ವಿಟ್ಲ: ಕೊಳ್ನಾಡು ಗ್ರಾಮ ಪಂಚಾಯತ್‌ನ ನೇತ್ರಾವತಿ ಸಭಾಂಗಣದಲ್ಲಿ ಗ್ರಾಮ ಪಂಚಾಯತ್ ಹಾಗೂ ಸಂಜೀವಿನಿ ಸ್ವಸಹಾಯ ಗುಂಪುಗಳ ಒಕ್ಕೊಟದ ಆಶ್ರಯದಲ್ಲಿ ಗುಂಪುಗಳ ಸದಸ್ಯರಿಗೆ ಅಣಬೆ ಕೃಷಿ ತರಬೇತಿ ಕಾರ್ಯಕ್ರಮ ನಡೆಯಿತು.
ಕಾರ್ಯಕ್ರಮ ಉದ್ಫಾಟಿಸಿ ಮಾತನಾಡಿದ ಕೊಳ್ನಾಡು ಗ್ರಾಮ ಪಂಚಾಯಿತಿ ಅಧ್ಯಕ್ಷ ಸುಭಾಶ್ಚಂದ್ರ ಶೆಟ್ಟಿ ಮಾತನಾಡಿ ಕೊಳ್ನಾಡಿಗೆ ಸ್ವಸಹಾಯ ಗುಂಪುಗಳಿಗೆ ಸಾಲ ವಿತರಣೆಗೆ 30ಲಕ್ಷ ರೂ. ಗುರಿ ನಿಗದಿಪಡಿಸಲಾಗಿದೆ. ಇದನ್ನು ಸದುಪಯೋಗ ಪಡಿಸುವ ದೃಷ್ಟಿಯಿಂದ ಅತಿ ಕಡಿಮೆ ವೆಚ್ಚದಲ್ಲಿ ಲಾಭದಾಯಿಕ ಉದ್ಯೋಗ ಸಿಗುವ ಅಣಬೆ ಕೃಷಿ ತರಬೇತಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಇದರ ಪ್ರಯೋಜನ ಪಡೆದು ಸ್ವಾವಲಂಬಿಗಳಾದಾಗ ಕಾರ್ಯಕ್ರಮ ಅರ್ಥಪೂರ್ಣವಾಗುತ್ತದೆ. ಮುಂದೆಯೂ ಯಾವುದೇ ವೃತ್ತಿಯ ಬಗ್ಗೆ ತರಬೇತಿ ಗುಂಪು ಸದಸ್ಯರು ಬಯಸಿದಲ್ಲಿ ಗ್ರಾಮದಲ್ಲೇ ಉಚಿತ ತರಬೇತಿಯನ್ನು ನೀಡಲು ಪಂಚಾಯಿತಿ ಬದ್ಧವಾಗಿದೆ ಎಂದರು.
ಕಾಸರಗೋಡು ಕೃಷಿ ವಿಜ್ಞಾನ ಕೇಂದ್ರದ ಸಂಪನ್ಮೂಲ ವ್ಯಕ್ತಿ ಪಾಂಡುರಂಗ ಅವರು ಪ್ರಾಸ್ತಾವಿಕವಾಗಿ ಮಾತನಾಡಿ ಮಾರುಕಟ್ಟೆಯಲ್ಲಿ ಅತ್ಯಧಿಕ ಬೇಡಿಕೆಯಿದ್ದು ಅಣಬೆ ಆರೋಗ್ಯಕ್ಕೆ ಪೂರಕವಾಗಿದ್ದು ಡಯಾಬಿಟಿಸ್, ಹೃದ್ರೋಗ ನಿಯಂತ್ರಣ ರಕ್ತ ಶುದ್ಧೀಕರಣದಂತಹ ಔಷಧೀಯ ಗುಣಗಳನ್ನು ಹೊಂದಿದೆ. ಇದನ್ನು ಸ್ವಂತ ಉಪಯೋಗಕ್ಕೆ ಮನೆಯಲ್ಲೇ ಮಾಡಬಹುದಾಗಿದೆ ಎಂದರು.
ಸಭೆಯಲ್ಲಿ ಗ್ರಾ.ಪಂ. ಸದಸ್ಯರಾದ ಜಯಂತಿ ಎಸ್. ಪೂಜಾರಿ, ಪವಿತ್ರ ಪೂಂಜ, ಐರಿನ್ ಡಿಸೋಜ, ಹಮೀದ್ ನಾರ್ಶ, ಗಂಗಾಧರ ಚೌಟ, ಇಬ್ರಾಹಿಂ, ಒಕ್ಕೂಟದ ಅಧ್ಯಕ್ಷೆ ಚಂದ್ರಕಲಾ ಉಪಸ್ಥಿತರಿದ್ದರು. ಪಿಡಿಒ ರೋಹಿಣಿ ಬಿ. ಸ್ವಾಗತಿಸಿ, ವಂದಿಸಿದರು.

LEAVE A REPLY

 Click this button or press Ctrl+G to toggle between Kannada and English

Please enter your comment!
Please enter your name here