

ಕಲ್ಲಡ್ಕ: ಆ.31ರಂದು ಶನಿವಾರದಂದು ಕಲ್ಲಡ್ಕ ಶ್ರೀರಾಮ ಹಿರಿಯ ಪ್ರಾಥಮಿಕ ಶಾಲೆಯ ವೇದವ್ಯಾಸ ಧ್ಯಾನಮಂದಿರದಲ್ಲಿ ಮಾಸಿಕ ಭಜನೆ ಹಾಗೂ ಆಗೋಸ್ತು ತಿಂಗಳಲ್ಲಿ ಹುಟ್ಟಿದ ವಿದ್ಯಾರ್ಥಿಗಳ ಸಾಮೂಹಿಕ ಹುಟ್ಟುಹಬ್ಬವನ್ನು ಆಚರಿಸಲಾಯಿತು.
ಇತ್ತೀಚಿನ ದಿನಗಳಲ್ಲಿ ಹುಟ್ಟುಹಬ್ಬವನ್ನು ಕೇಕ್ ಕಟ್ ಮಾಡಿ, ಮೋಜಿನೊಂದಿಗೆ ಆಚರಿಸುತ್ತಾರೆ. ಆದರೆ ಈ ರೀತಿ ಆರತಿ ಬೆಳಗಿ, ಅಕ್ಷತೆ ತಿಲಕಧಾರಣೆಯ ಮೂಲಕ ನಿಜವಾದ ಅರ್ಥದಲ್ಲಿ ಹುಟ್ಟುಹಬ್ಬ ಆಚರಿಸುತ್ತಿರುವುದು ಶ್ಲಾಘನೀಯ. ಇಲ್ಲಿ ದೊರೆಯುವ ನೈತಿಕ ಶಿಕ್ಷಣವೂ ವಿದ್ಯಾರ್ಥಿಗಳಾದ ನಿಮ್ಮನ್ನು ಜೀವನದಲ್ಲಿ ತುಂಬಾ ಎತ್ತರಕ್ಕೆ ಬೆಳೆಸುತ್ತದೆ, ಕನ್ನಡ ಮಾಧ್ಯಮ ಶಾಲೆಯಾದರೂ, ಆಂಗ್ಲಭಾಷೆಯಲ್ಲಿಯೂ ವಿದ್ಯಾರ್ಥಿಗಳು ಪ್ರತಿಭಾವಂತರು ಹಾಗೂ ಇಂಗ್ಲೀಷ್ ಭಾಷೆಯನ್ನು ಕಲಿಯಲು ಆಂಗ್ಲಮಾದ್ಯಮ ಶಾಲೆಯೇ ಬೇಕೆಂದಿಲ್ಲ, ಶ್ರೀರಾಮದಂತಹ ಕನ್ನಡ ಮಾಧ್ಯಮ ಶಾಲೆಯಲ್ಲೂ ಸಾಧ್ಯವಿದೆ ಎಂಬುದನ್ನು ನಿಮ್ಮ ಕಾರ್ಯಕ್ರಮ ವೀಕ್ಷಣೆಯಿಂದ ತಿಳಿಯಿತು ಎಂದು ಶ್ರೀರಾಮ ಪದವಿ ಪೂರ್ವ ವಿಭಾಗದ ದೈಹಿಕ ಶಿಕ್ಷಕರಾದ ಕರುಣಾಕರ್ ಶುಭ ಹಾರೈಸಿದರು.
ಕಾರ್ಯಕ್ರಮಕ್ಕೆ ಅತಿಥಿಗಳಿಗೆ ಹೂಗುಚ್ಛ ನೀಡಿ ಸ್ವಾಗತಿಸಲಾಯಿತು. ಹುಟ್ಟುಹಬ್ಬ ಆಚರಿಸಿಕೊಳ್ಳುವ ಮಕ್ಕಳಿಗೆ ಅದ್ಯಾಪಕ ವೃಂದದವರು ಆರತಿ ಅಕ್ಷತೆ ತಿಲಕಧಾರಣೆ ಮಾಡಿ ಸಿಹಿ ನೀಡಿದರು. ನಂತರ ವಿದ್ಯಾರ್ಥಿಗಳು ಭಾರತ ಮಾತೆಗೆ ಪುಷ್ಪಾರ್ಚನೆ ಮಾಡಿ ನಿಧಿ ಸಮರ್ಪಣೆ ಮಾಡಿದರು. 5ನೇ ತರಗತಿಯ ವಿದ್ಯಾರ್ಥಿ ಪ್ರಾಣೇಶ್ ಪ್ರೇರಣಾ ಗೀತೆ ಹಾಡಿದನು.
ಆ.29 ರಂದು ನಡೆದ ವಲಯ ಮಟ್ಟದ ಪ್ರತಿಭಾ ಕಾರಂಜಿಯಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ ಬಹುಮಾನ ವಿತರಿಸಲಾಯಿತು. ರಾಜೇಶ್ವರಿ ಮಾತಾಜಿ ಬಹುಮಾನ ವಾಚಿಸಿದರು.
ನಂತರ ಇಂಗ್ಲೀಷ್ ಸಂಘದ ವತಿಯಿಂದ ಸಾಂಸ್ಕೃತಿಕ ಕಾರ್ಯಕ್ರಮ ಹಮ್ಮಿಕೊಳ್ಳಲಾಯಿತು. ವಿದ್ಯಾರ್ಥಿಗಳು ಆಂಗ್ಲಭಾಷೆಯಲ್ಲಿ ನಾಟಕ ಹಾಗೂ ನೃತ್ಯ ಪ್ರದರ್ಶಿಸಿದರು. ಕಾರ್ಯಕ್ರಮದ ನಿರ್ವಹಣೆಯನ್ನು ಆಂಗ್ಲಭಾಷೆಯಲ್ಲೇ ಮಾಡಿದ್ದು ವಿಶೇಷವಾಗಿತ್ತು. ಪ್ರತೀ ದಿನ ಶಾಲೆಯಲ್ಲಿ ನಡೆದ ಆಂಗ್ಲಭಾಷಾ ಸಂಭಾಷಣೆ ಮತ್ತು ಇನ್ನಿತರ ಕಾರ್ಯಕ್ರಮಗಳು ವಿದ್ಯಾರ್ಥಿಗಳ ಜ್ಞಾನಭಿವೃದ್ಧಿಯಲ್ಲಿ ಸಹಕರಿಸಿದೆ ಎಂದು ಶ್ರೀರಾಮ ಪದವಿ ಮಹಾವಿದ್ಯಾಲಯದ ಆಂಗ್ಲಭಾಷಾ ಶಿಕ್ಷಕರಾದ ಶ್ರೀದೇವಿಯವರು ಪ್ರಶಂಸೆ ವ್ಯಕ್ತಪಡಿಸಿದರು.
ವೇದಿಕೆಯಲ್ಲಿ ಬಳ್ಳಾರಿ ಜಿಲ್ಲೆಯ ಹೊಸಪೇಟೆ ತಾಲೂಕಿನ ಸೇವ ಪ್ರಮುಖ್ ಪಿ.ಟಿ ಮಂಜುನಾಥ, ರಾಮಪ್ಪ, ಆಡಳಿತ ಮಂಡಳಿಯ ಸದಸ್ಯರಾದ ಕಮಲಾ ಪ್ರಭಾಕರ ಭಟ್, ಹಾಗೂ ಮುಖ್ಯಶಿಕ್ಷಕರಾದ ರವಿರಾಜ್ ಕಣಂತೂರುರವರು ಉಪಸ್ಥಿತರಿದ್ದರು.
ಕಾರ್ಯಕ್ರಮವನ್ನು ಶಿಕ್ಷಕರಾದ ಸುಪ್ರಭಾ ನಿರೂಪಿಸಿ, ಪುಷ್ಪಾವತಿ ಸ್ವಾಗತಿಸಿ, ಕಾವ್ಯಶ್ರೀ ವಂದಿಸಿದರು.








