

ಬಂಟ್ವಾಳ : ನನಗಲ್ಲ ನಿನಗೆ ಎಂಬ ಧ್ಯೇಯ ವಾಕ್ಯದಡಿಯಲ್ಲಿ ರಾಷ್ಟ್ರೀಯ ಸೇವಾಯೋಜನೆಯ ಸ್ವಯಂಸೇವಕರು ಸಮಾಜದಲ್ಲಿ ಉತ್ಸಾಹ, ತ್ಯಾಗ, ಸಹಬಾಳ್ವೆ ಹಾಗೂ ನಿಸ್ವಾರ್ಥದಿಂದ ಸೇವೆ ಮಾಡಬೇಕು. ಎನ್.ಸಿ.ಸಿ ದೇಶದ ರಕ್ಷಣೆಗೆ ಶ್ರಮಿಸಿದರೆ, ದೇಶವನ್ನು ಕಟ್ಟುವ ಕಾರ್ಯದಲ್ಲಿ ರಾಷ್ಟ್ರೀಯ ಸೇವಾಯೋಜನೆಯು ಶ್ರಮಿಸುತ್ತದೆ. ಭಾರತಾಂಬೆಯ ಮಕ್ಕಳೆಲ್ಲಾ ನಾವು ಒಂದೇ ಎಂಬ ಭಾವನೆಯನ್ನು ಮೂಡಿಸುವುದು ವಿಶೇಷ. ಸೇವೆಯ ಹೊರತಾದ ಮಾನವನ ಜೀವನ ಅಪರಿಪೂರ್ಣ ಎಂದು ವಿದ್ಯಾರಶ್ಮಿ ಪದವಿ ವಿದ್ಯಾಲಯ ಸವಣೂರು ಇಲ್ಲಿಯ ಉಪನ್ಯಾಸಕ ವೆಂಕಟರಮಣ.ಎನ್ ನುಡಿದರು.
ಶ್ರೀರಾಮ ಪ್ರಥಮದರ್ಜೆ ಕಾಲೇಜು ಕಲ್ಲಡ್ಕ ಇದರ ರಾಷ್ಟ್ರೀಯ ಸೇವಾಯೋಜನೆಯ 2019-20ನೇ ಸಾಲಿನ ಚಟುವಟಿಕೆಗಳನ್ನು ಉದ್ಘಾಟಿಸಿ ವಿದ್ಯಾರ್ಥಿಗಳನ್ನು ಉದ್ದೇಶಿಸಿ ಮಾತನಾಡಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕಾಲೇಜಿನ ಪ್ರಾಂಶುಪಾಲರಾದ ಕೃಷ್ಣಪ್ರಸಾದ ಕಾಯರ್ಕಟ್ಟೆ ಇವರು ವಹಿಸಿ ಶುಭ ಹಾರೈಸಿದರು ಮತ್ತು ಯೋಜನಾಧಿಕಾರಿಯಾದ ಹರೀಶ್ ಇವರು ಉಪಸ್ಥಿತರಿದ್ದರು. ಕಾಯಕ ಎಂಬ ಶೀರ್ಷಿಕೆಯಡಿಯಲ್ಲಿ ತಿಂಗಳಿಗೆ 2 ಭಿತ್ತಿ ಪತ್ರಿಕೆಗಳನ್ನು ವಿದ್ಯಾರ್ಥಿಗಳು ಹೊರತರುತ್ತಿದ್ದಾರೆ.
ಕಾರ್ಯಕ್ರಮವನ್ನು ಅರ್ಪಿತಾ ದ್ವಿತೀಯ ಬಿ.ಕಾಂ ಸ್ವಾಗತಿಸಿ, ದುರ್ಗಾಶ್ರೀ ದ್ವಿತೀಯ ಬಿ.ಎ ವಂದಿಸಿ, ವೇಘಾಶಿನಿ ದ್ವಿತೀಯ ಬಿ.ಕಾಂ ಇವರು ನಿರೂಪಿಸಿದರು.








