



ಬಂಟ್ವಾಳ: ಶ್ರೀರಾಮ ಭಜನಾ ಮಂದಿರ ಕಲ್ಲಡ್ಕ, ಇದರ 44ನೇ ವರ್ಷದ ಸಾರ್ವಜನಿಕ ಗಣೇಶೋತ್ಸವದ ಭವ್ಯ ಮೆರವಣಿಗೆಯು ಶ್ರೀರಾಮ ಪದವಿ ಮತ್ತು ಪದವಿಪೂರ್ವ ಕಾಲೇಜಿನ ವಿದ್ಯಾರ್ಥಿಗಳಿಂದ ಕುಣಿತ ಭಜನೆಯ ಮೂಲಕ ನೆರವೇರಿತು.
ಸಮಾಜದಲ್ಲಿ ಆಡಂಬರ, ಪಾಶ್ಚಾತ್ಯದ ಅನುಕರಣೆಯಲ್ಲಿ ಡಿ.ಜೆ ಹಾಕಿ ಕುಣಿದು ವಿಜೃಂಭಿಸುವ ಮಂದಿಗಳ ನಡುವೆ ಕಲ್ಲಡ್ಕದ ವಿದ್ಯಾರ್ಥಿಗಳು ಸನಾತನ ಸಂಸ್ಕೃತಿ, ಸಂಸ್ಕಾರದ ಅರ್ಥ ತಿಳಿಸುವ ಕಲ್ಲಡ್ಕ ವಿದ್ಯಾಸಂಸ್ಥೆಯ ಈ ಕಾರ್ಯ ರಾಷ್ಟ್ರಕ್ಕೆ ಮಾದರಿಯಾಗಲಿದೆ. ವಿದ್ಯಾಸಂಸ್ಥೆಯ 304 ವಿದ್ಯಾರ್ಥಿಗಳು 19 ತಂಡಗಳಾಗಿ ಸುರಿಯುವ ಮಳೆಯನ್ನು ಲೆಕ್ಕಿಸದೆ ಭಜನೆಗೆ ಲಯಬದ್ಧ ಹೆಜ್ಜೆಗಳನ್ನು ಹಾಕುತ್ತಾ ವಿಶೇಷ ಆಕರ್ಷಣೆಯೊಂದಿಗೆ ಜನಮಾನಸದಲ್ಲಿ ಭಕ್ತಿ ಭಾವವನ್ನು ಜಾಗೃತಿಗೊಳಿಸಿದರು.
ಈ ಭವ್ಯ ಮೆರವಣಿಗೆಯಲ್ಲಿ ಪುತ್ತೂರು ವಿವೇಕಾನಂದ ವಿದ್ಯಾವರ್ಧಕ ಸಂಘದ ಅಧ್ಯಕ್ಷ ಡಾ. ಪ್ರಭಾಕರ ಭಟ್ ಕಲ್ಲಡ್ಕ, ಶ್ರೀರಾಮ ವಿದ್ಯಾಕೇಂದ್ರದ ಅಧ್ಯಕ್ಷ ನಾರಾಯಣ ಸೋಮಯಾಜಿ, ಸಂಚಾಲಕರಾದ ವಸಂತ ಮಾಧವ, ಸಹಸಂಚಾಲಕರಾದ ರಮೇಶ್, ಭಜನಾ ಮಂದಿರದ ಆಡಳಿತ ಮಂಡಳಿ ಸದಸ್ಯರು, ಹಾಗೂ ಊರಿನ ಎಲ್ಲಾ ಭಗವದ್ಭಕ್ತರು ಪಾಲ್ಗೊಂಡರು.





