ವಿಟ್ಲ: ಬಹು ವರ್ಷಗಳ ಬೇಡಿಕೆಯಾದ ಕೇಪು ಸಬ್‌ಸ್ಟೇಶನ್ ಸ್ಥಾಪನೆಗೆ ಸಂಬಂಧಿಸಿದ ಜಾಗದ ಸಮಸ್ಯೆ ನಿವಾರಣೆಯಾದ ತಕ್ಷಣವೇ ಮೆಸ್ಕಾಂ ಇಲಾಖೆ ಕಾರ್ಯಪ್ರವೃತ್ತರಾಗಿ ಕೆಲಸ ಪೂರ್ತಿ ಮಾಡಲಿದೆ. ಅಪಾಯಕಾರಿ ಮರ ಕಡಿಯುವ ಜವಾಬ್ದಾರಿ ಗ್ರಾಮ ಪಂಚಾಯಿತಿ ಹಾಗೂ ಅರಣ್ಯ ಇಲಾಖೆಗೆ ಸಂಬಂಧಿಸಿದ್ದು, ಮೆಸ್ಕಾಂ ಜವಾಬ್ದಾರಿಯಲ್ಲ. ಅದಕ್ಕೆ ಸಂಪೂರ್ಣ ಸಹಕಾರ ಮೆಸ್ಕಾಂ ಇಲಾಖೆ ನೀಡಲಿದೆ. ಕಂಬ ಸ್ಥಳಾಂತರ ಸಮಸ್ಯೆಗೆ ಲೋಕೋಪಯೋಗಿ ಹಾಗೂ ಮೆಸ್ಕಾಂ ಗುತ್ತಿಗೆದಾರರ ನಡುವಿನ ವಿಚಾರವಾಗಿದೆ. ಮಾದರಿ ವಿದ್ಯುತ್ ಗ್ರಾಮ ಯೋಜನೆ ಬದಲು ಬೇರೆ ಹೊಸ ಯೋಜನೆಗೆ ಕ್ರಮ ಜರುಗಿಸಲಾಗುವುದು ಎಂದು ಮೆಸ್ಕಾಂ ಅಧೀಕ್ಷಕ ಇಂಜಿನಿಯರ್ ಮಂಜಪ್ಪ ತಿಳಿಸಿದರು.
ಅವರು ಬುಧವಾರ ವಿಟ್ಲದ ಪಂಚಲಿಂಗೇಶ್ವರ ದೇವಸ್ಥಾನ ಸಭಾಭವನದಲ್ಲಿ ನಡೆದ ವಿಟ್ಲ ಉಪವಿಭಾಗ ಮಟ್ಟದ ಮೆಸ್ಕಾಂ ಜನಸಂಪರ್ಕ ಸಭೆಯಲ್ಲಿ ಮಾತನಾಡಿದರು.
ಕೊಳ್ನಾಡು ಗ್ರಾಮ ಪಂಚಾಯಿತಿ ಅಧ್ಯಕ್ಷ ಸುಭಾಶ್ಚಂದ್ರ ಶೆಟ್ಟಿ ಮಾತನಾಡಿ ಮಾದರಿ ವಿದ್ಯುತ್ ಗ್ರಾಮ ಯೋಜನೆ ನೆನೆಗುದಿಗೆ ಬಿದ್ದಿದೆ. ಕಬಕ-ಸುರತ್ಕಲ್ ರಸ್ತೆ ಕಾಮಗಾರಿ ವೇಳೆ ರಸ್ತೆ ಬದಿಯ ವಿದ್ಯುತ್ ಕಂಬಗಳನ್ನು ಮೆಸ್ಕಾಂ ಹಾಗೂ ಲೋಕೋಪಯೋಗಿ ಇಲಾಖೆಯ ನಡುವಿನ ಹೊಂದಾಣಿಕೆ ಸಮಸ್ಯೆಯಿಂದ ತೆರವುಗೊಳಿಸಿಲ್ಲ. ಅನಾಹುತ ಸಂಭವಿಸಿದ ಬಳಿಕ ಎಚ್ಚೆತ್ತುಕೊಳ್ಳುವ ಬದಲು ಮೊದಲೇ ಎಚ್ಚೆತ್ತುಕೊಂಡರೆ ಸಮಸ್ಯೆ ಬರುವುದಿಲ್ಲ ಎಂದು ಸಲಹೆ ನೀಡಿದರು.
ಮಾಣಿಲ ಗ್ರಾಮ ಪಂಚಾಯಿತಿ ಅಧ್ಯಕ್ಷ ರಾಜೇಶ್ ಕುಮಾರ್ ಬಾಳೆಕಲ್ಲು ಮಾತನಾಡಿ ಮಾಣಿಲ ಗ್ರಾಮವನ್ನು ಕನ್ಯಾನ ಶಾಖೆಗೆ ಸೇರಿಸಲಾಗಿದೆ. ಇದರಿಂದ ಜನರಿಗೆ ತೊಂದರೆಯಾಗಿದೆ. ತೋಟದಿಂದ ಮಧ್ಯೆದಿಂದ ತಂತಿಗಳು ಹಾದುಹೋಗುತ್ತಿದೆ. ಅವುಗಳನ್ನು ತೆರವುಗೊಳಿಸಿ ರಸ್ತೆ ಬದಿಯಲ್ಲಿ ಹಾಕಬೇಕು ಎಂದು ಆಗ್ರಹಿಸಿದರು. ಪುಣಚ ಗ್ರಾಮದಲ್ಲಿ ಹಳೆ ಹೆಚ್‌ಟಿ ತಂತಿ ಇದ್ದು, ಅಪಾಯವನ್ನು ಆಹ್ವಾನಿಸುತ್ತಿದೆ. ಈ ಬಗ್ಗೆ ಗಮನಹರಿಸಲು ಎರಡು ವರ್ಷದಿಂದ ಮನವಿ ಸಲ್ಲಿಸಿದರೂ ಯಾವುದೇ ಪ್ರಯೋಜನವಾಗಿಲ್ಲ ಎಂದು ಪುಣಚ ಗ್ರಾಮ ಪಂಚಾಯಿತಿ ಉಪಾಧ್ಯಕ್ಷ ಮಹೇಶ್ ಶೆಟ್ಟಿ ದೂರಿದರು. ಕರೋಪಾಡಿ ಗ್ರಾಮದ ಪದ್ಯಾಣ ಶಾಲೆಯ ಅಂಗಳದಲ್ಲಿ ೧೧ಕೆವಿ ವಿದ್ಯುತ್ ಪರಿವರ್ತಕ ಹಾಗೂ ತಂತಿ ಅನ್ನು ಬದಲಾಯಿಸುವಂತೆ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಬೇಬಿ ಆರ್ ಶೆಟ್ಟಿ ಮನವಿ ಸಲ್ಲಿಸಿದರು.
ಕೇಪು ಸಬ್ ಸ್ಟೇಶನ್ ನಿರ್ಮಾಣ ಆಗದ ಬಗ್ಗೆ ರಾಮಣ್ಣ ಪಾಲಿಗೆ ಅವರು ಪ್ರಸ್ತಾಪಿಸಿದರು. ಈ ಸಂದರ್ಭ ಮಾತನಾಡಿದ ಕೆಪಿಟಿಸಿಎಲ್ ಅಧೀಕ್ಷಕ ರವಿಕಾಂತ್ ಕಾಮತ್ ಮಾತನಾಡಿ ಈ ಜಾಗ ಗೇರು ಅಭಿವೃದ್ಧಿ ನಿಗಮಕ್ಕೆ ಸಂಬಂಧಿಸಿದ್ದು, ನಮ್ಮ ಬೇಡಿಕೆಯ ಸ್ಥಳ ಅರಣ್ಯ ಇಲಾಖೆಗೆ ಸೇರಿದೆ ಎಂದು ತಿಳಿದು ಬಂದಿದೆ. ಬೇರೆ ಜಾಗ ತೋರಿಸಿ ಕೊಟ್ಟರೆ ಮಾಡಲು ಸಿದ್ಧ ಎಂದರು.
ಇದಕ್ಕೆ ಸ್ಪಷ್ಟನೆ ನೀಡಿದ ಜಯಶ್ಯಾಂ ನೀರ್ಕಜೆ ಅವರು ಮಾತನಾಡಿ ಇದು ಅರಣ್ಯ ಇಲಾಖೆಯ ಜಾಗವಲ್ಲ. ಕಂದಾಯ ಇಲಾಖೆ ಹಾಗೂ ಗೇರು ನಿಗಮದ ಜಾಗವಾಗಿದ್ದು, ಸ್ವಲ್ಪ ಜಾಗ ಮಾತ್ರ ಮೂವರು ವ್ಯಕ್ತಿಗಳ ಕುಮ್ಕಿಯಾಗಿದೆ. ಸಂಬಂಧಿತ ಭೂದಾಖಲೆಗಳೊಂದಿಗೆ ಈಗಾಗಲೇ ಜಿಲ್ಲಾಧಿಕಾರಿಯವರಿಗೆ ಮನವಿ ಸಲ್ಲಿಸಲಾಗಿದೆ. ಈ ಬಗ್ಗೆ ಜಿಲ್ಲಾಧಿಕಾರಿಗಳು ಇತ್ಯರ್ಥ ಮಾಡಿದರೆ ಸಮಸ್ಯೆ ಮುಗಿಯುತ್ತದೆ ಎಂದರು.
ಅಳಿಕೆ ಗ್ರಾಮ ಪಂಚಾಯಿತಿ ಅಧ್ಯಕ್ಷ ಪದ್ಮನಾಭ ಪೂಜಾರಿ ಮಾತನಾಡಿ ಮೆಸ್ಕಾಂ ಇಲಾಖೆ ಗೇರು ನಿಗಮಕ್ಕೆ ಹಣ ಪಾವತಿಸಿದರೆ ಜಾಗವನ್ನು ನೀಡಲು ಅವರು ತಯಾರಿದ್ದಾರೆ ಎಂದು ನಿಗಮ ತಿಳಿಸಿದೆ. ಈ ಬಗ್ಗೆ ಮೆಸ್ಕಾಂ ಕ್ರಮ ಕೈಗೊಳ್ಳಬೇಕು ಎಂದರು. ರಾಜೀವ ಭಂಡಾರಿ ಕೇಪು ಮಾತನಾಡಿ ಕೇಪು ಗ್ರಾಮದಲ್ಲಿ ಸಬ್ ಸ್ಟೇಶನ್ ಅಗತ್ಯವಾಗಿದೆ. ಈ ಬಗ್ಗೆ ಶಾಸಕರ ಗಮನಕ್ಕೆ ತರಲಾಗಿದೆ. ಅದು ಆಗದಿರಲು ಇರುವ ಕಾರಣದ ಬಗ್ಗೆ ಸರಕಾರದ ಜತೆ ಮಾತುಕತೆ ನಡೆಸಿ ಇತ್ಯರ್ಥ ಮಾಡಲಾಗುವುದು ಎಂದರು.
ಅಧೀಕ್ಷಕ ಮಂಜಪ್ಪ ಮಾತನಾಡಿ ಈ ಬಗ್ಗೆ ಸಂಬಂಧಪಟ್ಟವರು ಗಮನಹರಿಸಿ, ಜಾಗದ ಗೊಂದಲವನ್ನು ನಿವಾರಿಸಬೇಕು ಎಂದು ಸೂಚಿಸಿದರು. ಮೆಸ್ಕಾಂ ಇಲಾಖೆ ಜನರ ಸಮಸ್ಯೆಗಳಿಗೆ ನಿರಂತರವಾಗಿ ಸ್ಪಂದಿಸಲಿದೆ. ಒಂದು ಜನಸಂಪರ್ಕ ಸಭೆಯಲ್ಲಿ ಬಂದ ದೂರುಗಳು ಮುಂದಿನ ಸಭೆಗೆ ಈಡೇರಿಕೆಯಾಗಬೇಕು ಎಂದು ತಿಳಿಸಿದರು.
ವಿದ್ಯುತ್ ಸಮಸ್ಯೆಗಳಿಗೆ ಸಂಬಂಧಿಸಿ ನಾನಾ ಗ್ರಾಮಗಳ ಬಳಕೆದಾರರು ದೂರು, ಅಹವಾಲು ಸಲ್ಲಿಸಿದರು. ಜಿಲ್ಲಾ ಪಂಚಾಯಿತಿ ಸದಸ್ಯ ಎಂ.ಎಸ್ ಮಹಮ್ಮದ್, ವಿಟ್ಲ ಪಟ್ಟಣ ಪಂಚಾಯಿತಿ ಅಧ್ಯಕ್ಷೆ ದಮಯಂತಿ, ಬಂಟ್ವಾಳ ಮೆಸ್ಕಾಂ ಕಾರ್ಯನಿರ್ವಾಹಕ ಎಂಜಿನಿಯರ್ ರಾಮಚಂದ್ರ, ವಿಟ್ಲ ಉಪವಿಭಾಗದ ಕಾರ್ಯನಿರ್ವಾಹಕ ಎಂಜಿನಿಯರ್ ಪ್ರವೀಣ್ ಜೋಷಿ ಉಪಸ್ಥಿತರಿದ್ದರು.

 

LEAVE A REPLY

 Click this button or press Ctrl+G to toggle between Kannada and English

Please enter your comment!
Please enter your name here