

ವಿಟ್ಲ: ವಿಟ್ಲ ವಿಶ್ವ ಹಿಂದೂ ಪರಿಷತ್ ಆಶ್ರಯದಲ್ಲಿ ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿ ವತಿಯಿಂದ 38ನೇ ವರ್ಷದ ಸಾರ್ವಜನಿಕ ಶ್ರೀ ಗಣೇಶೋತ್ಸವ ಸೋಮವಾರ ವಿಟ್ಲದ ಅನಂತ ಸದನದಲ್ಲಿ ಆರಂಭಗೊಂಡಿತು.
ಬೆಳಗ್ಗೆ ವಿಟ್ಲದ ಮೇಗಿನಪೇಟೆ ಶ್ರೀ ಮಹಮ್ಮಾಯಿ ಮಂದಿರದಿಂದ ವಿಟ್ಲ ಮುಖ್ಯ ರಸ್ತೆ ಮೂಲಕ ಗಣೇಶ ಮೆರವಣಿಗೆ ನಡೆಯಿತು. ಬಳಿಕ ಅನಂತ ಸದನದಲ್ಲಿ ಶ್ರೀ ಗಣೇಶನ ಮೂರ್ತಿಯ ಪ್ರತಿಷ್ಠೆ, ಶ್ರೀ ಮಹಾಗಣಪತಿ ಹವನ ನಡೆಯಿತು.
ಆಯುರ್ವೇದ ವೈದ್ಯ ಡಾ. ಕೆದಂಬಾಡಿ ತಿಮ್ಮಪ್ಪ ರೈ ಧ್ವಜಾರೋಹಣಗೈದರು. ವಿಟ್ಲ ಹನುಮಾನ ಪ್ರಿಂಟರ್ಸ್ನ ವೆಂಕಟೇಶ್ ಭಟ್ ಉದ್ಘಾಟಿಸಿದರು. ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ಪುತ್ತೂರು ಜಿಲ್ಲಾ ಗೋರಕ್ಷಾ ಪ್ರಮುಖ್ ಸರಪಾಡಿ ಅಶೋಕ್ ಶೆಟ್ಟಿ ಅವರು ಮಾತನಾಡಿ ಹಿಂದು ಸಮಾಜದ ಕಲ್ಪನೆಯಂತೆ ಧಾರ್ಮಿಕ ಕಾರ್ಯಕ್ರಮಗಳು ನಡೆಯುತ್ತಿದೆ. ಸಂಸ್ಕಾರಯುತ ಸಮಾಜ ನಿರ್ಮಾಣಗೊಳ್ಳುತ್ತಿದೆ. ಧರ್ಮ ರಕ್ಷಣೆ ಮಾಡಿದಾಗ ಧರ್ಮ ನಮ್ಮನ್ನು ರಕ್ಷಣೆ ಮಾಡುತ್ತದೆ. ಸಮಾಜಕ್ಕೆ ಹಿತ ನೀಡುವುದೇ ನಿಜವಾದ ಧರ್ಮವಾಗಿದೆ ಎಂದರು.
ಈ ಸಂದರ್ಭ ಹಿರಿಯ ಕಾರ್ಯಕರ್ತ ಜತ್ತಪ್ಪ ಗೌಡ ನಾಯ್ತೋಟ್ಟು ಉಪಸ್ಥಿತರಿದ್ದರು.
ವಿಟ್ಲ ಸಾರ್ವಜನಿಕ ಗಣೇಶೋತ್ಸವ ಸಮಿತಿ ಅಧ್ಯಕ್ಷ ಗೋಪಾಲಕೃಷ್ಣ ಕೆ.ಎನ್ ಸ್ವಾಗತಿಸಿದರು. ಗೌರವಾಧ್ಯಕ್ಷ ರಾಮ್ದಾಸ್ ಶೆಣೈ ಪ್ರಸ್ತಾವನೆಗೈದರು. ಹರೀಶ್ ಕೆ ನಿರೂಪಿಸಿದರು. ಅರುಣ್ ವಿಟ್ಲ ವಂದಿಸಿದರು.
ಬಳಿಕ ಭಜನೆ, ಮಹಾಪೂಜೆ, ವಿವಿಧ ಸ್ಪರ್ಧೆಗಳು, ಪ್ರತಿಭಾ ಪ್ರದರ್ಶನ, ರಂಗಪೂಜೆ ನಡೆಯಿತು.








