


ಬಂಟ್ವಾಳ: ಬೆಳ್ತಂಗಡಿ ತಾ. ಪುಂಜಾಲಕಟ್ಟೆ ಕರ್ನಾಟಕ ಪಬ್ಲಿಕ್ ಸ್ಕೂಲ್ನ ಪ್ರಾಥಮಿಕ ವಿಭಾಗದ ಮುಖ್ಯ ಶಿಕ್ಷಕ ಮೋನಪ್ಪ ಕೆ. ಅವರಿಗೆ ಪ್ರಸಕ್ತ ಸಾಲಿನ ದ.ಕ. ಜಿಲ್ಲಾ ಮಟ್ಟದ ಉತ್ತಮ ಶಿಕ್ಷಕ ಪ್ರಶಸ್ತಿ ಲಭಿಸಿದೆ.
ಕಳೆದ ೩೧ ವರ್ಷಗಳಿಂದ ಶಿಕ್ಷಣ ಇಲಾಖೆಯಲ್ಲಿ ಮುಖ್ಯ ಶಿಕ್ಷಕ ಹುದ್ದೆ ಸಹಿತ ಶಿಕ್ಷಕರಾಗಿ ಕರ್ತವ್ಯ ನಿರ್ವಹಿಸುತ್ತಿದ್ದು ಶೈಕ್ಷಣಿಕ ಚಟುವಟಿಕೆಗಳೊಂದಿಗೆ ಮಕ್ಕಳು ಮತ್ತು ತಾನು ಸೇವೆ ಸಲ್ಲಿಸಿದ ಶಾಲೆಯ ಸಮಗ್ರ ಅಭಿವೃದ್ಧಿಗಾಗಿ ಹಲವಾರು ವಿನೂತನ ಯೋಜನೆಗಳನ್ನು ಅನುಷ್ಠಾನಗೊಳಿಸಿರುವ ಅವರು ಈಗಾಗಲೇ ತಮ್ಮ ಶೈಕ್ಷಣಿಕ ಸಾಧನೆಗಾಗಿ ಹಲವಾರು ಪ್ರಶಸ್ತಿ ಪುರಸ್ಕಾರಗಳನ್ನು ಪಡೆದಿದ್ದಾರೆ.
೧೯೮೮ರಲ್ಲಿ ಪ್ರಾಥಮಿಕ ಶಾಲಾ ಶಿಕ್ಷಕರಾಗಿ ಚೆನ್ನೈತ್ತೋಡಿ ಸ.ಮಾ.ಹಿ.ಪ್ರಾ ಶಾಲೆಯಲ್ಲಿ ಸರಕಾರಿ ಕರ್ತವ್ಯಕ್ಕೆ ಸೇರಿ ೧೪ ವರ್ಷಗಳ ಕಾಲ ಸೇವೆ ಸಲ್ಲಿಸಿದರು. ೧ ವರ್ಷಗಳ ಕಾಲ ಸಮೂಹ ಸಂಪನ್ಮೂಲ ವ್ಯಕ್ತಿಯಾಗಿ ಕೆದಿಲ ಕ್ಲಸ್ಟರ್ ನಲ್ಲಿ ಕರ್ತವ್ಯ ನಿರ್ವಹಿಸಿದ್ದಾರೆ. ೨೦೦೨ರಲ್ಲಿ ಮುಖ್ಯ ಶಿಕ್ಷಕರಾಗಿ ಭಡ್ತಿ ಹೊಂದಿ ಪಾಂಡವರಕಲ್ಲು ಸ.ಹಿ.ಪ್ರಾ ಶಾಲೆ ಇಲ್ಲಿಯ ಅಮೂಲಾಗ್ರ ಬದಲಾವಣೆಗೆ ಕಾರಣೀಭೂತರಾದರು. ೨೦೧೩ರಲ್ಲಿ ಪದವೀಧರೇತರ ಮುಖ್ಯ ಶಿಕ್ಷಕರಾಗಿ ಭಡ್ತಿ ಹೊಂದಿ ಪ್ರಸ್ತುತ ಪುಂಜಾಲಕಟ್ಟೆ ಕರ್ನಾಟಕ ಪಬ್ಲಿಕ್ ಸ್ಕೂಲ್ನಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದು ಶಾಲೆಯ ಸರ್ವೋತೋಮುಖ ಅಭಿವೃದ್ದಿಗೆ ಶ್ರಮಿಸುತ್ತಿದ್ದಾರೆ. ಪ್ರಸ್ತುತ ವಿಟ್ಲ ಅಧ್ಯಾಪಕರ ಸೇವಾ ಸಹಕಾರಿ ಸಂಘ ನಿಯಮಿತ ಇದರ ಅಧ್ಯಕ್ಷರಾಗಿದ್ದಾರೆ. ರಾಷ್ಟ್ರ ಪ್ರಶಸ್ತಿ ವಿಜೇತ ಶಿಕ್ಷಕ ಕಾರ್ಕಡ ಶ್ರೀನಿವಾಸ ಉಡುಪ ಇವರಲ್ಲಿ ಯಕ್ಷಗಾನದ ತರಬೇತಿಯನ್ನು ಪಡೆದು, ಮಾಂಬಾಡಿ ಸುಬ್ರಹ್ಮಣ್ಯ ಭಟ್ ಇವರಲ್ಲಿ ಚೆಂಡೆವಾದನ ಕಲಿತು ಅನೇಕ ವಿದ್ಯಾರ್ಥಿಗಳಿಗೆ ತರಬೇತಿಯನ್ನು ನೀಡುತ್ತಿದ್ದಾರೆ.







