(ಚಿತ್ರ / ವರದಿ : ರೋನ್ಸ್ ಬಂಟ್ವಾಳ್)

ಮುಂಬಯಿ: ಮೋಂತಿಹಬ್ಬ ಕರಾವಳಿ ಕ್ರೈಸ್ತರ ಸಂಪ್ರದಾಯಸ್ಥ ಆಚರಣೆಯಾಗಿದ್ದು, ಇದು ಸಂಬಂಧಗಳನ್ನು ಬೆಸೆಯುವ ಹಬ್ಬವಾಗಿದೆ. ಬದುಕನ್ನರಿಸಿ ದೂರಕ್ಕೆ ಸರಿದ ಕುಟುಂಬಸ್ಥರೆಲ್ಲರೂ ಒಗ್ಗೂಡಿ ಹರ್ಷಪಡುವ ಮತ್ತು ಸ್ವಂತಿಕೆಯ ಅಸ್ಮಿತೆ ಸಾರುವ ಹಬ್ಬವಾಗಿದೆ ಎಂದು ದಿವೋ ಕೊಂಕಣಿ ಮತ್ತು ಸೆಕುಲರ್ ಸಿಟಿಝನ್ ಸಾಪ್ತಾಹಿಕದ ಪ್ರಕಾಶಕಿ ಸುಜನ್ಹಾ ಎಲ್.ಕುವೆಲ್ಲೋ ತಿಳಿಸಿದರು.

ಮಹಾರಾಷ್ಟ್ರ ಕೊಂಕಣ್ ಅಸೋಸಿಯೇಶನ್ ಇಂದಿಲ್ಲಿ ಭಾನುವಾರ ಸಂಜೆ ಅಂಧೇರಿ ಪಶ್ಚಿಮದ ವಿದ್ಯಾ ವಿಕಾಸ್ ಶಾಲಾವರಣದ ವೇದಿಕೆಯಲ್ಲಿ ತನ್ನ ರಜತ (೨೫ನೇ) ವಾರ್ಷಿಕ ಕನ್ಯಾಮರಿಯಮ್ಮ ಅವರ ಜನ್ಮೋತ್ಸವ ಅದ್ದೂರಿಯಾಗಿ ಆಚರಿಸಿದ್ದು ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿದ್ದು ಸುಜನ್ಹಾ ಕುವೆಲ್ಲೋ ಮಾತನಾಡಿದರು.

ಕ್ರಿಶ್ಚನ್ ಛೇಂಬರ್ ಆಫ್ ಕಾಮರ್ಸ್ ಎಂಡ್ ಇಂಡಸ್ಟ್ರೀಸ್ ಸಂಸ್ಥೆಯ ಸಂಸ್ಥಾಪಕ ಕಾರ್ಯಾಧ್ಯಕ್ಷ ವಿನ್ಸೆಂಟ್ ಮಥಾಯಸ್, ಪಾರ್ಕ್‌ಸೈಟ್‌ನ ಸೈಂಟ್ ಫ್ರಾನ್ಸಿಸ್ ಕ್ಸೇವಿಯರ್ ಚರ್ಚ್‌ನ ಧರ್ಮಗುರು ರೆ| ಫಾ| ಹ್ಯೂಬರ್‍ಟ್ ಗೋವಿಯಸ್, ಇನ್ಫೆಂಟ್ ಜೀಸಸ್ ಚರ್ಚ್ ಪಂತ್‌ನಗರ್ ಇದರ ಧರ್ಮಗುರು ರೆ| ಫಾ| ನೆಲ್ಸನ್ ಸಲ್ಡಾನ್ಹಾ ಅತಿಥಿ ಅಭ್ಯಾಗತರಾಗಿ ವೇದಿಕೆಯಲ್ಲಿ ಆಸೀನರಾಗಿದ್ದರು. 25 ವರ್ಷಗಳ ಹಿಂದೆ ಕೊಂಕಣ್ ಅಸೋಸಿಯೇಶನ್‌ನ ಉದ್ಘಾಟನೆ ನೆರವೇರಿಸಿದ್ದ ಸುಜನ್ಹಾ ಕುವೆಲ್ಲೋ ಅವರನ್ನು ಅತಿಥಿಗಳು ಸನ್ಮಾನಿಸಿ ಶುಭಾರೈಸಿದರು.

                

ಕಾರ್ಯಕ್ರಮದಲ್ಲಿ ದಿವೋ ಕೊಂಕಣಿ ಸಾಪ್ತಾಹಿಕದ ಸಂಪಾದಕ ಲಾರೇನ್ಸ್ ಕುವೆಲ್ಲೋ, ಸಿಸಿಸಿಐ ಸದಸ್ಯ ಸ್ಟೇನ್ಲಿ ಬಿ.ಫೆರ್ನಾಂಡಿಸ್, ಲ್ಯಾನ್ಸಿ ಡಿಸಿಲ್ವಾ, ಜೆಸ್ಸಿ ಡಿಸಿಲ್ವಾ ಮಹಾಕಾಳಿ, ಡಾಯನ್ ಡಿಸೋಜಾ, ಡೇವಿಡ್ ಕಾಸ್ತೆಲಿನೋ, ಡಾ| ಜೋಯ್ ಡಿಸೋಜಾ, ಐವಿ ಡಿಸೋಜಾ ಮಂಗಳೂರು, ಹೆನ್ರಿ ಪಾಯ್ಸ್, ಪೀಟರ್ ರೆಬೆರೋ, ಫ್ಲೋರಾ ಡಿಸೋಜಾ ಕಲ್ಮಾಡಿ (ಜೆರಿಮೆರಿ) ಮತ್ತಿತರ ಗಣ್ಯರು ವಿಶೇಷ ಆಮಂತ್ರಿತರಾಗಿದ್ದರು.

ಸಮಾರಂಭದ ಆದಿಯಲ್ಲಿ ಫಾ| ಹ್ಯೂಬರ್‍ಟ್ ಗೋವಿಯಸ್ ಮಾತೆ ಮೇರಿಯ ಆರಾಧನೆ ನೆರವೇರಿಸಿ ಹೊಸ ಬತ್ತದ ತೆನೆಗಳನ್ನು ಆಶೀರ್ವಾಚಿಸಿ ಪ್ರಕೃತಿಮಾತೆಯನ್ನು ಸ್ಮರಿಸಿ ಪ್ರಸಂಗವನ್ನೀಡಿ ಭಾರತೀಯರಲ್ಲಿ ಸಾಂಸರಿಕ ಬದುಕು ಪಾವನವಾಗಿಸಲು ಮಹಿಳೆಯ ಪಾತ್ರವೇ ಪ್ರಧಾನ. ಆದುದರಿಂದ ಇಂತಹ ಮಾತೆಯ ಗೌರವಾರ್ಪಣೆ ಎಲ್ಲರ ಹೊಣೆಯಾಗಿದೆ ಎಂದರು.

ಫಾ| ನೆಲ್ಸನ್ ಸಲ್ಡಾನ್ಹಾ ಕೃತಜ್ಞತಾ ದಿವ್ಯಪೂಜೆ ನೆರವೇರಿಸಿ ನೆರೆದ ಭಕ್ತರನ್ನು ಹರಸಿ ಹಬ್ಬದ ವಿಶೇಷತೆಯನ್ನು ವಿವರಿಸಿ ಪ್ರಕೃತಿಮಾತೆಯನ್ನು ಅಭಿವಂದಿಸುವ ಆಚರಣೆಯೇ ಮೊಂತಿಹಬ್ಬ ಆಗಿದೆ. ತಾಯಿಯ ಪ್ರೀತಿ ತಿಳಿದಾಗ ಜೀವನ ಪಾವನವಾಗುವುದು ಅನ್ನುವುದನ್ನು ಈ ಹಬ್ಬ ಸಾರಿ ಹೇಳುತ್ತಿದೆ. ಆದುದರಿಂದ ಇಂತಹ ಮೌಲ್ಯಭರಿತ ಪ್ರೀತಿಯನ್ನು ಪ್ರತೀ ಕುಟುಂಬದಲ್ಲಿ ರೂಪಿಸುವ ಜವಾಬ್ದಾರಿ ಎಲ್ಲರದ್ದಾಗಬೇಕು.ಮೊಂತಿಹಬ್ಬ ಮಾನವಕುಲಕ್ಕೆ ಸಮೃದ್ಧಿಯ ವರವಾಗಿದೆ. ಯಾವ ಕುಟುಂಬದಲ್ಲಿ ಪ್ರೀತಿ ಇದೆಯೋ ಆ ಕುಟುಂಬವು ಶಾಶ್ವತವಾಗಿ ಬಾಳುತ್ತದೆ ಎಂದರು.

ಪೂಜೆಯಲ್ಲಿ ರೋಕ್ ಡಿಕುನ್ಹಾ ಮತ್ತು ಅನಿತಾ ಡಿಸೋಜಾ ಬೈಬಲ್ ವಾಚಿಸಿದರು. ವೆರೋನಿಕಾ ಡಿಸೋಜಾ, ಲಿಲ್ಲಿ ಎಲ್.ಫೆರ್ನಾಂಡಿಸ್, ಆಂಟನಿ ಬುಥೆಲ್ಲೋ ವಿಶ್ವಾಸನೀಯ ಪ್ರಾರ್ಥನೆ ವಾಚಿಸಿದರು. ಪೂಜೆಯ ಆದಿಯಲ್ಲಿ ಪುಟಾಣಿಗಳು ಮತ್ತು ನೆರೆದ ಸದ್ಭಕ್ತರು ಅಲಂಕರಿತ ಮಾತೆ ಮರಿಯಮ್ಮರ ಪ್ರತಿಮೆಗೆ ಪುಷ್ಫವೃಷ್ಠಿಗೈದು ಭಕ್ತಿಪೂರ್ವಕವಾಗಿ ಪ್ರಾರ್ಥನೆ ಸಲ್ಲಿಸಿ ನಮಿಸಿದರು. ಐಡಾ ಮೊಂತೆರೋ, ಹಿಲ್ಡಾ ಫೆರ್ನಾಂಡಿಸ್, ಐರಿನ್ ರೋಡ್ರಿಗಸ್ ಮತ್ತು ಬಳಗ ಪೂಜೆಗೆ ಭಕ್ತಿಗಳನ್ನಾಡಿದರು.

ಅಸೋಸಿಯೇಶನ್‌ನ ಅಧ್ಯಕ್ಷ ಲಿಯೋ ಫೆರ್ನಾಂಡಿಸ್ ಜೆರಿಮೆರಿ ಸ್ವಾಗತಿಸಿ ಅತಿಥಿಗಳನ್ನು ಪರಿಚಯಿಸಿ ಕಾರ್ಯಕ್ರಮ ನಿರ್ವಹಿಸಿದರು. ಸಂಘದ ಹಿತೈಷಿಯಾಗಿದ್ದು ಇತ್ತೀಚೆಗೆ ಮಂಗಳೂರುನ ವೇದಿಕೆಯೊಂದರಲ್ಲಿ ಅಗಲಿದ ಹೆಸರಾಂತ ಸಂಗೀತಕಾರ ಜೆರಾಲ್ಡ್ ಓಝ್ವಲ್ಡ್ ಡಿಸೋಜಾ (ಜೆರಿ ಬಜ್ಜೋಡಿ) ಮತ್ತು ಸಂಘದ ಆರಂಭದಿಂದ ಸಹಕರಿಸಿ ಅಗಲಿದ ಸರ್ವರನ್ನೂ ಸ್ಮರಿಸಲಾಯಿತು. ಉಪಾಧ್ಯಕ್ಷ ವಾಲ್ಟರ್ ಡಿಸೋಜಾ ಕಲ್ಮಾಡಿ, ಗೌ| ಕೋಶಾಧಿಕಾರಿ ಪ್ರಿತೇಶ್ ಕಾಸ್ತೇಲಿನೋ, ಜೊತೆ ಕಾರ್ಯದರ್ಶಿ ಮ್ಯಾನ್ಯುವೆಲ್ ಫೆರ್ನಾಂಡಿಸ್, ಸ್ಟೇನಿ ಡಾಯಸ್, ಜೊತೆ ಕೋಶಾಧಿಕಾರಿ ಆಂಟನಿ ಬುಥೆಲ್ಲೋ, ಜೋನ್ ರೋಡ್ರಿಗಸ್, ಫೆಡ್ರಿಕ್ ಕಾರ್ಡೋಜಾ, ವಿಕ್ಟರ್ ಪಿರೇರಾ, ಅತಿಥಿಗಳಿಗೆ ಪುಷ್ಫಗುಪ್ಚ ನೀಡಿ ಗೌರವಿಸಿದರು. ಗೌ| ಕಾರ್ಯದರ್ಶಿ ಸ್ಟೀಫನ್ ಲೋಬೋ ಕೃತಜ್ಞತೆ ಸಮರ್ಪಿಸಿದರು.

ಅಸೋಸಿಯೇಶನ್‌ನ ಸದಸ್ಯರನೇಕರು ಸಂಗೀತ ಮತ್ತು ಮಹಿಳಾ ಸದಸ್ಯೆಯರು ಮತ್ತು ಆಲ್ವಿನ್ ಡಿಸೋಜಾ ಮಹಾಕಾಳಿ ತಂಡವು ನೃತ್ಯಗಳನ ಸಾದರ ಪಡಿಸಿದರು. ಕೊನೆಯಲ್ಲಿ ಸಾಂಪ್ರದಾಯಿಕ ಶುದ್ಧ ಶಾಖಾಹಾರಿ ಹೊಸಅಕ್ಕಿ ಭೋಜನ ಏರ್ಪಡಿಸಲಾಗಿ ಸಂಪ್ರದಾಯದಂತೆ ಸವಿಯೂಟ ಉಂಡು ಮಕ್ಕಳಿಗೆ ಕಬ್ಬು ನೀಡಿ ವಾರ್ಷಿಕ ತೆನೆಹಬ್ಬ ಸಮಾಪನ ಕಂಡಿತು.

LEAVE A REPLY

 Click this button or press Ctrl+G to toggle between Kannada and English

Please enter your comment!
Please enter your name here