

ಬಂಟ್ವಾಳ: ಮಂಗಳೂರು ಎಸ್. ಪಿ ಕಚೇರಿ ಬಂಟ್ವಾಳ ಕ್ಕೆ ಬರಲಿ ಎಂದು ಮಾಜಿ ಸಚಿವ ಬಿ.ರಮಾನಾಥ ರೈ ಅವರು ಹೇಳಿದರು.
ಅವರು ಬಿಸಿರೋಡಿನ ಪಕ್ಷದ ಕಚೇರಿಯಲ್ಲಿ ಕರೆದ ಪತ್ರಿಕಾಗೋಷ್ಠಿಯಲ್ಲಿ ಈ ತಿಳಿಸಿದರು.
ಜಿಲ್ಲಾ ಎಸ್.ಪಿ.ಕಚೇರಿ ಮಂಗಳೂರಿನಿಂದ ಪುತ್ತೂರಿಗೆ ವರ್ಗಾಯಿಸುವ ಬಗ್ಗೆ ಪ್ರಸ್ತಾವ ಇದೆ, ಆದರೆ ಜಿಲ್ಲಾ ಪೋಲಿಸ್ ವರಿಷ್ಠಾಧಿಕಾರಿಯವರ ಕಚೇರಿ ಸ್ಥಳಾಂತರ ಮಾಡುವುದಿದ್ದರೆ ಬಂಟ್ವಾಳಕ್ಕೆ ಮಾಡಬೇಕು.
ಕಾನೂನು ಸುವ್ಯವಸ್ಥೆಯ ದೃಷ್ಟಿಯಿಂದ ಮತ್ತು ಬಂಟ್ವಾಳ ಪುತ್ತೂರು ಬೆಳ್ತಂಗಡಿ ವ್ಯಾಪ್ತಿಯ ಜನರಿಗೆ ಅನುಕೂಲವಾಗುತ್ತದೆ ಎಂದರು.
ಸರಕಾರ ಮಂಗಳೂರಿನಿಂದ ಹೊರಗೆ ಹೋಗಬೇಕು ಎಂದು ಅಪೇಕ್ಷೆ ಪಟ್ಟರೆ ಅದು ಬಂಟ್ವಾಳ ಸೂಕ್ತವಾದ ಮತ್ತು ಅನುಕೂಲವಾದ ಜಾಗ ಎಂದು ಅವರು ಹೇಳಿದರು.
ಇದಕ್ಕೆ ಸರಕಾರ ಗಮನಹರಿಸಲಿ, ತರತುರಿಯಲ್ಲಿ ಯಾವುದೇ ನಿರ್ಧಾರ ಬೇಡ, ಜಿಲ್ಲೆಯೇ ಬೇರೆ ಮಾಡುವುದಿದ್ದರೂ ನಮ್ಮ ಅಭ್ಯಂತರವಿಲ್ಲ ಎಂಬುದನ್ನು ಸ್ಪಷ್ಟಪಡಿಸಿದರು.
ನೂತನ ಮೋಟಾರು ವಾಹನ ಕಾಯ್ದೆಯಿಂದ ಜನಸಾಮಾನ್ಯರ ಮೇಲೆ ಪ್ರಭಾವ ಬೀರಿದೆ. ದುಪ್ಪಟ್ಟು ದಂಡ ವಸೂಲಾತಿಯಿಂದ ಬಡವರ್ಗದ ಜನರಿಗೆ ಹೊರೆಯಾಗಿದೆ. ವಾಹನ ತಪಾಸಣೆ ಪರಿಶೀಲನೆ ಕಾರ್ಯಕ್ರಮ ಪರಿಣಾಮಕಾರಿಯಾಗಿ ಮಾಡಲಿ, ಆದರೆ ದುಬಾರಿ ದಂಡದ ಕ್ರಮ ಸರಿಯಲ್ಲ, ಇದರ ಸರಳೀಕರಣ ಆಗಬೇಕು.
ಕೆಲವೊಂದು ಕಾನೂನು ಜನಹಿತವಾಗಿಲ್ಲ ಎಂದು ಅವರು ಹೇಳಿದರು. ಒಂದೇ ದೇಶ ಒಂದೇ ಭಾಷೆ ಹಿಂದಿ ಹೇರಿಕೆಯ ಹಿಂದಿನ ಉದ್ದೇಶ ಜನಸಾಮಾನ್ಯರಿಗೆ ತೊಂದರೆಯಾಗುತ್ತದೆ ಎಂದು ಹೇಳಿದರು. ಇದಕ್ಕೆ ನಮ್ಮ ವಿರೋಧವಿದೆ ಎಂದು ಅವರು ಹೇಳಿದರು.
ಈ ಕ್ರಮದಿಂದ ನಮ್ಮ ಭಾಷೆ ನಶಿಸಿಹೋಗುವ ಸಾಧ್ಯತೆ ಗಳಿವೆ.ಇದು ನಮ್ಮ ಸ್ವಾತಂತ್ರ್ಯ ವನ್ನು ಕಿತ್ತುಕೊಳ್ಳುವ ಕ್ರಮ ಎಂದರು.
ತುಳು ಭಾಷೆಯನ್ನು 8 ನೇ ಪರಿಚ್ಛೇದಕ್ಕೆ ಸೇರಿಸುವ ಕೆಲಸ ಕೂಡಾ ಆಗಿಲ್ಲ ಎಂದು ಹೇಳಿದರು. ಈ ಸಂದರ್ಭದಲ್ಲಿ ಬಂಟ್ವಾಳ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಬೇಬಿಕುಂದರ್, ಪಾಣೆಮಂಗಳೂರು ಬ್ಲಾಕ್ ಕಾಂಗ್ರೇಸ್ ಅಧ್ಯಕ್ಷ ಸುದೀಪ್ ಶೆಟ್ಟಿ ಮಾಣಿ, ತಾ.ಪಂ.ಉಪಾಧ್ಯಕ್ಷ ಅಬ್ಬಾಸ್ ಆಲಿ, ಪ್ರಮುಖರಾದ ಸದಾಶಿವ ಬಂಗೇರ, ಸುದರ್ಶನ್ ಜೈನ್,ಪದ್ಮನಾಭ ರೈ ಉಪಸ್ಥಿತರಿದ್ದರು.







