ಬಂಟ್ವಾಳ: ಬಂಟ್ವಾಳ ತಾಲೂಕು ಮಟ್ಟದ ಎಲ್ಲ ಇಲಾಖೆಗಳಿಗೆ ಸಂಬಂಧಪಟ್ಟ ಸಾರ್ವಜನಿಕ ಕುಂದುಕೊರತೆ ಸಭೆ ಹಾಗೂ ಸಾರ್ವಜನಿಕ ಅಹವಾಲು ಸ್ವೀಕಾರ ಕಾರ್ಯಕ್ರಮ ಶನಿವಾರ ಬಿ.ಸಿ.ರೋಡಿನ ಮಿನಿವಿಧಾನ ಸೌಧದಲ್ಲಿ ಜರಗಿತು.
ತಹಶೀಲ್ದಾರ್ ರಶ್ಮಿ ಎಸ್.ಆರ್. ಉಪಸ್ಥಿತಿಯಲ್ಲಿ ಲೋಕಾಯುಕ್ತ ಪೊಲೀಸ್ ಅಧೀಕ್ಷಕ ಕೆ.ಎನ್. ಮಾದಯ್ಯ ಅವರು ಸಭೆಯನ್ನು ಉದ್ಘಾಟಿಸಿದರು.
ತಾಲೂಕಿನ ಕೆರೆಗಳನ್ನು ಹಾಗೂ ರಾಜಕಾಲುವೆಗಳನ್ನು ಅಕ್ರಮ ಒತ್ತುವರಿ ಮಾಡಲಾಗಿದೆ. ಬಿಮೂಡಾ ಗ್ರಾಮದಲ್ಲಿ ಕೆರೆಗೆ ಮಣ್ಣು ತುಂಬಿಸಲಾಗಿದೆ. ಕೆರೆಯ ಒತ್ತುವರಿಯ ಕುರಿತು ಆರ್‌ಟಿಸಿ ನಂಬರ್ ನೀಡಿ ಈ ಬಗ್ಗೆ ಮಾಹಿತಿ ಹಕ್ಕಿನಡಿ ಮಾಹಿತಿ ಕೇಳಿದಾಗ, ಆರ್‌ಟಿಸಿ ನಂಬರ್ ಬದಲಿಸಿ ತಪ್ಪು ಮಾಹಿತಿ ನೀಡಲಾಗಿದೆ ಎಂದು ಪಾಣೆಮಂಗಳೂರು ನಿವಾಸಿ ಶಬೀರ್ ಅವರು ದೂರಿಕೊಂಡರು. ಅದಲ್ಲದೆ, ಆಲಡ್ಕ ಹೆದ್ದಾರಿಯ ಸಮೀಪದ ರಾಜಕಾಲುವೆಯನ್ನು ಒತ್ತುವರಿಯಿಂದ ಕಾಲುವೆಯು ಕಿರಿದಾಗಿದೆ. ಇದೀಗ ಮಳೆಯ ನೀರು ಸರಾಗವಾಗಿ ಹರಿಯದೇ ಇಲ್ಲಿನ ಪ್ರದೇಶಗಳ ಕೃಷಿ ಭೂಮಿ ಸಹಿತ ತೋಟಗಳಿಗೆ ನೀರು ನಿಲ್ಲುವಂತಾಗಿದೆ ಎಂದು ಆರೋಪಿಸಿದರು. ವಾರದೊಳಗೆ ಈ ಕುರಿತು ಪರಿಶೀಲಿಸಿ ಸೂಕ್ತ ಕ್ರಮ ಕೈಗೊಳ್ಳುವುದಾಗಿ ತಹಶೀಲ್ದಾರ್ ತಿಳಿಸಿದರು.
ಬಂಟ್ವಾಳ ಪುರಸಭೆ ವ್ಯಾಪ್ತಿಯ ಸಮಸ್ಯೆಗಳು ಸಭೆಯಲ್ಲಿ ಕೇಳಿ ಬಂದವು. ಹಾರೂನ್ ರಶೀದ್ ವಿವಿಧ ವಿಷಯಗಳ ಬಗ್ಗೆ ಮಾತನಾಡಿದರು.
ಸಾರ್ವಜನಿಕರಿಂದ ಅಹವಾಲು ಸ್ವೀಕಾರದ ಕುರಿತು ಮಾಹಿತಿಯನ್ನು ವಾರದ ಮೊದಲೇ ಎಲ್ಲ ಸರಕಾರಿ ಕಚೇರಿಗಳ ಮುಂದೆ ಬ್ಯಾನರ್ ಕಟ್ಟುವುದರ ಮೂಲಕ ಪ್ರಚಾರ ನೀಡಬೇಕು ಎಂದು ಪತ್ರಕರ್ತ ಫಾರೂಕ್ ಬಂಟ್ವಾಳ ಸಲಹೆ ನೀಡಿದರು.
ಈ ಸಂದರ್ಭದಲ್ಲಿ ಲೋಕಾಯುಕ್ತ ಪೊಲೀಸ್ ಉಪಾಧೀಕ್ಷಕ ಎಸ್. ವಿಜಯ ಪ್ರಸಾದ್, ಕಲಾವತಿ, ಪೊಲೀಸ್ ನಿರೀಕ್ಷಕಿ ಭಾರತಿ, ಸಿಬ್ಬಂದಿ ಶಶಿಧರ್, ಸುರೇಂದ್ರ, ಲೋಕೇಶ, ಪ್ರದೀಪ್, ರಾಧೇಶ್ ಹಾಜರಿದ್ದರು. ಪಾಣೆಮಂಗಳೂರು ಹೋಬಳಿ ಕಂದಾಯ ರಾಮ ಕಾಟಿಪಳ್ಳ ಸ್ವಾಗತಿಸಿ, ವಂದಿಸಿದರು.

LEAVE A REPLY

 Click this button or press Ctrl+G to toggle between Kannada and English

Please enter your comment!
Please enter your name here