(ವರದಿ / ಚಿತ್ರ : ರೋನ್ಸ್ ಬಂಟ್ವಾಳ್)

ಮುಂಬಯಿ: ನಾನು ಸುಮಾರು ಆರು ದಶಕಗಳಿಂದಲೂ ಎಲ್ಲಾ ಧರ್ಮಿಯರಲ್ಲೂ ಬೆಸೆದು ಬಾಳಿದವನು. ಮುಂಬಯಿನಲ್ಲಿಯೇ ನನ್ನ ೬೦ ವರ್ಷಗಳ ಒಡನಾಟ ಬಿಲ್ಲವರೊಂದಿಗಿದೆ. ಬಿಲ್ಲವರ ಸಂಬಂಧವೂ ನನ್ನಲ್ಲಿ ಅನನ್ಯವಾದುದು. ಒಳ್ಳೆ ಕೆಲಸಕ್ಕೆ ಜಾತಿ, ಧರ್ಮ, ಸ್ಪರ್ಧೆ ಮತ್ತು ತಾರತಮ್ಯ ಸಲ್ಲದು. ಮುಂಬಯಿಗರಿಗೆ ಒಂದೇ ಜಾತಿ ಅದೇ ಮನುಷ್ಯ ಜಾತಿ. ಇದನ್ನೇ ನಾವೂ ಉದ್ಧಾರ ಮಾಡಿ ಪ್ರಗತಿಯತ್ತ ಮುನ್ನಡೆಯೋಣ ಎಂದು ಶಾಫಿ ವೆಲ್ಫೇರ್ ಎಸೋಸಿಯೇಶನ್ ಮುಂಬಯಿ ಅಧ್ಯಕ್ಷ ನ್ಯಾ| ಬಿ.ಮೊಹಿದ್ಧೀನ್ ಮುಂಡ್ಕೂರು ತಿಳಿಸಿದರು.

ಇಂದಿಲ್ಲಿ ಶುಕ್ರವಾರ ಸಾಂತಕ್ರೂಜ್ ಪೂರ್ವದಲ್ಲಿನ ಬಿಲ್ಲವ ಭವನದ ಬ್ರಹ್ಮಶ್ರೀ ನಾರಾಯಣ ಗುರು ಮಂದಿರದಲ್ಲಿ ಸಂಭ್ರಮಿಸಿದ ಬ್ರಹ್ಮಶ್ರೀ ನಾರಾಯಣ ಗುರುಗಳ 165ನೇ ಜಯಂತ್ಯೋತ್ಸವ ಪ್ರಾತಃಕಾಲ ನಡೆಸಲ್ಪಟ್ಟ ಗಣಹೋಮ, ‘ಓಂ ನಮೋ ನಾರಾಯಣಾಯ ನಮಃ ಶಿವಾಯಃ’ ಜಪಯಜ್ಞ , ನವಕ ಪ್ರಧಾನ ಕಲಶಾಬಿಷೇಕ, ಭಜನೆ ಧಾರ್ಮಿಕ ಪೂಜಾಧಿಗಳಿಗೆ ಶ್ರೀ ಮಹಾಶೇಷ ರುಂಡಮಾಲಿನಿ ದೇವಸ್ಥಾನ ಪಂಚಕುಟೀರ (ಸುವರ್ಣ ಮಂದಿರ) ಪೊವಾಯಿ ಇದರ ಧರ್ಮದರ್ಶಿ ಶ್ರೀ ಸುವರ್ಣ ಬಾಬಾ ಕಲಶಾಭಿಕಗೈದು ಆಶೀರ್ವಚಿಸಿದರು.

ಸಂಜೆ ಬಿಲ್ಲವರ ಭವನದ ನಾರಾಯಣ ಗುರು ಸಭಾಗೃಹದಲ್ಲಿ ಅಸೋಸಿಯೇಶನ್‌ನ ಅಧ್ಯಕ್ಷ ಚಂದ್ರಶೇಖರ ಎಸ್. ಪೂಜಾರಿ ಅಧ್ಯಕ್ಷತೆಯಲ್ಲಿ ನಡೆಸಲ್ಪಟ್ಟ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಪದ್ಮನಾಭ ಪಯ್ಯಡೆ ದೈವ ಜಾರಂದಾಯ ಪಾತ್ರಿ ಲಕ್ಷ್ಮೀನಾರಾಯಣ ಅನ್ನು ವಿ.ಪೂಜಾರಿ ಅವರನ್ನು ಸನ್ಮಾನಿಸಿ ಅಭಿನಂದಿಸಿದ್ದು, ಪ್ರಧಾನ ಅಭ್ಯಾಗತರಾಗಿದ್ದ ಮೊಹಿದ್ಧೀನ್ ಮುಂಡ್ಕೂರು ಶುಭಶಂಸನೆಗೈದು ಮಾತನಾಡಿದರು.

ರಾಷ್ಟ್ರೀಯ ಬಿಲ್ಲವರ ಮಹಾ ಮಂಡಲದ ಗೌರವಾಧ್ಯಕ್ಷ, ಭಾರತ್ ಬ್ಯಾಂಕ್‌ನ ಕಾರ್ಯಾಧ್ಯಕ್ಷ ಜಯ ಸಿ.ಸುವರ್ಣ ವಿಶೇಷ ಆಮಂತ್ರಿತರಾಗಿದ್ದು, ಜಿಎಸ್‌ಬಿ ಸಭಾ ದಹಿಸರ್-ಬೋರಿವಿಲಿ ಉಪಾಧ್ಯಕ್ಷ ಸಾಣೂರು ಮನೋಹರ್ ವಿ.ಕಾಮತ್, ಪದ್ಮಶಾಲಿ ಸಮಾಜ ಸೇವಾ ಸಂಘ ಮುಂಬಯಿ ಅಧ್ಯಕ್ಷ ಉತ್ತಮ್ ಶೇರಿಗಾರ್, ಸಾಫಲ್ಯ ಸೇವಾ ಸಂಘ ಮುಂಬಯಿ ಅಧ್ಯಕ್ಷ ಶ್ರೀನಿವಾಸ ಪಿ.ಸಾಫಲ್ಯ, ರಾಮರಾಜ ಕ್ಷತೀಯ ಸೇವಾ ಸಂಘ ಮುಂಬಯಿ ಅಧ್ಯಕ್ಷ ರಾಜ್‌ಕುಮಾರ್ ಕಾರ್ನಾಡ್ ಪ್ರಧಾನ ಅಭ್ಯಾಗತರಾಗಿದ್ದರು.

ಧನಂಜಯ ಎಸ್.ಶಾಂತಿ ಹೋಮ, ಪ್ರಧಾನ ಪೂಜೆ ನೆರವೇರಿಸಿ ಮಹಾರತಿಗೈದು ಅನುಗ್ರಹಿಸಿದರು. ಶೇಖರ್ ಶಾಂತಿ ಉಳ್ಳೂರು, ರವೀಂದ್ರ ಎ.ಶಾಂತಿ ಪೂಜೆಗೈದು ನೆರೆದ ಭಕ್ತರಿಗೆ ತೀರ್ಥ ಪ್ರಸಾದವನ್ನಿತ್ತು ಹರಸಿದರು. ಗಂಗಾಧರ ಸುವರ್ಣ ಗುರುವರ್ಯರನ್ನು ಭಾಗವತಿಕೆ ದಾಟಿಯಲ್ಲಿ ಭಕ್ತಿಸ್ತುತಿಗೈದರು. ಅತಿಥಿ ಅಭ್ಯಾಗತರೆಲ್ಲರೂ ಸಾಂದರ್ಭಿಕವಾಗಿ ಮಾತನಾಡಿ ಬ್ರಹ್ಮಶ್ರೀ ನಾರಾಯಣ ಗುರುಗಳ ಬದುಕು ಮತ್ತು ತತ್ವಗಳ ಮೆಚ್ಚುಗೆ ವ್ಯಕ್ತಪಡಿಸಿ ೧೬೫ನೇ ಜಯಂತ್ಯೋತ್ಸವಕ್ಕೆ ಶುಭಾರೈಸಿದರು.
ನಾನೋರ್ವ ಬಂಟನಾಗಿದ್ದರೂ ನಾನೂ ನಾರಾಯಣ ಗುರುಗಳ ಸಿದ್ಧಾಂತಗಳ ಪಾಲಕ. ಗುರುವರ್ಯರ ಸಮಾಜೋದ್ಧಾರರ ಧ್ಯೇಯ ಮಾದರಿ. ಜಾತಿ, ಮತ, ಧರ್ಮದ ಬಗ್ಗೆ ಕೀಳರಿಮೆ ಕಾಣದ ಗುರುವರ್ಯರು ಹುಟ್ಟು ಪವಾಡ ಪುರುಷರೇ ಸರಿ. ಅವರ ಜೀವನತತ್ವ ಸಂದೇಶ ಎಂದಿಗೂ ಶಾಶ್ವತವಾದುದು. ಮನುಷ್ಯನಿಗೆ ಸ್ವಜಾತಿ ಮೇಲೆ ಪ್ರೀತಿ, ಅಭಿಮಾನವಿರಲಿ. ಆದರೆ ಆಧುನಿಕ ಯುಗದಲ್ಲೂ ಮನುಕುಲದಲ್ಲ್ಲಿ ಜಾತಿ ಮತ ಭೇದ ನಿಂದನೆ ಸಲ್ಲದು. ನಮ್ಮಲ್ಲಿ ಭಾಷೆ, ಜಾತಿಗಳಲ್ಲಿ ಬೇರೆಬೇರೆ ಅಭಿಪ್ರಾಯಗಳಿದ್ದರೂ ಸಂದರ್ಭಿಕವಾಗಿ ನಾವೆಲ್ಲರೂ ಒಂದಾಗಬೇಕು. ಅವಾಗಲೇ ಸಮಗ್ರ ಸಮಾಜದ ಉದ್ದೇಶಗಳು ಪರಿಪೂರ್ಣವಾಗುವುದು. ಸಂಘ ಮುನ್ನಡೆದರೆ ಸಮಾಜ, ರಾಷ್ಟ್ರದ ಮುನ್ನಡೆ ಸಾಧ್ಯ. ಇಂತಹ ಮುನ್ನಡೆ, ಪರಿವರ್ತನಾ ಕಾಲಘಟ್ಟಕ್ಕೆ ಗುರುವರ್ಯರ ತತ್ವಗಳು ಆದರ್ಶ. ಇಂದು ರಾಷ್ಟ್ರದಲ್ಲೇ ಕೇರಳ ರಾಜ್ಯ ಸಾಕ್ಷರತೆಗೆ ನಂಬರ್ ವನ್ ಆಗಿದ್ದರೆ ಅದಕ್ಕೆ ನಾರಾಯಣ ಗುರುಗಳೇ ಕಾರಣ. ಯಾಕೆಂದರೆ ಮನೋಭಾವನೆಗಳ ಪರಿವರ್ತನೆಯಿಂದ ಸಮಾಜ ಸುಧಾರಣೆ ಸಾಧ್ಯ ಎಂದು ಅವರು ಕಾರ್ಯರೂಪದಲ್ಲಿ ತೋರಿಸಿದ್ದಾರೆ. ಇದನ್ನೇ ನಾವು ಮಕ್ಕಳಲ್ಲಿ ರೂಢಿಸಿ ಸಂಸ್ಕೃತಿ ಜೀವನ ಸಾರ್ಥಕವಾಗಿಸಿ ಬಾಳು ಬೆಳಗಿಸಬೇಕು ಎಂದು ಪದ್ಮನಾಭ ಪಯ್ಯಡೆ ತಿಳಿಸಿದರು.

ಮಾನವ ಬದುಕಿಗೆ ಸಂಪತ್ತು, ಐಶ್ವರ್ಯವೊಂದೇ ಭಾಗ್ಯವಲ್ಲ, ಆಧ್ಯಾತ್ಮಿಕವಾದ ಚಿಂತನ ಮಂಥನದ ಆತ್ಮಶುದ್ಧಿಯ ಬದುಕೇ ಶ್ರೇಷ್ಠವಾದ ಭಾಗ್ಯ. ಧಾರ್ಮಿಕ ಚೌಟಕ್ಕಿನ ಒಳಗಿನ ಬಾಳು ಸಂಸ್ಕಾರಯುತವಾದದು. ಆದುದರಿಂದ ಮಕ್ಕಳಲ್ಲಿ ಧಾರ್ಮಿಕ ವಿಚಾರಗಳು ಬೆಳೆದಾಗ ಮನುಷ್ಯ ಸಂಸ್ಕಾರಯುತ ಮಾನವನಾಗಿ ಬೆಳೆಯಲು ಸಾಧ್ಯ ಎಂದು ಶ್ರೀನಿವಾಸ ಸಫಲಿಗ ತಿಳಿಸಿದರು.

ಪರಿವರ್ತನ ಪರ್ವದ ಹರಿಕಾರ ಜಾತಿ ಮತ ಬೇಧವನ್ನಳಿಸಿದ ಧೀರ ಸಮಾಜಸೇವಕ. ಅವರ ಸಾಮರಸ್ಯದ ತತ್ವ ಸಂದೇಶ ಜನಹಿತಕ್ಕೆ ಪೂರಕ. ಒಗ್ಗಟ್ಟಿನಲ್ಲಿ ಬಲವಿದೆ ಅನ್ನುವ ಸತ್ಯಾಸತ್ಯತೆಗಳ ಅನುಭವವನ್ನು ಉತ್ತಮ್ ಶೇರಿಗಾರ್ ತಿಳಿದರು.

ಹಿಂದೂ ಅಂದುಕೊಳ್ಳುವ ಎಲ್ಲಾ ಜನರು ಒಂದಾದರೆನೇ ಧರ್ಮಕ್ಕೆ ಎಂದೂ ಹಿನ್ನಡೆಯಾಗದು. ಪ್ರತೀಯೋರ್ವ ಭಾರತೀಯನಿಗೂ ಏನೂ ಕಡಿಮೆಯಾಗದು. ಇದು ನಮ್ಮ ಜನ್ಮಭೂಮಿ ಎಂದೇಳಲು ಮರೆಯಬಾರದು. ಬರೇ ವಿದ್ಯೆ ಕಲಿಕೆಯಲ್ಲಿ ಮಕ್ಕಳ ವಿಕಸನ ಅಸಾಧ್ಯ. ಬದಲಾಗಿ ಬದುಕು ರೂಪಿಸುವ ಸಂಸ್ಕಾರ ಮಕ್ಕಳಲ್ಲಿ ಮೂಢಿಸಿ ಅವರನ್ನು ಶ್ರೇಷ್ಠ ನಾಗರೀಕರನ್ನಾಗಿಸಿದರೆ ಎಲ್ಲರ ಬಾಳು ಹಸನಾಗುವುದು ಎಂದು ಮನೋಹರ್ ಕಾಮತ್ ತಿಳಿಸಿದರು.

ಎಲ್ಲ ಜನತೆಯ ಮನಸ್ಸು ಪರಿವರ್ತನೆಗೈದ ಮಹಾ ಸಂತ ನಾರಾಯಣ ಗುರು. ಅವರ ಸಮಾಜ ಸೇವೆ ಅರ್ಥಗರ್ಭಿತವಾದದು. ಬುದ್ಧಿಜೀವಿಗಳಾದ ಮಾನವ ಕುಲದ ಭೇದಭಾವ ಶೂನ್ಯತೆಗೆ ಇವರೇ ಆದರ್ಶನೀಯರು. ಹೇಗೆ ಅಂದು ನಾರಾಯಣ ಗುರುಗಳು ಇದ್ದರೋ ಹಾಗೆನೇ ಆಧುನಿಕ ಯುಗಕ್ಕೆ ಜಯ ಸುವರ್ಣರೇ ಗುರುವರ್ಯರು. ನಮ್ಮಂತಹ ಜನರ ಬಾಳಿನ ಆಶಾಕಿರಣರಾದ ಸುವರ್ಣರು ಸರ್ವ ಶ್ರೇಷ್ಠರು ಎಂದರು.
ನಾರಾಯಣ ಗುರುಗಳ ಸಮಾಜಹಿತ ಚಿಂತನೆ ಆಧುನಿಕ ಯುಗಕ್ಕೆ ಆದರ್ಶವಾದದು. ಮಾನವನ ನಾಲ್ಕುದಿನದ ನೆಮ್ಮದಿಯ ಬಾಳ್ವೆಗೆ ಜಾತಿಮತದ ಚೌಕಟ್ಟು ಮನೆಯೊಳಗಿದ್ದು ಸಾರ್ವಜನಿಕವಾಗಿ ಸರ್ವಸಮಾನರಾಗಿ ಒಳ್ಳೆಯ ಮನುಷ್ಯರಾಗಿದ್ದರೆ ಒಳಿತು. ಎಲ್ಲಾ ಸಮಾಜ ಬಾಂಧವರ ಒಗ್ಗಟ್ಟೇ ಸಮಗ್ರ ಸಮಾಜದ ಹಿತವಾಗಿದ್ದರೆ ದೇವರೂ ನಮಗೆ ಮೆಚ್ಚುವರು ಎಂದು ಅಧ್ಯಕ್ಷೀಯ ಭಾಷಣದಲ್ಲಿ ಚಂದ್ರಶೇಖರ ಪೂಜಾರಿ ನುಡಿದರು.

ಅಸೋಸಿಯೇಶನ್‌ನ ಉಪಾಧ್ಯಕ್ಷರುಗಳಾದ ಶಂಕರ ಡಿ.ಪೂಜಾರಿ, ದಯಾನಂದ್ ಆರ್. ಪೂಜಾರಿ, ಶ್ರೀನಿವಾಸ ಆರ್.ಕರ್ಕೇರ, ಗೌರವ ಪ್ರಧಾನ ಕೋಶಾಧಿಕಾರಿ ರಾಜೇಶ್ ಜೆ.ಬಂಗೇರ ವೇದಿಕೆಯಲ್ಲಿದ್ದು, ಯುವಾಭ್ಯುದಯ ಸಮಿತಿ ಕಾರ್ಯಾಧ್ಯಕ್ಷ ನಾಗೇಶ್ ಎನ್.ಕೋಟ್ಯಾನ್, ಮಾಜಿ ಅಧ್ಯಕ್ಷ ಎಲ್.ವಿ ಅಮೀನ್, ಲೀ -ಲಾವತಿ ಜಯ ಸುವರ್ಣ, ಭಾರತ್ ಬ್ಯಾಂಕ್‌ನ ಆಡಳಿತ ನಿರ್ದೇಶಕ ಸಿ.ಆರ್ ಮೂಲ್ಕಿ, ನಿರ್ದೇಶಕರು, ಉನ್ನತಾಧಿಕಾರಿಗಳು ಸೇರಿದಂತೆ ಸ್ಥಳೀಯ ಸಮಿತಿಗಳ ಮುಖ್ಯಸ್ಥರು, ಪದಾಧಿಕಾರಿ, ಸದಸ್ಯರನೇಕರು ಜನ್ಮೋತ್ಸವದಲ್ಲಿ ಪಾಲ್ಗೊಂಡು ಗುರುವರ್ಯರ ಸಂಭ್ರಮಕ್ಕೆ ಪಾತ್ರರಾದರು. ಅಧ್ಯಕ್ಷರು ಗಣ್ಯರನ್ನು ಪುಷ್ಫಗುಪ್ಚ ನೀಡಿ ಗೌರವಿಸಿದರು.

ಸಾಮಾಜಿಕ-ಧಾರ್ಮಿಕ ಸಮಿತಿ ಕಾರ್ಯಧ್ಯಕ್ಷ ಮೋಹನ್‌ದಾಸ್ ಜಿ.ಪೂಜಾರಿ ಸ್ವಾಗತಿಸಿದರು. ಅಸೋಸಿಯೇಶನ್‌ನ ಗೌರವ ಪ್ರಧಾನ ಕಾರ್ಯದರ್ಶಿ ಧನಂಜಯ ಎಸ್.ಶಾಂತಿ ಅತಿಥಿಗಳನ್ನು ಪರಿಚಯಿಸಿ ಪ್ರಸ್ತಾವನೆಗೈದ ಕಾರ್ಯಕ್ರಮ ನಿರೂಪಿಸಿದರು. ಧಾರ್ಮಿಕ ಸಮಿತಿ ಗೌರವ ಕಾರ್ಯದರ್ಶಿ ರವೀಂದ್ರ ಎ.ಅವಿನ್ ವಂದಿಸಿದರು. ಮಂಗಳಾರತಿ, ತೀರ್ಥ ಪ್ರಸಾದ ವಿತರಣೆಯೊಂದಿಗೆ ಉತ್ಸವ ಸಮಾಪ್ತಿ ಕಂಡಿತು.

LEAVE A REPLY

 Click this button or press Ctrl+G to toggle between Kannada and English

Please enter your comment!
Please enter your name here