ಬಂಟ್ವಾಳ, ಆ. ೨೮: ಮೃತದೇಹವನ್ನು ಇರಿಸಲು ತಾಲೂಕಿನ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಶೈತ್ಯಾಗಾರ ಘಟಕ ನಿರ್ಮಿಸುವ ಅಗತ್ಯವನ್ನು ಗ್ರಾಮಾಂತರ ಪೊಲೀಸ್ ಠಾಣೆಯ ಎಸ್ಸೈ ಪ್ರಸನ್ನ ಕುಮಾರ್ ಅವರು ಸಭೆಯಲ್ಲಿ ಪ್ರಸ್ತಾವಿಸಿದರು.

 

ಅವರು ಬುಧವಾರ ಬಂಟ್ವಾಳ ತಾಲೂಕು ಪಂಚಾಯತ್‌ನ ಎಸ್‌ಜಿಎಸ್‌ವೈ ಸಭಾಂಗಣದಲ್ಲಿ ನಡೆದ ತಾಲೂಕು ತ್ರೈಮಾಸಿಕ ಕೆಡಿಪಿ ಸಭೆಯಲ್ಲಿ ಸಲಹೆ ನೀಡಿದರು.
ಬಂಟ್ವಾಳ ಶಾಸಕ ಯು.ರಾಜೇಶ್ ನಾಯ್ಕ್ ಅಧ್ಯಕ್ಷತೆ ವಹಿಸಿದ್ದ ಸಭೆಯಲ್ಲಿ ಪ್ರಸ್ತಾಪಿಸಿದವರು. ತಮ್ಮ ಠಾಣಾ ವ್ಯಾಪ್ತಿಯಲ್ಲಿ ಕಂಡುಬರುವ ಅಪರಿಚಿತ ಶವಗಳನ್ನು ಖಾಸಗಿ ಆಸ್ಪತ್ರೆಯ ಶೈತ್ಯಾಗಾರದಲ್ಲಿರಿಸಬೇಕಾಗುತ್ತದೆ. ಇದಕ್ಕೆ ದಿನವೊಂದಕ್ಕೆ ಒಂದೂವರೆ ಸಾವಿರ ಹಾಗೂ ಆಂಬುಲೆನ್ಸ್‌ನ ವೆಚ್ಚವನ್ನು ಪೊಲೀಸ್ ಇಲಾಖೆ ಭರಿಸಬೇಕಾಗುತ್ತದೆ ಎಂದರು.
ಬಂಟ್ವಾಳ ತಾಲೂಕಿನ ನೆರೆಪೀಡಿತ ಪ್ರದೇಶಗಳಲ್ಲಿ ಇನ್ನು ಮುಂದೆ ಮನೆ ಕಟ್ಟಲು ಅವಕಾಶ ನೀಡದಿರಲು ಗ್ರಾಮ ಪಂಚಾಯತ್‌ಗೆ ಸೂಚನೆ ನೀಡುವಂತೆ ಗ್ರಾಮಾಂತರ ಪೊಲೀಸ್ ಠಾಣೆಯ ಎಸ್ಸೈ ಪ್ರಸನ್ನ ಒತ್ತಾಯಿಸಿದರು. ಮೊದಲು ನಾವೂರು, ಸರಪಾಡಿ, ಕಡೇಶ್ವಾಲ್ಯ ಮೊದಲಾದ ನೆರೆ ಪೀಡಿತ ಪ್ರದೇಶಗಳಲ್ಲಿ ೩೦ ಮನೆಗಳಿದ್ದವು. ಈಗ ೭೪ ಮನೆಗಳು ನಿರ್ಮಾಣವಾಗಿದೆ ಂದು ಗಮನಸೆಳೆದರು.
೮೨ ಡೆಂಗ್ ಪ್ರಕರಣಗಳು:
ತಾಲೂಕಿನಲ್ಲಿ ೮೨ ಡೆಂಗ್ ಪ್ರಕರಣಗಳು ಪತ್ತೆಯಾಗಿದ್ದು, ಎಲ್ಲರೂ ಕೂಡ ಗುಣಮುಖರಾಗಿ ಆರೋಗ್ಯದಿಂದ ಮನೆಯಲ್ಲಿದ್ದಾರೆ. ಯಾರು ಕೂಡ ಡೆಂಗ್‌ನಿಂದ ಸಾವನ್ನಪ್ಪಿರುವ ಪ್ರಕರಣ ದಾಖಲಾಗಿಲ್ಲ ಎಂದು ತಾಲೂಕು ಆರೋಗ್ಯಾಧಿಕಾರಿ ಡಾ.ದೀಪಾ ಪ್ರಭು ಸ್ಪಷ್ಟಪಡಿಸಿದರು.
ಮಳೆ ಹಾನಿ ಪರಿಹಾರಕ್ಕೆ ಸಂಬಂಧಿಸಿ ಕರೋಪಾಡಿ ಗ್ರಾಮದಲ್ಲಿ ಪೂರ್ಣಪ್ರಮಾಣದಲ್ಲಿ ಮನೆಯೊಂದು ಹಾನಿಯಾಗಿದ್ದು, ಈ ಸಂತ್ರಸ್ಥರಿಗೆ ನಯಾಪೈಸೆ ಪರಿಹಾರಧನ ವಿತರಣೆಯಾಗದ ಕುರಿತು ಸಭೆಯಲ್ಲಿ ಚರ್ಚೆನಡೆಯಿತು. ಒಂದು ಹಂತದಲ್ಲಿ ಈ ಮನೆಯನ್ನು ಗುರುತಿಸದ ಕಂದಾಯ ಅಧಿಕಾರಿಯನ್ನು ಶಾಸಕರು ಹಾಗೂ ಜಿಪಂ ಸದಸ್ಯರು ತರಾಟೆಗೆ ತೆಗೆದುಕೊಂಡರು.
ಸರ್ವರ್ ಸಮಸ್ಯೆಯಿಂದ ೪೦೬ ಪಡಿತರ ಚೀಟಿ ಅರ್ಜಿಗಳು ವಿಲೇಗೆ ಬಾಕಿಯಾಗಿದೆ ಎಂದು ಆಹಾರ ಇಲಾಖೆಯ ಅಧಿಕಾರಿ ಸಭೆಯ ಮುಂದಿಟ್ಟಾಗ ಮಧ್ಯಪ್ರವೇಶಿಸಿದ ಜಿಪಂ ಸದಸ್ಯ ತುಂಗಪ್ಪ ಬಂಗೇರ, ಯಾವಾಗಲೂ ಸರ್ವರ್ ಸಮಸ್ಯೆಯಿಂದ ಜನಸಾಮಾನ್ಯರು ತೊಂದರೆಯಾಗುತ್ತಿದ್ದು, ಇದು ಯಾವಾಗ ಪರಿಹಾರವಾಗುತ್ತದೆ ಎಂದು ಪ್ರಶ್ನಿಸಿದರು
ತಾಲೂಕಿನಲ್ಲಿ ದನದ ವಿಚಾರವಾಗಿ ಅಲ್ಲಲ್ಲಿ ಘರ್ಷಣೆ, ಗಲಾಟೆ ನಡೆಯುತ್ತಿದೆ. ಈ ಬಗ್ಗೆ ದನ ಸಾಗಾಟ ಮತ್ತು ಕೊಂಡುಕೊಳ್ಳುವವರ ಮಧ್ಯೆ ಸಮನ್ವಯತೆ ಸಾಧಿಸಬೇಕು ಹಾಗೂ ದನಗಣತಿ ಮಾಡುವಂತೆ ಜಿಪಂ ಸದಸ್ಯೆ ಮಮತಾ ಗಟ್ಟಿ ಒತ್ತಾಯಿಸಿದರು. ಈ ನಿಟ್ಟಿನಲ್ಲಿ ಜಿಲ್ಲಾಧಿಕಾರಿಯವರ ಸಮಕ್ಷಮ ಆಗಿನ ಸಚಿವ ಯು.ಟಿ.ಖಾದರ್ ಅವರ ನೇತೃತ್ವದಲ್ಲಿ ಜಿಲ್ಲೆಯ ಶಾಸಕರು ಸೇರಿ ಸಭೆಯಲ್ಲಿ ಚರ್ಚಿಸಲಾಗಿದೆ ಎಂದು ಶಾಸಕ ರಾಜೇಶ್ ನಾಯ್ಕ್ ತಿಳಿಸಿದರು.
ಅಂಗನವಾಡಿ ಅವ್ಯವಸ್ಥೆ, ಶಿಕ್ಷಣ ಇಲಾಖೆಯಿಂದ ವಿದ್ಯಾರ್ಥಿಗಳಿಗೆ ವಿತರಿಸಲಾಗುವ ಸಮವಸ್ತ್ರ, ಸೈಕಲ್, ಶೂ ಇನ್ನು ವಿತರಣೆಯಾಗದಿರುವುದು, ಬಹುಗ್ರಾಮಕುಡಿಯುವ ನೀರಿನ ಯೋಜನೆಯ ಅಪೂರ್ಣ ಕಾಮಗಾರಿ ಹಾಗೂ ಮೆಸ್ಕಾಂ ಸಹಿತ ವಿವಿಧ ಇಲಾಖೆಯ ಪಾಲನವರದಿ ಕುರಿತು ಚರ್ಚೆ ನಡೆಯಿತು.
ಸಭೆಯಲ್ಲಿ ತಾಪಂ ಅಧ್ಯಕ್ಷ ಚಂದ್ರಹಾಸ ಕರ್ಕೇರಾ, ಉಪಾಧ್ಯಕ್ಷ ಅಬ್ಬಾಸ್ ಅಲಿ, ಸ್ಥಾಯಿ ಸಮಿತಿ ಅಧ್ಯಕ್ಷೆ ಧನಲಕ್ಷ್ಮಿ ಬಂಗೇರ ವೇದಿಕೆಯಲ್ಲಿದ್ದರು. ಜಿಪಂ ಸದಸ್ಯರಾದ ರವೀಂದ್ರ ಕಂಬಳಿ, ಕಮಾಲಾಕ್ಷಿ ಪೂಜಾರಿ, ಮಂಜುಳಾ ಮಾವೆ, ತುಂಗಪ್ಪ ಬಂಗೇರ ಅವರು ಚರ್ಚೆಯಲ್ಲಿ ಪಾಲ್ಗೊಂಡರು. ಕಾರ್ಯ ನಿರ್ವಹಣಾಧಿಕಾರಿ ರಾಜಣ್ಣ ಸ್ವಾಗತಿಸಿ, ವಂದಿಸಿದರು.

LEAVE A REPLY

 Click this button or press Ctrl+G to toggle between Kannada and English

Please enter your comment!
Please enter your name here