಿದ ಲಾರಿಯು ಇನ್ನೊಂದು ರಸ್ತೆಯಲ್ಲಿ ಮಂಗಳೂರು ಕಡೆಗೆ ತೆರಳುತ್ತಿದ್ದ ತ್ಯಾಜ್ಯ ಸಾಗಾಟದ ಪಿಕಪ್ ವಾಹನಕ್ಕೆ ಢಿಕ್ಕಿಯಾಗಿ, ರಸ್ತೆಯ ಚರಂಡಿಗೆ ಉರುಳಿ ಈ ಅವಘಡ ಸಂಭವಿಸಿದೆ.
ಘಟನೆಯಿಂದ ಲಾರಿ ಚಾಲಕನಿಗೆ ಗಾಯವಾಗಿದ್ದು, ತುಂಬೆ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದು, ಚಿಕಿತ್ಸೆ ಪಡೆಯುತ್ತಿದ್ದಾರೆ.
ಪಿಕಪ್ ಚಾಲಕ ಅಪಾಯದಿಂದ ಪಾರಾಗಿದ್ದು, ಢಿಕ್ಕಿಯ ರಭಸಕ್ಕೆ ಪಿಕಪ್ ವಾಹನದ ಡಿಸ್ಕ್ ತುಂಡಾಗಿ ತ್ಯಾಜ್ಯ ರಸ್ತೆಗೆ ಬಿದ್ದಿದೆ. ಕಂಟೈನರ್ ಲಾರಿಯ ಮುಂಭಾಗ ಜಖಂಗೊಂಡಿದೆ. ಘಟನಾ ಸ್ಥಳಕ್ಕೆ ಟ್ರಾಫಿಕ್ ಪೊಲೀಸರು ಭೇಟಿ, ಪರಿಶೀಲನೆ ನಡೆಸಿದ್ದಾರೆ. ಘಟನೆಯಿಂದ ರಾಷ್ಟ್ರೀಯ ಹೆದ್ದಾರಿಯಲ್ಲಿ ಕೆಲ ಕಾಲ ಸಂಚಾರಕ್ಕೆ ಅಡಚಣೆ ಉಂಟಾಯಿತು.








