(ಚಿತ್ರ / ಮಾಹಿತಿ: ರೊನಿಡಾ ಮುಂಬಯಿ)

ಉಕ್ತಿಯೊಂದು ಹೀಗೆ ಹೇಳುತ್ತದೆ…… ಮನೆಗೊಬ್ಬ ಮಗಳಿರಲು ಮನವೆಲ್ಲ ವೃಂದಾವನ ಎಂಬುದಾಗಿ…….
ಅಂದರೆ, ಮನೆಯ ಮುಂದಿನ ವೃಂದಾವನ ಎನ್ನುವಂಥದ್ದು ಆ ಮನೆಯ ಧನಾತ್ಮಕ ಶಕ್ತಿಯನ್ನು ವೃದ್ಧಿಸುತ್ತದೆ, ಹಾಗೆಯೇ ಮನೆಗೊಬ್ಬ ಮಗಳಿದ್ದಾಗ ಅವಳಿಂದ ಇಡೀ ಮನೆಯ ಮನ ಸಮೃದ್ಧಿಸುವುದು ಎಂಬ ತಾತ್ಪರ್ಯ.
ಈಕೆಯೂ ಮನೆಗೊಬ್ಬ ಮಗಳು…. ಸುಭಾಶಿತಕ್ಕೆ ಕಲಶಪ್ರಾಯವಾದಂತೆ ಇವಳ ಸುನಾಮಧೇಯ ವೃಂದಾ ಕೊನ್ನಾರ್ ಎನ್ನುವುದಾಗಿ . ಸಾಧನೆಯನ್ನೇ ಉಸಿರಾಗಿಸಿಕೊಂಡ ಈಕೆಯ ಬಗ್ಗೆ, ಅವಳ ಸಾಧನೆಗಳ ಬಗ್ಗೆ ಸಂಕ್ಷಿಪ್ತ ಮುನ್ನೋಟ.

ಕರ್ನಾಟಕ ಕರಾವಳಿಯ ಮಂಗಳೂರು ಇಲ್ಲಿನ ಬೈಕಂಪಾಡಿ ನಿವಾಸಿಗಳಾದ ಬಿ.ಸುಬ್ಬರಾವ್ ಹಾಗೂ ವಿದ್ಯಾ ಎಸ್.ರಾವ್ ದಂಪತಿಯ ಸುಪುತ್ರಿಯಾಗಿ ವೃಂದಾ ಜನಿಸಿದರು. ಸುಸಂಸ್ಕೃತ ಕೃಷಿ ಕುಟುಂಬದವರಾದ ಇವರು, ಆಥಿಕವಾಗಿ ಮಧ್ಯಮ ವರ್ಗದ ಜೀವನಶೈಲಿ ನಡೆಸಿಕೊಂಡು ಬಂದವರು. ವೃಂದಾ ತನ್ನ ಪ್ರಾಥಮಿಕ ಶಿಕ್ಷಣವನ್ನು ಎನ್‌ಎಂಪಿ ಮಹಿಳಾ ಸಮಾಜ ನರ್ಸರಿ ಶಾಲೆ, ಮಾಧ್ಯಮಿಕ-ಪ್ರೌಢ ಶಿಕ್ಷಣವನ್ನು ಎನ್‌ಎಂಪಿಟಿ ಹೈಸ್ಕೂಲು ಪಣಂಬೂರು ಇಲ್ಲಿ ಪೂರೈಸಿ, ಪದವಿಪೂರ್ವ ಹಾಗೂ ಬಿ.ಕಾಂ ಪದವಿ ಶಿಕ್ಷಣವನ್ನು ಸುರತ್ಕಲ್‌ನ ಗೋವಿಂದದಾಸ ಕಾಲೇಜ್‌ನಲ್ಲಿ ಪಡೆದರು. ಪ್ರಸ್ತುತ ಸಿಎ| ಬಿ.ಸುದೇಶ್ ಕುಮಾರ್ ರೈ ಇವರಲ್ಲಿ ಚಾರ್ಟಡ್ ಅಕೌಂಟೆಂಟ್ ವೃತ್ತಿಶಿಕ್ಷಣ ಪಡೆಯುತ್ತಿದ್ದಾರೆ. ಇವಿಷ್ಟು ಈಕೆಯ ಶೈಕ್ಷಣಿಕ ಮುನ್ನೋಟವಾದರೆ, ಸಾಧನೆಗಳ ಪಟ್ಟಿ ಇನ್ನೂ ದೊಡ್ಡದು ಎಂದು ಈಕೆಯ ಕುಟುಂಬ ಸಂಬಂಧಿ ತೋನ್ಸೆ ಬಿ.ರಮಾನಂದ ರಾವ್ (ಕಲೀನಾ, ಮುಂಬಯಿ) ವರ್ಣಿಸುತ್ತಿದ್ದಾರೆ.

ಬಾಲ್ಯದಿಂದಲೇ ಕಲೆ-ಸಂಸ್ಕೃತಿಗಳತ್ತ ಆಕರ್ಷಿತಳಾಗಿದ್ದ ಈಕೆ, ತನ್ನ ಪ್ರಾಥಮಿಕ ತರಗತಿಗಳಿಂದಲೂ ಕಲೆಯಲ್ಲಿ ತನ್ನನ್ನು ತಾನು ತೊಡಗಿಸಿಕೊಂಡವಳು. ತನ್ನ ಎರಡನೇ ತರಗತಿಯಲ್ಲೇ ಆರನೇ ಅಂತರ್ರಾಷ್ಟ್ರೀಯ ಮಟ್ಟದ ವಿಜ್ಞಾನ ಪ್ರತಿಭಾನ್ವೇಷಣಾ ಪರೀಕ್ಷೆಯಲ್ಲಿ , ಇಡೀ ರಾಜ್ಯಕ್ಕೆ ೮ ನೇ ಸ್ಥಾನವನ್ನು ಪಡೆದು, ಬಾಲ್ಯದಲ್ಲೇ ಸಾಧನೆಯ ಭರವಸೆಯನ್ನು ಮೂಡಿಸಿದವಳು. ಹಾಗೆಯೇ ೨೦೦೫ರಲ್ಲಿ ಗಣಿತ ಪ್ರತಿಭಾ ಪರೀಕ್ಷೆಯಲ್ಲಿ ಪ್ರಥಮ ಸ್ಥಾನ ಪಡೆದವಳು. ಇನ್ನು ಈಕೆಯ ಅಭಿರುಚಿ-ಹವ್ಯಾಸಗಳು ಒಂದೇ ಎರಡೇ…..

ಚಿತ್ರಕಲೆ (ವೇಗದ ಚಿತ್ರಕಲೆ, ಮುಖವರ್ಣಿಕೆ, ಗ್ಲೋ ಆರ್ಟ್, ವರ್ಲಿ ಆರ್ಟ್, ಯಕ್ಷಗಾನ, ಭಾಷಣ, ನಿರೂಪಣೆ, ರಂಗಭೂಮಿ, ಛದ್ಮವೇಷ, ಕ್ರಾಫ್ಟ್, ಕ್ಲೇ ಮಾಡೆಲಿಂಗ್, ರಂಗೋಲಿ, ಏಕಪಾತ್ರಾಭಿನಯ, ಬೀದಿನಾಟಕ , ಸೃಜನಾತ್ಮಕ ಬರವಣಿಗೆ ( ಪ್ರಬಂಧ ಹಾಗೂ ಕವನಗಳು), ಪೇಪರ್ ಪ್ರೆಸೆಂಟೇಷನ್, ಚರ್ಚೆ , ಪಿಕ್ & ಸ್ಪೀಕ್, ರಸಪ್ರಶ್ನೆ , ಜಾನಪದ ನೃತ್ಯ , ಯೋಗ ಇನ್ನೂ ಅನೇಕ. ಇದಲ್ಲದೆ ಕ್ರೀಡಾ ಕ್ಷೇತ್ರದಲ್ಲೂ ಸಹ ತನ್ನ ಇರವನ್ನು ಬಿಟ್ಟುಕೊಡದ ಈಕೆ, ಕಬಡ್ಡಿ, ಹೈ ಜಂಪ್ ಕ್ರೀಡೆಗಳಲ್ಲೂ ಕೂಡ ಭಾಗವಹಿಸಿ (ಶಾಲಾ ದಿನಗಳಲ್ಲಿ ಜಿಲ್ಲಾ ಹಾಗು ವಲಯ ಮಟ್ಟದ ಕ್ರೀಡಾಕೂಟದಲ್ಲಿ ಪ್ರಥಮ ಸ್ಥಾನ ಪಡೆದಿದ್ದಾರೆ).

ಎಲ್ಲಾ ಕ್ಷೇತ್ರಗಳಲ್ಲೂ ಭಾಗವಹಿಸುವುದು ಮಾತ್ರ ಈಕೆಯ ಅಭಿರುಚಿಯಲ್ಲ. ತಾನು ಕಾಲಿಟ್ಟ ಕ್ಷೇತ್ರದಲ್ಲಿ ಏನಾದರೊಂದು ಸಾಧನೆ ಮಾಡಲೇಬೇಕು ಎನ್ನುವ ಛಲ ಅವಳದ್ದು. ಕಲೆ-ಸಾಹಿತ್ಯ -ಸಂಸ್ಕೃತಿ-ಕ್ರೀಡೆ ಜೊತೆಗೆ, ಶೈಕ್ಷಣಿಕ ಕ್ಷೇತ್ರದಲ್ಲೂ ಈಕೆಯ ಸಾಧನೆಗಳು, ಈಕೆ ಪಡೆದ ಪ್ರಶಸ್ತಿ-ಪುರಸ್ಕಾರಗಳ ಬಗ್ಗೆ ಎರಡು ನುಡಿಗಳಲ್ಲಿ ಹೇಳಲೇಬೇಕಾಗುತ್ತದೆ.

ಮೊದಲಾಗಿ ಶೈಕ್ಷಣಿಕ ಸಾಧನೆಯನ್ನು ಹೇಳುವುದಾದರೆ, ೨೦೧೩ನೇ ಸಾಲಿನ ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ೯೮.೨೪% ಅಂಕ ಪಡೆದು, ರಾಜ್ಯಕ್ಕೆ ೯ನೇ ಸ್ಥಾನ ಪಡೆದವಳು. ಹಾಗೇ ೨೦೧೫ನೇ ಸಾಲಿನ ಪಿಯುಸಿ ಪರೀಕ್ಷೆಯಲ್ಲಿ ವಾಣಿಜ್ಯ ವಿಭಾಗದಲ್ಲಿ ಶೇ.೯೮.೧೭% ಅಂಕ ಪಡೆದು, ರಾಜ್ಯಕ್ಕೆ ೫ನೇ ಸ್ಥಾನವನ್ನು ಗಳಿಸಿದ್ದೇ ಅಲ್ಲದೆ, ಸಿಎ-ಸಿ.ಪಿ.ಟಿ ಹಾಗೂ ಸಿ.ಎ-ಐ.ಪಿ.ಸಿ.ಸಿ ಪರೀಕ್ಷೆಯಲ್ಲಿ ಅತ್ಯುತ್ತಮ ಶ್ರೇಣಿಯಲ್ಲಿ ಉತ್ತೀರ್ಣ ಆಗುವುದರೊಂದಿಗೆ, ಪದವಿ ಶಿಕ್ಷಣ (ಬಿ.ಕಾಂ ಪದವಿ), ೯೪.೮೪% ಅಂಕದೊಂದಿಗೆ ಪೂರೈಸಿ, ವಿಶ್ವವಿದ್ಯಾಲಯಕ್ಕೆ ಎರಡನೇ ರ್‍ಯಾಂಕ್ ಪಡೆದದ್ದು ಈಕೆಯ ಶೈಕ್ಷಣಿಕ ಸಾಧನೆಗೆ ಮುಕುಟಪ್ರಾಯ.

ಇನ್ನು ಈಕೆಯ ಕಲಾಜೀವನದ ಸಾಧನೆಗಳನ್ನು ನೋಡುವುದಾದರೆ, ಚಿತ್ರಕಲೆಯ ಕ್ಷೇತ್ರದಲ್ಲಿ ಸೀನಿಯರ್ ಡ್ರಾಯಿಂಗ್ ಗ್ರೇಡ್ ಪರೀಕ್ಷೆಯಲ್ಲಿ ಮಂಗಳೂರಿನಲ್ಲಿ ಪ್ರಥಮ ಸ್ಥಾನ ವಿಜೇತೆ ಈಕೆ. ಅದಲ್ಲದೆ ವಿಜಯ ಕರ್ನಾಟಕ ಪತ್ರಿಕೆಯ ರಾಜ್ಯಮಟ್ಟದ ಚಿತ್ರಕಲಾಸ್ಪರ್ಧೆಯಲ್ಲಿ , ಆರು ಸಾವಿರ ಸ್ಪರ್ಧಿಗಳ ನಡುವೆ ಅಗ್ರ ೧೦ರ ಯಾದಿಯಲ್ಲಿ ಸ್ಥಾನ ಪಡೆದ ಸಾಧಕಿ ಈಕೆ. ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ವತಿಯಿಂದ ನಡೆದ ರಾಜ್ಯ ಮಟ್ಟದ ಅಂಚೆ ಕುಂಚ ಸ್ಪರ್ಧೆಯಲ್ಲಿ ಭಾಗವಹಿಸಿ ಸಮಾಧಾನಕರ ಬಹುಮಾನ ಪಡೆದಿದ್ದಾಳೆ. ಜಲವರ್ಣ, ತೈಲವರ್ಣ, ಅಕ್ರಿಲಿಕ್ ಪೆನ್ಸಿಲ್ ಸ್ಕೆಚ್ ,ಚಾರ್ ಕೋಲ್ ,ಪೆನ್ ಡ್ರಾಯಿಂಗ್ ,ಪೋರ್ಟ್ರೇಟ್ ಇತ್ಯಾದಿಗಳಲ್ಲಿ ಪರಿಣತಿ ಹೊಂದಿದ್ದಾರೆ.

ಅನೇಕ ಶಾಲಾ ಕಾಲೇಜುಗಳು, ಫ್ಲೈ ಓವರ್ ಗಳಲ್ಲಿ ವರ್ಲಿ ಆರ್ಟ್‌ನ್ನು ಬಿಡಿಸಿ, ತನ್ನ ಚಿತ್ರಕಲಾಪಾಂಡಿತ್ಯವನ್ನು ಪ್ರದರ್ಶಿಸಿದವಳು. ಇನ್ನು ಯಕ್ಷಗಾನ ಕ್ಷೇತ್ರದಲ್ಲಿ ತನ್ನ ವಿಶೇಷ ಛಾಪನ್ನು ಮೂಡಿಸಿರುವ ಈಕೆ , ಯಕ್ಷಕಲೆಯನ್ನು ತನ್ನ ದೇವರಂತೆ ಪೂಜಿಸುತ್ತಾಳೆ. ಕನ್ನಡ, ಇಂಗ್ಲಿಷ್, ತುಳು ಹಾಗೂ ಸಂಸ್ಕೃತ ಭಾಷೆಗಳಲ್ಲೂ ಯಕ್ಷಗಾನ ಪ್ರದರ್ಶನ ನೀಡಿದ ಈಕೆ, ಸಾತ್ವಿಕ, ಪುಂಡುವೇಷ, ರೌದ್ರ, ಸ್ತ್ರೀವೇಷ ಹಾಗೂ ಎಲ್ಲಾ ತರಹದ ಯಕ್ಷವೇಷಗಳನ್ನೂ ನಿಭಾಯಿಸಿ, ಯಕ್ಷಗಾನ ತಾಳಮದ್ದಳೆಯ ಅರ್ಥಗಾರಿಕೆಯನ್ನೂ ನಿರ್ವಹಿಸಿ ಸೈ ಎನಿಸಿಕೊಂಡಿದ್ದು, ಜೊತೆಗೆ ಆಕಾಶವಾಣಿಯಲ್ಲಿ ಕೂಡ ಹಲವು ಪ್ರೋಗ್ರಾಂಗಳನ್ನು ಕೊಟ್ಟಿದ್ದಾರೆ.

ಶ್ರೀ ದೇವಿ, ಭೀಷ್ಮ, ಶಶಿಪ್ರಭೆ, ರಾಮ, ಕೃಷ್ಣ, ಮೈಂದ, ವಿಷ್ಣು, ದೇವೇಂದ್ರ, ರಕ್ತಬೀಜ, ಕಾರ್ತವೀರ್ಯ, ಮಾಲಿನಿ ದ್ರೌಪದಿ, ಸತ್ಯಭಾಮೆ, ಕಿರಾತಕ, ವಿಜಯ, ಸುದೇವ ,ಜಮದಗ್ನಿ ಇತ್ಯಾದಿ. ಅನೇಕ ಯಕ್ಷಗಾನ ಸ್ಪರ್ಧೆಗಳಲ್ಲಿ ಭಾಗವಹಿಸಿ ತಂಡ ಪ್ರಶಸ್ತಿಗೆ ತನ್ನ ಕೊಡುಗೆ ನೀಡಿದ್ದಾಳೆ. ಈಕೆಯ ಶ್ರೀ ಕೃಷ್ಣನ ಪಾತ್ರಕ್ಕೆ ವೈಯಕ್ತಿಕ ಬಹುಮಾನ ಪಡೆದಿದ್ದಾಳೆ. ಪಣಂಬೂರು ಮಕ್ಕಳ ಮೇಳ, ಶಾರದಾ ಯಕ್ಷ ಕಲಾ ಕೇಂದ್ರ ಉರ್ವಸ್ಟೋರ್, ಸನಾತನ ಯಕ್ಷಾಲಯ ಮಂಗಳೂರು, ಮಹಿಳಾ ಮತ್ತು ಮಕ್ಕಳ ಯಕ್ಷಗಾನ ಸಂಘ ಬಾಳ, ಯಕ್ಷಾರಾಧನ ಕಲಾಕೇಂದ್ರ ಉರ್ವಸ್ಟೋರ್ ಮುಂತಾದ ಕಡೆಗಳಲ್ಲಿ ವೇಷ ನಿರ್ವಹಿಸಿದ್ದಾಳೆ.

ಇನ್ನು ಭಾಷಣ -ಆಶುಭಾಷಣ- ನಿರೂಪಣೆ ಎಂದರೆ ಈಕೆಗೆ ಎಲ್ಲಿಲ್ಲದ ಪ್ರೀತಿ…
೨೦೧೩ ರಲ್ಲಿ ಗುಲ್ಬರ್ಗಾದ ರಾಣದಾಲಾದಲ್ಲಿ ನಡೆದ ಸಂಸ್ಕೃತ ಭಾಷಣ ಸ್ಪರ್ಧೆಯಲ್ಲಿ ಭಾಗವಹಿಸಿದ್ದು ಹಾಗೂ ೨೦೧೮ ರ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಕವನವಾಚನಗೈದದ್ದು ಈಕೆಯ ಹೆಮ್ಮೆ..
ಹಾಗೇ , ೨೦೧೬ ರಲ್ಲಿ ಮೈಸೂರಿನಲ್ಲಿ ನಡೆದ ರಾಜ್ಯಮಟ್ಟದ ಸಂಸ್ಕೃತ ಸಮ್ಮೇಳನದಲ್ಲಿ ಭಾಗವಹಿಸಿರುವ ಈಕೆ, ಇನ್ನೂ ಅನೇಕಾನೇಕ ಕಾರ್ಯಕ್ರಮಗಳ ನಿರೂಪಕಿ ಆಗಿಯೂ, ದಿಕ್ಸೂಚಿ ಭಾಷಣಕಾರಳಾಗಿಯೂ ಮಿಂಚಿದ್ದಾಳೆ.

ಇನ್ನು ರಂಗಭೂಮಿ-ನಟನೆಯತ್ತ ಕೂಡ ಈಕೆಯ ಒಲವು ಕಮ್ಮಿಯಿಲ್ಲ. ಉಡುಪಿಯಲ್ಲಿ ನಡೆದ ೨೦೧೬ರ ರಾಷ್ಟ್ರೀಯ ಪ್ರತಿಭೋತ್ಸವದಲ್ಲಿ ಭಾಗವಹಿಸಿದ್ದು, ಎಸ್‌ಡಿಎಂ ಉಜಿರೆ ಇಲ್ಲಿ ನಡೆದ ನಾಟಕ ಸ್ಪರ್ಧೆಯಲ್ಲಿ ಭಾಗವಹಿಸಿ ತೃತೀಯ ಪ್ರಶಸ್ತಿ ಪಡೆದದ್ದು ಅಲ್ಲದೇ, ನಾಟಕಕ್ಷೇತ್ರದಲ್ಲಿ ಈಕೆಯ ಸಾಧನೆಗೆ ಕಲಶಪ್ರಾಯವಾಗಿ , ೨೦೧೭ರಲ್ಲಿ ಚೆನ್ನೈನಲ್ಲಿ ನಡೆದ ಸೌತ್ ಝೋನ್ ನಾಟಕ ಸ್ಪರ್ಧೆಯಲ್ಲಿ ಮಂಗಳೂರು ವಿಶ್ವವಿದ್ಯಾಲಯವನ್ನು ಪ್ರತಿನಿಧಿಸಿ, ಎರಡನೇ ಸ್ಥಾನವನ್ನು ಪಡೆದ ಸಾಧಕಿ ಈಕೆ. ಅದಲ್ಲದೆ, ೨೦೧೮ರಲ್ಲಿ ರಾಂಚಿಯಲ್ಲಿ ನಡೆದ ರಾಷ್ಟ್ರಮಟ್ಟದ ಅಂತರ್ ವಿಶ್ವವಿದ್ಯಾಲಯ ನಾಟಕ ಸ್ಪರ್ಧೆಯಲ್ಲಿ, ಪ್ರಥಮ ಸ್ಥಾನ ಪಡೆದು , ಸೌತ್ ಏಷ್ಯನ್ ಮಟ್ಟದ ಸ್ಪರ್ಧೆಗೆ ಆಯ್ಕೆಯಾದದ್ದು , ಕರುನಾಡಿಗೇ ಹೆಮ್ಮೆ ತರುವಂತಹ ವಿಷಯ. ರಸಪ್ರಶ್ನೆಯಲ್ಲೂ ಈಕೆ ಸಾಧನೆಗಳನ್ನು ಗೈದಿರುವಳೆಂದರೆ, ಅದು ಮೂಗಿನ ಮೇಲೆ ಬೆರಳಿಡಬೇಕಾದ್ದೇ. ೨೦೧೩ರ ಶಾರದಾ ಜ್ಞಾನ ಸುಧಾ ರಸಪ್ರಶ್ನೆ ಸ್ಪರ್ಧೆಯಲ್ಲಿ ಬಹುಮಾನ ಪಡೆದ ಈಕೆ, ೨೦೧೭ರ ಅಖಿಲ ಭಾರತ ಪ್ರಬಂಧ ಸ್ಪರ್ಧೆಯಲ್ಲಿ ಕರ್ನಾಟಕ ರಾಜ್ಯಕ್ಕೆ ಆರನೇ ಸ್ಥಾನಕ್ಕೆ ಭಾಜನರಾಗಿದ್ದಾರೆ.

ಇನ್ನು ಈಕೆ ಪಡೆದ ಪ್ರಶಸ್ತಿ ಪುರಸ್ಕಾರಗಳು ಒಂದೇ ಎರಡೇ.
ಜ್ಞಾನ ಮಂದಾರ ಶೈಕ್ಷಣಿಕ ಮತ್ತು ಸಾಂಸ್ಕೃತಿಕ ಅಕಾಡೆಮಿಯಿಂದ ಕರ್ನಾಟಕ ಚೇತನ ರಾಜ್ಯಪ್ರಶಸ್ತಿ, ಮಂಗಳೂರು ಕಲಾಸಂಗಮ ವೇದಿಕೆಯಿಂದ ಕಲಾಸಂಗಮ ಪುರಸ್ಕಾರ, ಮೂಡುಬಿದ್ರೆಯಲ್ಲಿ ನಡೆದ ಬೆಳದಿಂಗಳ ಸಾಹಿತ್ಯ ಸಮ್ಮೇಳನದಲ್ಲಿ ಕರ್ನಾಟಕ ಪ್ರತಿಭಾ ರತ್ನ ಪುರಸ್ಕಾರ, 2017 ರಲ್ಲಿ ರೋಟರ್ಯಾಕ್ಟ್ ಯೂತ್ ಲೀಡರ್ ಶಿಪ್ ಅವಾರ್ಡ್ಸ್ ನಲ್ಲಿ ಬೆಸ್ಟ್ ಔಟ್ ಸ್ಟಾಂಡಿಂಗ್ ಪರ್ಫಾರ್ಮರ್ ಅವಾರ್ಡ್ , ದಿವ್ಯಾಸ್ ಬೆಸ್ಟ್ ಸ್ಟುಡೆಂಟ್ ಆಫ್ ದ ಯಿಯರ್ -೨೦೧೭-೧೮ ರಾಜ್ಯಪ್ರಶಸ್ತಿ, ವಿಶ್ವವಿದ್ಯಾಲಯ ಮಟ್ಟದ ನಿರೂಪಣೆ ಸ್ಪರ್ಧೆಯಲ್ಲಿ ಪ್ರಥಮ ಪ್ರಶಸ್ತಿ, 2005ರಲ್ಲಿ ಹೀರಾಕ್ ಪಂಖ್ ಸರ್ಟಿಫಿಕೇಟ್ ( ಮಾಜಿ ರಾಜ್ಯಪಾಲ ಟಿ.ಎನ್ ಚತುರ್ವೇದಿ ಅವರ ಹಸ್ತಾಕ್ಷರವುಳ್ಳ ಪ್ರಮಾಣಪತ್ರ ಗಳಿಸಿ), ಯಕ್ಷಪ್ರತಿಭಾ ಪ್ರಶಸ್ತಿ, ಬೆಸ್ಟ್ ಔಟ್ ಗೊಯಿಂಗ್ ಸ್ಟುಡೆಂಟ್-೨೦೧೫ ಹಾಗೂ ಬೆಸ್ಟ್ ಔಟ್ ಗೊಯಿಂಗ್ ಸ್ಟೂಡೆಂಟ್-೨೦೧೮ನ್ನು ಗೋವಿಂದದಾಸ್ ಕಾಲೇಜ್‌ನಲ್ಲಿ ಕ್ರಮವಾಗಿ ತನ್ನ ಪಿಯು ವಿದ್ಯಾಭ್ಯಾಸ ಹಾಗೂ ಜುಬಿಲಿ ಸೆಲೇಬ್ರೇಷನ್ ಅವಧಿಯಲ್ಲಿ ಪಡೆದವಳು.

ತನ್ನ ಪಿಯು ಶೈಕ್ಷಣಿಕ ಸಾಧನೆಗಾಗಿ ಅಖಿಲ ಕರ್ನಾಟಕ ಬ್ರಾಹ್ಮಣ ಸಂಘದ ರಾಜ್ಯಪ್ರಶಸ್ತಿ ಕೂಡ ಪಡೆದವಳು. ಇದಲ್ಲದೆ, 520ಕ್ಕೂ ಹೆಚ್ಚು ಪ್ರಶಸ್ತಿ ಪುರಸ್ಕಾರಗಳನ್ನು ಪಡೆದ ಈಕೆಯ ಸಾಧನೆ ಅಮೋಘ. ಸುಮಾರು 70 ಕ್ಕೂ ಹೆಚ್ಚಿನ ಸಂಘ ಸಂಸ್ಥೆಗಳು ಈಕೆಯನ್ನು ಗೌರವಿಸಿದೆ.

ಈಕೆಯ ಅನನ್ಯ ಸಾಧನೆಯನ್ನು ಗುರುತಿಸಿ, ೨೦೧೭ರಲ್ಲಿ ಡೈಜಿವರ್ಲ್ಡ್ ವಾಹಿನಿಯವರು ಹಾಗೂ ಮುಕ್ತ ವಾಹಿನಿಯವರು, ಹಾಗೇ ೨೦೧೮ ರಲ್ಲಿ ನಮ್ಮಕುಡ್ಲ ೨೪ಘಿ೭ ವಾಹಿನಿ ಅವರು ಅನುಕ್ರಮವಾಗಿ ದೀಪಾವಳಿ, ದಸರಾ ವಿಶೇಷ ಸಂದರ್ಭದಲ್ಲಿ ಇವರ ಸಂದರ್ಶನ ನಡೆಸಿದ್ದಾರೆ. ಇದಲ್ಲದೆ, ಗೋವಿಂದದಾಸ ಕಾಲೇಜಿನ ಸಾಂಸ್ಕೃತಿಕ ಹಬ್ಬ, ದಿಗಂತ-೨೦೧೮ರ ಕೋ ಆರ್ಡಿನೇಟರ್ ಆಗಿ ಕೂಡ ಈಕೆ ಕಾರ್ಯನಿರ್ವಹಿಸಿದ್ದು, ಸಾಂಸ್ಕೃತಿಕ ಕಾರ್ಯದರ್ಶಿ ಆಗಿ, ರೋಟರ್ಯಾಟ್ ಕ್ಲಬ್‌ನ ಕಾರ್ಯದರ್ಶಿ ಹಾಗೂ ಅಧ್ಯಕ್ಷೆಯಾಗಿಯೂ ಕರ್ತವ್ಯ ನಿರ್ವಹಿಸಿದ್ದಾರೆ.

ಇದು ಅವಳ ಬಹುಮುಖಿ ಚೈತನ್ಯವನ್ನು ತೋರಿಸುತ್ತದೆ.
ಈಕೆಯ ಸಾಧನೆಗಳು ಇಷ್ಟಕ್ಕೇ ಸೀಮಿತವಾಗಿಲ್ಲ. ದೇಶಾದ್ಯಂತ ಅದೆಷ್ಟೋ ವೇದಿಕೆಗಳಲ್ಲಿ ಗ್ಲೋ ಆರ್ಟ್, ಚಿತ್ರಕಲೆ , ನಾಟಕ ಮುಂತಾದ ಕಲೆಗಳನ್ನು ಪ್ರದರ್ಶಿಸಿ ತುಳುನಾಡ ಹಿರಿಮೆಯನ್ನು ಇನ್ನಷ್ಟು ಎತ್ತರಕ್ಕೆ ಏರಿಸಿದ ಈಕೆಯ ಬೆಂಗಾವಲಾಗಿ ನಿಂತವರು ಮೊದಲಾಗಿ ಈಕೆಯ ತಂದೆ ತಾಯಿ ಹಾಗೂ ಈಕೆಯ ಚಿತ್ರಕಲೆಯ ಗುರುಗಳಾದ ಉಮೇಶ್ ಎಸ್‌ಜೆ, ಯಕ್ಷಗಾನ ಗುರುಗಳಾದ ಶಂಕರ್ ನಾರಾಯಣ ಮೈರ್ಪಾಡಿ, ಶಿವರಾಮ್ ಪಣಂಬೂರು, ರಾಕೇಶ್ ರೈ ಅಡ್ಕ, ಹಾಗೂ ನಾಟಕ ಗುರುಗಳಾದ ವಿನೋದ್ ಶೆಟ್ಟಿ ಕೃಷ್ಣಾಪುರ ಹಾಗೂ ಕ್ಲೇ ಮಾಡೆಲಿಂಗ್ ಗುರುಗಳಾದ ವೆಂಕಿ ಪಲಿಮಾರ್ ಹಾಗೂ ಅವಳ ಎಲ್ಲಾ ಶಿಕ್ಷಕವರ್ಗ ಎನ್ನುವುದನ್ನು ಆಕೆ ಯಾವಾಗಲೂ ಸ್ಮರಿಸುತ್ತಿರುತ್ತಾಳೆ.

ತನ್ನ ಸಾಧನೆಯ ಹಾದಿಯಲ್ಲಿ ಪ್ರತ್ಯಕ್ಷ-ಪರೋಕ್ಷ ಸಹಾಯ-ಸಹಕಾರಗಳನ್ನು ನೀಡಿದ ಎಲ್ಲಾ ಹಿತೈಷಿ ವರ್ಗದವರಿಗೂ ಕೃತಜ್ಞತೆಗಳನ್ನು ಅರ್ಪಿಸುತ್ತಾರೆ. ತುಳುನಾಡಿನ ಒಡಲಲ್ಲಿ ಇಂತಹ ಒಬ್ಬ ಮಹಾನ್ ಸಾಧಕಿ ಆಗುವ ಭರವಸೆಯನ್ನು ಮೂಡಿಸಿರುವ ಈ ಪ್ರತಿಭೆಗೆ, ನಮ್ಮ ನಿಮ್ಮೆಲ್ಲರ ಆಶೀರ್ವಾದ ಎಂದೆಂದೂ ಇರಲಿ , ಆಕೆಯ ಕೀರ್ತಿಶಿಖರ ಇನ್ನಷ್ಟು ಇನ್ನಷ್ಟು ಎತ್ತರಕ್ಕೆ ಏರುವಂತಾಗಲಿ ಎಂದು ಮನತುಂಬಿ ಹಾರೈಸುತ್ತೇವೆ.

LEAVE A REPLY

 Click this button or press Ctrl+G to toggle between Kannada and English

Please enter your comment!
Please enter your name here