

ಬಂಟ್ವಾಳ: ದ.ಕ ಜಿಲ್ಲೆಯ ಉಳ್ಳಾಲ ಪ್ರದೇಶದ ನಿವಾಸಿ, ಸಮಾಜ ಸೇವಕ ಹಾಗೂ ಪ್ರಗತಿಪರ ಹೋರಾಟಗಾರ ಝಾಕಿರ್ ಉಳ್ಳಾಲ ರವರು ಸಾಮಾಜಿಕ ಜಾಲತಾಣಗಳಲ್ಲಿ ಕೋಮುವಾದವನ್ನು ಹಬ್ಬುತ್ತಿದ್ದಾರೆ ಎಂಬ ನೆಪವೊಡ್ಡಿ ಅವರ ಮೇಲೆ ಜಾಮೀನು ರಹಿತ ಪ್ರಕರಣವನ್ನು ದಾಖಲಿಸಿರುವ ಪೋಲೀಸರ ಕ್ರಮವು ರಾಜಕೀಯ ಪ್ರೇರಿತವಾಗಿದ್ದು, ಇದು ಹೋರಾಟಗಳನ್ನು ಹತ್ತಿಕ್ಕುವ ಷಡ್ಯಂತ್ರದ ಭಾಗ ಎಸ್ಡಿಪಿಐ ರಾಜ್ಯ ಪ್ರಧಾನ ಕಾರ್ಯದರ್ಶಿ ರಿಯಾಝ್ ಫರಂಗಿಪೇಟೆ ಅವರು ಪ್ರಕಟನೆಯಲ್ಲಿ ಆರೋಪಿಸಿದ್ದಾರೆ.
ಝಾಕಿರ್ ಅವರ ಬಂಧನದ ಕುರಿತು ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದ ಅವರು, ನಿರಂತರವಾಗಿ ಕೋಮುವಾದ ಮತ್ತು ಭಯೋತ್ಪಾದನೆಯನ್ನು ಹಬ್ಬುತ್ತಿರುವ ಮಾಧ್ಯಮ ಭಯೋತ್ಪಾದನೆಯ ಬಗ್ಗೆ ಒಂದು ಸಣ್ಣ ಸ್ವಯಂಪ್ರೇರಿತ ಪ್ರಕರಣವನ್ನು ದಾಖಲಿಸದ ಮಂಗಳೂರು ಪೊಲೀಸರಿಗೆ ಝಾಕಿರ್ ಅವರು ಸಾಮಾಜಿಕ ಕಳಕಳಿಯೊಂದಿಗೆ ಆಡಳಿತ ವರ್ಗ, ವಿರೋಧ ಪಕ್ಷ ಮತ್ತು ಸಂಘಪರಿವಾರವನ್ನು ಟೀಕಿಸಿ ಸಾಮಾಜಿಕ ಜಾಲತಾಣಗಳಲ್ಲಿ ಧ್ವನಿ ಸಮರ ನಡೆಸಿರುವುದು ಕೋಮುವಾದದ ಹರಡುವಿಕೆಯಾಗಿ ಕಂಡಿರುವುದು ಪೋಲೀಸ್ ಇಲಾಖೆಯ ಕುರುಡುತನವನ್ನು ಪ್ರದರ್ಶಿಸುತ್ತದೆ ಎಂದು ದೂರಿದ್ದಾರೆ.
ಹೋರಾಟಗಾರರಿಗೆ ಈ ರೀತಿಯ ಪ್ರಕರಣಗಳು ಸಾಮಾನ್ಯವಾಗಿದ್ದು, ಇದರಿಂದಾಗಿ ನಾವು ಧೃತಿಗೆಡಬೇಕಾದ ಅವಶ್ಯಕತೆ ಇಲ್ಲ. ಬದಲಾಗಿ ಇದರ ವಿರುದ್ಧ ಕಾನೂನು ಹೋರಾಟವನ್ನು ಮಾಡಿ ಇಂತಹ ರಾಜಕೀಯ ಷಡ್ಯಂತ್ರಗಳನ್ನು ಜಯಿಸಬೇಕಾಗಿದೆ. ಆದ್ದರಿಂದ ಝಾಕಿರ್ ರವರ ಪರವಾಗಿರುವ ಎಲ್ಲ ಹೋರಾಟಗಳಿಗೆ ಎಸ್ಡಿಪಿಐ ಬೆಂಬಲವನ್ನು ನೀಡಿ ಕಾನೂನು ನೆರವನ್ನು ನೀಡಲಿದೆ ಎಂದು ಅವರು ಪ್ರಕಟನೆಯಲ್ಲಿ ತಿಳಿಸಿದ್ದಾರೆ.








