ಬಹುಷಃ ಮರೆತು ಹೋಗಿರಬಹುದು ನಿನಗೆ
ನಮ್ಮಿಬ್ಬರ ನಡುವಿನ ಮೊದಲ ಪ್ರೇಮದ ಭೇಟಿ
ಅದೇ ಪಾರಿಜಾತದ ಮರದ ಕೆಳಗೆ…
ಮೊದಲ ಪ್ರೇಮ ನಿವೇದನೆ ಜೊತೆಗೆ
ಬದುಕಿನ ಕನಸುಗಳ ರವಾನೆ ಕೂಡ..!

ಅದೆಷ್ಟು ಚೆನ್ನಾಗಿತ್ತು ಬದುಕು,
ಅರಳಿದ ಆ ಪಾರಿಜಾತದ ಹಾಗೆ
ಖುಷಿಯೇ ಬದುಕಿನ ಕಂಪಾಗಿತ್ತು
ನಗುವೇ ಬಾಳಿನ ಇಂಪಾಗಿತ್ತು.
ಅರಳಿದ ನಿನ್ನ ಮುಖಾರವಿಂದವ ನೋಡುವುದೇ
ನನಗೊಂದು ಹಬ್ಬವಾಗಿತ್ತು….!

ಹುಟ್ಟಿಕೊಂಡವು ಎಷ್ಟೋ ಕನಸುಗಳ ಜೊತೆಗೆ
ಕವನಗಳೂ ಕೂಡ
ಅವುಗಳೆಲ್ಲವನು ಜೋಪಾನ ಮಾಡುವುದು
ನನಗೊಂದು ಪ್ರಿಯ ಕೆಲಸವಾಗಿತ್ತು
ಪ್ರತೀ ಕನಸು, ಕವನ ನನ್ನ ಪ್ರೀತಿಯ ಪ್ರತಿಬಿಂಬವಾಗಿತ್ತು…!

ಈಗಲೂ ಏನೋ ಬಡಬಡಿಸುತ್ತಿರುತ್ತೇನೆ.. ಲೇಖನಿ ಹಿಡಿದು ಏನೋ ಗೀಚುತ್ತಿರುತ್ತೇನೆ…
ಅದೇ ಪಾರಿಜಾತದ ಮರದ ಕೆಳಗೆ…
ನೀನಿಲ್ಲದೆ ಹುಚ್ಚಿಯಾದ ನನ್ನ
ದೀನ ಸ್ಥಿತಿಯ ಕಂಡು
ಪಾರಿಜಾತದ ಹೂಗಳು ವಿಷಾದ ನಗುಬೀರುತ್ತವೆ…
ನೆನಪುಗಳು ತೀಕ್ಷ್ಣ ಶೂಲದ ಹಾಗೆ
ಎದೆಯನಿರಿಯುತ್ತವೆ…!

 

*ಪ್ರಮೀಳಾ ರಾಜ್*

LEAVE A REPLY

 Click this button or press Ctrl+G to toggle between Kannada and English

Please enter your comment!
Please enter your name here