

ಬಂಟ್ವಾಳ : ಜಕ್ರಿಬೆಟ್ಟಿನ ದಾಸ ರೈ ಮೈದಾನದಲ್ಲಿ ಶ್ರೀ ಗಣಪತಿ ಉತ್ಸವ ಕಳೆದ 16 ವರ್ಷಗಳಿಂದ ಧಾರ್ಮಿಕ,ಸಾಂಸ್ಕೃತಿಕ ಮಿಲನದೊಂದಿಗೆ ಸರ್ವಧರ್ಮದ ಭಗವದ್ಭಕ್ತರ ಸೇವಾ ಮನೋಭಾವದೊಂದಿಗೆ ಅರ್ಥಪೂರ್ಣವಾಗಿ ಮತ್ತು ವೈಭವಯುತವಾಗಿ ಆಚರಿಸಿಕೊಂಡು ಬರುತ್ತಿದ್ದು ಐದು ದಿನಗಳ ಸಂಭ್ರಮಾಚರಣೆಯ ಗಣೇಶೋತ್ಸವ ಜಿಲ್ಲೆ , ರಾಜ್ಯದ ಭಕ್ತಾಭಿಮಾನಿಗಳ ಮನಸೂರೆಗೊಂಡು ಜಕ್ರಿಬೆಟ್ಟಿನ ಗಣಪ ವಿಶೇಷ ದಾಖಲೆಯನ್ನು ಬರೆದಿದೆ.
ಮಾಜಿ ಸಚಿವರಾದ ಬಿ. ರಮಾನಾಥ ರೈ ಅವರು ತನ್ನ ಸಂಕಲ್ಪದೊಂದಿಗೆ ಅಂದು ಆರಂಭಿಸಿದ ಸಾರ್ವಜನಿಕ ಗಣೇಶೋತ್ಸವವು ಸಮಾನ ಮನಸ್ಕರ ಸಾರ್ವಜನಿಕ ಸಮಿತಿಯೊಂದಿಗೆ ಬಲ್ಲೋಡಿಗುತ್ತು ಪದ್ಮಶೇಖರ್ ಜೈನ್ ಅಧ್ಯಕ್ಷತೆಯಲ್ಲಿ ಅಚ್ಚುಕಟ್ಟಿಗೆ ಹೆಸರಾಗಿ ನೀತಿ ನಿಯಮಾವಳಿಗಳೊಂದಿಗೆ ಮೇಳೈಸುತ್ತಿದ್ದು ಸಾರ್ವಜನಿಕ ಗಣೇಶೋತ್ಸವದಲ್ಲಿ ಸುಂದರ ಧಾರ್ಮಿಕ ಹಬ್ಬವಾಗಿ ಜನತೆಯಿಂದ ಜನಮತವನ್ನು ಪಡೆದಿದೆ. ಈ ಬಾರಿ 16ನೇ ವರ್ಷದ ಶ್ರೀ ಗಣೇಶೋತ್ಸವವು ಆ.2 ರ ಸೋಮವಾರದಿಂದ ಮೊದಲ್ಗೊಂಡು ಆ.6 ರ ಶುಕ್ರವಾರ ಸಮಾಪನಗೊಳ್ಳಲಿದೆ.
ವಿಶಾಲ ಮಂಟಪದಲ್ಲಿ ಸುಂದರವಾದ ವಿನಾಯಕ ಭವ್ಯ ಮೂರ್ತಿ ಭಕ್ತರನ್ನು ಆಕರ್ಷಿಸುತ್ತಾ ಭಕ್ತರ ಪೂಜಾ ಸೇವೆಗೆ ಅಭಯವನ್ನು ನೀಡುತ್ತಾನೆ. ಗಣೇಶನ ಮಂಟಪ ಮತ್ತು ಧಾರ್ಮಿಕ,ಸಾಂಸ್ಕೃತಿಕ ಅನಾವರಣಕ್ಕೆ ಆಕರ್ಷಕ ವಿಶಾಲ ವೇದಿಕೆ. ಡಾ|ಮೋಹನ್ ಆಳ್ವರ ಪರಿಕಲ್ಪನೆಯಲ್ಲಿ ವರ್ಷದಿಂದ ವರ್ಷಕ್ಕೆ ಚೆಲುವನ್ನು ಇಮ್ಮಡಿಗೊಳಿಸುತ್ತಿದೆ. ಮೂಡಬಿದ್ರೆ ಆರ್.ಕೆ.ಭಟ್ರವರ ಭವ್ಯ ಸಭಾಂಗಣ ಸೌಂದರ್ಯದೊಂದಿಗೆ 2000 ಜನರನ್ನು ಆಸೀನರಾಗಲು ವ್ಯವಸ್ಥಿತವಾಗಿದೆ. ಗಣೇಶನ ಪ್ರತಿಷ್ಠೆಯು ಭಗವದ್ಭಕ್ತರ ಸೇರುವಿಕೆಯೊಂದಿಗೆ ಬಂಟ್ವಾಳ ಶ್ರೀ ಸೀತಾರಾಮ ಕಲ್ಯಾಣ ಮಂಟಪದಿಂದ ಮೆರವಣಿಗೆಯಲ್ಲಿ ಬಂದು ಗೌರವಾಧ್ಯಕ್ಷರಾದ ಬಿ. ರಮಾನಾಥ ರೈಯವರ ಉಪಸ್ಥಿತಿಯಲ್ಲಿ ಸಾಮೂಹಿಕ ದೇವತಾಪ್ರಾರ್ಥನೆ ಸಲ್ಲಿಸಿ ಕಾರ್ಯಕ್ರಮಗಳಿಗೆ ಚಾಲನೆ ನೀಡಲಾಗುವುದು.
ನಮ್ಮ ಸಾರ್ವಜನಿಕ ಶ್ರೀ ಗಣೇಶೋತ್ಸವವು ನಿರಂತರ 5 ದಿವಸಗಳ ಕಾರ್ಯಕ್ರಮವಾಗಿದ್ದು, ನಿತ್ಯ ನಿರಂತರ ಭಕ್ತರಿಗೆ ಅನ್ನಸಂತರ್ಪಣೆ, ಅತಿಥಿಗಳಿಗೆ ಸತ್ಕಾರದ ವ್ಯವಸ್ಥೆ , ಜನರಿಂದ ತುಂಬು ಹೃದಯದ ಮೆಚ್ಚುಗೆಗಳಿಸಿದೆ. ಊರ ಪರವೂರ ಭಗವದ್ಭಕ್ತರು ಸ್ವಯಂಪ್ರೇರಿತರಾಗಿ ಗಣೇಶ ಸೇವೆಯಲ್ಲಿ ತೊಡಗಿಸಿಕೊಳ್ಳುವುದು ವಿಶೇಷವಾಗಿದೆ. ಮಹಿಳೆಯರಿಂದ ವಿಶೇಷ ಕುಂಕುಮಾರ್ಚನೆ ಸೇವೆ, ಮಕ್ಕಳು, ಮಹಿಳೆಯರಿಗೆ ಹಾಗೂ ಪುರುಷರಿಗೆ ವಿವಿಧ ವಿಭಾಗದ ಸ್ಪರ್ಧೆಗಳು ನಡೆಯಲಿದೆ. ಪ್ರತಿದಿನ ಧಾರ್ಮಿಕ ಪ್ರವಚನಗಳು, ಸಾಂಸ್ಕೃತಿಕ ಕಾರ್ಯಕ್ರಮಗಳು ಉತ್ಸವಕ್ಕೆ ಮೆರುಗು ನೀಡಲಿದೆ. ಸರಿ ಸುಮಾರು 5 ಲಕ್ಷಕ್ಕೂ ಮಿಕ್ಕಿ ಭಕ್ತಾದಿಗಳು ಪಾಲ್ಗೊಳ್ಳುವ ನಿರೀಕ್ಷೆ ಇದೆ.5 ನೇ ದಿನ ಶ್ರೀ ಗಣೇಶ ಮೂರ್ತಿಯ ಶೋಭಾ ಯಾತ್ರೆಯು ವಿವಿಧ ಜಿಲ್ಲೆಗಳ ಕಲಾ ತಂಡಗಳು, ಸ್ತಭ್ದ ಚಿತ್ರಗಳೊಂದಿಗೆ ವೈಭವಯುತವಾಗಿ ನಡೆಯಲಿದೆ. ಕಾರ್ಯಕ್ರಮಗಳು ಶಿಸ್ತು ,ಅಚ್ಚುಕಟ್ಟುತನ, ಸ್ವಯಂಸೇವಕರ ಸೇವೆ, ಭಕ್ತರ ಸಹಕಾರ ಇವುಗಳಿಂದ ಅರ್ಥಪೂರ್ಣವಾಗಿ ನಡೆಯುವುದು ಜಕ್ರಿಬೆಟ್ಟು ಗಣೇಶೋತ್ಸವದ ಹಿರಿಮೆ ಎಂದು ಪ್ರಶಂಸೆಗೆ ಪ್ರಾಪ್ತವಾಗಿದೆ.
ಧಾರ್ಮಿಕ ಸಭೆಗಳಲ್ಲಿ ಶ್ರೀ ಕ್ಷೇತ್ರ ಒಡಿಯೂರಿನ ಶ್ರೀ ಶ್ರೀ ಶ್ರೀ ಗುರುದೇವಾನಂದ ಸ್ವಾಮೀಜಿ, ಶ್ರೀ ಧಾಮ ಮಾಣಿಲದ ಶ್ರೀ ಶ್ರೀ ಶ್ರೀಮೋಹನದಾಸ ಸ್ವಾಮೀಜಿ, ಶ್ರೀ ಕ್ಷೇತ್ರ ಕನ್ಯಾಡಿಯ ಶ್ರೀ ಶ್ರೀ ಶ್ರೀ ಬ್ರಹ್ಮಾನಂದ ಸರಸ್ವತಿ ಸ್ವಾಮೀಜಿ, ಬಲ್ಯೊಟ್ಟು ಗುರುಕೃಪ ಸೇವಾಶ್ರಮದ ಶ್ರೀ ಶ್ರೀ ಶ್ರೀ ವಿಖ್ಯಾತಾನಂದ ಸ್ವಾಮೀಜಿ, ರೆ|ಫಾ| ವಲೇರಿಯನ್ ಡಿ ಸೋಜ, ಮಾಜಿ ಸಚಿವರುಗಳಾದ ಕೆ.ಅಭಯಚಂದ್ರ ಜೈನ್, ಯು.ಟಿ ಖಾದರ್, ವಿನಯಕುಮಾರ್ ಸೊರಕೆ, ವಿಧಾನಪರಿಷತ್ ಸದಸ್ಯ ಹರೀಶ್ ಕುಮಾರ್, ಮಾಜಿ ಶಾಸಕರುಗಳಾದ ಶಕುಂತಳಾ ಟಿ.ಶೆಟ್ಟಿ , ಮೊದಿನ್ಬಾವ, ಜೆ.ಆರ್. ಲೋಬೋ, ದ.ಕ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ ಅಧ್ಯಕ್ಷ ಎಂ.ಎನ್. ರಾಜೆಂದ್ರ ಕುಮಾರ್, ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷರಾದ ಡಾ|ಮೋಹನ ಆಳ್ವ ,ಸ್ಥಳದಾನಿ ಡಾ| ಶಿವಪ್ರಸಾದ್ ರೈ ,ರಘುನಾಥ ಸೋಮಯಾಜಿ, ರಾಜವರ್ಮ ಬಲ್ಲಾಳ್ ಮೊದಲಾದ ಅನೇಕ ಗಣ್ಯರು ಭಾಗವಹಿಸಲಿರುವರು.








