ವಿಟ್ಲ: ದೇಶದ ಒಳಿತಿಗಾಗಿ ಬಹಳಷ್ಟು ಕೊಡುಗೆಗಳನ್ನು ನೀಡಿದ ಆದರ್ಶ ವ್ಯಕ್ತಿಗಳನ್ನು, ಗತಿಸಿದ್ದರೂ ಇತಿಹಾಸದಲ್ಲಿ ಪುಟಗಳಲ್ಲಿ ಶಾಶ್ವತವಾಗಿ ಉಳಿದ ನಾವು ಹೆಮ್ಮೆಪಡುವ ಮಹಾನುಭಾವರನ್ನು ಕೀಳು ಮಟ್ಟದಲ್ಲಿ ಅವಹೇಳನ ಮಾಡುತ್ತಿರುವುದನ್ನು ಖಂಡಿಸುತ್ತೇವೆ ಎಂದು ವಿಟ್ಲ-ಉಪ್ಪಿನಂಗಡಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಮುರಳೀಧರ ರೈ ಮಠಂತಬೆಟ್ಟು ಹೇಳಿದರು.
ಅವರು ಶುಕ್ರವಾರ ವಿಟ್ಲ ಪ್ರೆಸ್‌ಕ್ಲಬ್‌ನಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಪ್ರಾಥಮಿಕ ಶಿಕ್ಷಣ ಹಂತದಲ್ಲಿ ಶಿಕ್ಷಕರು ಪ್ರೇರೇಪಿಸಿದಂತೆ ಮಹಾತ್ಮಾ ಗಾಂಧೀಜಿ, ಪಂಡಿತ್ ಜವಾಹರ್‌ಲಾಲ್ ನೆಹರೂ, ಸುಭಾಶ್ಚಂದ್ರ ಬೋಸ್, ವಲ್ಲಭಭಾಯಿ ಪಟೇಲ್, ಡಾ.ಬಿ.ಆರ್.ಅಂಬೇಡ್ಕರ್, ಲಾಲಾಲಜಪತ್‌ರಾಯ್, ಭಗತ್ ಸಿಂಗ್, ಲಾಲ್‌ಬಹಾದೂರ್ ಶಾಸ್ತ್ರಿ, ರಾಣಿ ಲಕ್ಷ್ಮೀಭಾಯಿ, ಕಿತ್ತೂರುರಾಣಿ ಚೆನ್ನಮ್ಮ, ರಾಣಿ ಅಬ್ಬಕ್ಕ ಮತ್ತಿತರರು ನಾನಾ ಮಹತ್ಕಾರ್ಯಗಳಿಂದ ಆದರ್ಶರಾಗಿದ್ದಾರೆ. ಇತ್ತೀಚಿಗೆ ಬಿಜೆಪಿ ರಾಷ್ಟ್ರೀಯ ಕಾರ್ಯದರ್ಶಿ ಬಿ.ಎಲ್.ಸಂತೋಷ್, ಸಾಹಿತಿ ಎಸ್.ಎಲ್.ಭೈರಪ್ಪ ಅವರು ಬೇರೆ ಬೇರೆ ಕಾರಣಕ್ಕೆ ಇತಿಹಾಸವನ್ನು ಪ್ರಶ್ನಿಸುತ್ತಿದ್ದಾರೆ. ಕೀಳು ಅಭಿರುಚಿಯ ಇಲ್ಲಸಲ್ಲದ ಮಾತುಗಳನ್ನಾಡುತ್ತಿದ್ದಾರೆ. ಅದನ್ನು ನಾವು ಖಂಡಿಸುತ್ತೇವೆ ಎಂದು ಹೇಳಿದರು.
ಪಂಡಿತ್ ಜವಾಹರ್‌ಲಾಲ್ ನೆಹರೂ, ಲಾರ್ಡ್‌ಮೌಂಟ್‌ಬ್ಯಾಟನ್, ಕಾಶ್ಮೀರದ ರಾಜ ಹರಿಸಿಂಗ್, ಶೇಕ್ ಅಬ್ದುಲ್ಲಾ ಅವರು ಕಾಶ್ಮೀರವನ್ನು ಭಾರತಕ್ಕೆ ಸೇರಿಸಲು ಕಾರಣರಾದವರು. ಅಂದಿನ ದಿನಗಳಲ್ಲಿ ನೆಹರೂ, ವಲ್ಲಭಭಾಯಿ ಪಟೇಲ್, ಕೃಷ್ಣ ಮೆನನ್ ತಮ್ಮನ್ನು ತಾವು ಪಣಕ್ಕಿಟ್ಟು ಕಾಶ್ಮೀರವನ್ನು ಉಳಿಸಿಕೊಂಡವರು. ನೆಹರೂ ಅವರು ಆಗರ್ಭ ಶ್ರೀಮಂತನಾಗಿದ್ದರೂ ದೇಶಕ್ಕಾಗಿ ೧೪ ವರ್ಷಗಳ ಕಾಲ ಜೈಲುವಾಸ ಅನುಭವಿಸಿದವರು. ದೇಶಕ್ಕಾಗಿ ಅನೇಕ ತ್ಯಾಗ ಮಾಡಿದವರು. ಇಂದಿರಾಗಾಂಧಿ, ರಾಜೀವಗಾಂಧಿ, ನರಸಿಂಹ ರಾವ್, ಅಟಲ್ ಬಿಹಾರಿ ವಾಜಪೇಯಿ, ಡಾ.ಮನಮೋಹನ ಸಿಂಗ್ ಅವರು ಕೂಡಾ ದೂರದರ್ಶಿತ್ವದ ಆಡಳಿತ ನಮ್ಮನ್ನು ಎತ್ತಿಹಿಡಿದಿದೆ. ಅಂತವರ ಕೊಡುಗೆಯನ್ನು ಪಕ್ಷಬೇಧರಹಿತವಾಗಿ ನಾವು ಗೌರವಿಸಬೇಕು. ಇದೇ ರೀತಿ ಅಸಾಮಾನ್ಯ ಕೊಡುಗೆ ನೀಡಿದ ಮಹಾತ್ಮರನ್ನು ಅವಹೇಳನ ಮಾಡಿದಲ್ಲಿ ಪ್ರತಿ ಗ್ರಾ.ಪಂ.ಗಳ ವ್ಯಾಪ್ತಿಯಲ್ಲಿ ಅವಹೇಳನ ಮಾಡಿದವರ ಪ್ರತಿಕೃತಿ ದಹನ ಮಾಡಿ ನಾವು ಪ್ರತಿಭಟಿಸುತ್ತೇವೆ ಎಂದು ಅವರು ಎಚ್ಚರಿಸಿದರು.
ನೆಹರೂ ಅವರ ಬಗ್ಗೆ ಯೂಟ್ಯೂಬ್‌ನಲ್ಲಿರುವ ವಿಡಿಯೋ ತುಣುಕನ್ನು ಸಿಡಿಯಲ್ಲಿ ನೀಡಿದ ಅವರು ಇಂತಹ ಮಹಾನ್ ದೇಶಭಕ್ತರ ಬಗ್ಗೆ ಟೀಕಿಸುವ ಮಂದಿ ಮೊದಲು ಆತ್ಮವಿಮರ್ಶೆ ಮಾಡಿಕೊಳ್ಳಬೇಕಾಗಿದೆ ಎಂದರು.
ಮಾಜಿ ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರು ಕಾರ್ಯಕತರರನ್ನುದ್ದೇಶಿಸಿ, ಮಾತನಾಡಲು ಆ.೩೧ರಂದು ಮಂಗಳೂರಿಗೆ ಆಗಮಿಸಲಿದ್ದು, ಕಾರ್ಯಕರ್ತರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಬೇಕೆಂದು ಅವರು ಇದೇ ಸಂದರ್ಭದಲ್ಲಿ ವಿನಂತಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಡಿಸಿಸಿ ಕಾರ್ಯದರ್ಶಿ ರಮಾನಾಥ ವಿಟ್ಲ, ಡಿಸಿಸಿ ಕಾರ್ಯದರ್ಶಿ ಉಲ್ಲಾಸ್ ಕೋಟ್ಯಾನ್, ವಿಟ್ಲ ನಗರ ಕಾಂಗ್ರೆಸ್ ಅಧ್ಯಕ್ಷ ವಿ.ಕೆ.ಎಂ.ಅಶ್ರಫ್ ಉಪಸ್ಥಿತರಿದ್ದರು.

LEAVE A REPLY

 Click this button or press Ctrl+G to toggle between Kannada and English

Please enter your comment!
Please enter your name here