


ವಿಟ್ಲ: ವಿಟ್ಲ ಸಮೀಪದ ಶಾಲೆಯೊಂದರ ಅಪ್ರಾಪ್ತ ಎಸ್ ಎಸ್ ಎಲ್ ಸಿ ವಿದ್ಯಾರ್ಥಿನಿಗೆ
ಕಿರುಕುಳ ನೀಡುತ್ತಿದ್ದ ವ್ಯಕ್ತಿಯನ್ನು ವಿಟ್ಲ ಪೊಲೀಸರು ಬಂಧಿಸಿದ್ದಾರೆ.
ಕಲ್ಲಡ್ಕ ಸಮೀಪದ ಕೆ.ಸಿ ರೋಡ್ ನಿವಾಸಿ ಸತೀಶ್ ಕುಲಾಲು(44) ಬಂಧಿತ ಆರೋಪಿ. ಈತ ಕಳೆದ
ಕೆಲವು ದಿನಗಳಿಂದ ವಿದ್ಯಾರ್ಥಿನಿ ಶಾಲೆ ಬಿಟ್ಟು ಮನೆಗೆ ಹೋಗುತ್ತಿದ್ದ ವೇಳೆ
ಆಕೆಯನ್ನು ಹಿಂಬಾಲಿಸಿಕೊಂಡು ಹೋಗುತ್ತಿದ್ದು, ಆಕೆ ಹೋಗುತ್ತಿದ್ದ ಬಸ್ಸಿಗೂ ಹತ್ತಿ
ಕಿರುಕುಳ ನೀಡುತ್ತಿರುವುದಲ್ಲದೆ. ಮೈಗೆ ಕೈ ಹಾಕಿ ಕಿರುಕುಳ ನೀಡುತ್ತಿದ್ದ. ಈ ಬಗ್ಗೆ
ವಿದ್ಯಾರ್ಥಿನಿಯ ಊರಿನ ಮತ್ತೊಬ್ಬ ವಿದ್ಯಾರ್ಥಿ ವಿಚಾರಿಸಿದಾಗ ಆತನಿಗೆ ಹಲ್ಲೆ
ನಡೆಸಿದ್ದಾನೆ. ಈತನ ಕಿರುಕುಳ ಸಹಿಸಲಾಗದೇ ವಿದ್ಯಾರ್ಥಿನಿ ಈ ಬಗ್ಗೆ ಮನೆಯಲ್ಲಿ
ತಿಳಿಸಿದ್ದಾಳೆ. ವಿದ್ಯಾರ್ಥಿನಿ ತನ್ನ ಹೆತ್ತವರ ಹಾಗೂ ಶಾಲಾ ಶಿಕ್ಷಕರ ಜತೆ ವಿಟ್ಲ
ಪೊಲೀಸ್ ಠಾಣೆಗೆ ಆಗಮಿಸಿ ದೂರು ನೀಡಿದ್ದು, ಈ ಸಂಬಂಧ ಠಾಣೆಯಲ್ಲಿ ಪೋಕ್ಸೋ
ಕಾಯ್ದೆಯಡಿಯಲ್ಲಿ ಪ್ರಕರಣ ದಾಖಲಾಗಿದೆ. ಹಲ್ಲೆಗೊಳಗಾದ ವಿದ್ಯಾರ್ಥಿಯೂ ಕೂಡಾ ದೂರು
ನೀಡಿದ್ದು, ಈ ಬಗ್ಗೆಯೂ ಪ್ರಕರಣ ದಾಖಲಾಗಿದೆ. ಘಟನೆ ಸಂಬಂಧಿಸಿ ವಿಟ್ಲ ಎಸೈ ಯಲ್ಲಪ್ಪ
ಮತ್ತು ಸಿಬ್ಬಂದಿಗಳ ತಂಡ ತಕ್ಷಣವೇ ಆರೋಪಿಯನ್ನು ಬಂಧಿಸಿ ನ್ಯಾಯಾಲಯಕ್ಕೆ
ಹಾಜರುಪಡಿಸಿದ್ದಾರೆ.





