

ಬಂಟ್ವಾಳ: ಸರಕಾರಿ ಪ್ರಥಮ ದರ್ಜೆ ಕಾಲೇಜು ಸಿದ್ಧಕಟ್ಟೆ ಇದರ ಆಂತರಿಕ ಗುಣಮಟ್ಟ ಭರವಸೆ ಕೋಶ, ರೆಡ್ರಿಬ್ಬನ್ ಘಟಕಗಳ ಆಶ್ರಯದಲ್ಲಿ ಇಲಿ ಜ್ವರ ನಿಯಂತ್ರಣ ಹಾಗೂ ತಡೆಗಟ್ಟುವಿಕೆ ಜಾಗೃತಿ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು.
ಡಾ.ದೀಪಕ್ ವೈದ್ಯಾಧಿಕಾರಿಗಳು ಪ್ರಾಥಮಿಕ ಆರೋಗ್ಯ ಕೇಂದ್ರ ರಾಯಿ ಇವರು ವಿದ್ಯಾರ್ಥಿಗಳಿಗೆ ಇಲಿಜ್ವರದ ಬಗ್ಗೆ ಮಾಹಿತಿ ನೀಡಿದರು. ಇಲಿ ಜ್ವರವು ಮಳೆಗಾಲದಲ್ಲಿ ಕಂಡು ಬರುವ ಸಾಂಕ್ರಾಮಿಕ ರೋಗವಾಗಿದ್ದು ಲೆಪ್ಟೋಸ್ಪೈರ ಎಂಬ ಸೂಕ್ಷ್ಮಾಣು ಜೀವಿಯಿಂದ ಹರಡುತ್ತದೆ. ಸಾಕು ಪ್ರಾಣಿಗಳು ಹಾಗೂ ಕಾಡು ಪ್ರಾಣಿಗಳ ಮೂತ್ರದಿಂದ ನೀರಿನ ಮೂಲಕ ದೇಹವನ್ನು ಸೇರಿಕೊಳ್ಳುತ್ತದೆ. ಮುಂಜಾಗ್ರತಾ ಕ್ರಮವಾಗಿ ಪರಿಸರವನ್ನು ನಿರ್ಮಲವಾಗಿಟ್ಟುಕೊಳ್ಳುವ ಹಾಗೂ ನೀರನ್ನು ಶುದ್ಧೀಕರಿಸಿ ಬಳಸುವ ಬಗ್ಗೆ ಮಾಹಿತಿ ನೀಡಿದರು.
ಜ್ಯೋತಿ ಆರೋಗ್ಯ ಸಹಾಯಕರು ಪ್ರಾಥಮಿಕ ಆರೋಗ್ಯ ಕೇಂದ್ರ ರಾಯಿ ಹಾಗೂ ಸೀತಾ ಆಶಾ ಕಾರ್ಯಕರ್ತೆ ಇವರು ಇಲಿಜ್ವರದ ನಿಯಂತ್ರಣ ಹಾಗೂ ತಡೆಗಟ್ಟುವಿಕೆ ಕುರಿತ ಕರಪತ್ರಗಳನ್ನು ವಿದ್ಯಾರ್ಥಿಗಳಿಗೆ ಹಂಚಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ಕಾಲೇಜಿನ ಪ್ರಾಂಶುಪಾಲರಾದ ಪ್ರೊ. ಸತ್ಯನಾರಾಯಣ ಭಟ್ ಇವರು ಮಾತನಾಡಿ ನಾವು ವಾಸಿಸುವ ಪರಿಸರವನ್ನು ಪರಿಶುದ್ಧವಾಗಿ ನಿರ್ವಹಿಸದಿದ್ದರೆ ರೋಗರುಜಿನಗಳು ಉದ್ಭವಿಸುವುದು ಸಹಜವಾಗಿರುತ್ತದೆ. ಇಲಿಜ್ವರವು ಸಾಂಕ್ರಾಮಿಕ ರೋಗವಾಗಿದ್ದು ನೀರಿನ ಮೂಲಕ ಸೂಕ್ಷ್ಮಾಣು ಜೀವಿಗಳು ಮಾನವನ ದೇಹ ಸಂಪರ್ಕ ಪಡೆದು ರೋಗಲಕ್ಷಣಗಳು ಕಾಣಿಸಿಕೊಳ್ಳುತ್ತವೆ. ಪರಿಸರ ನೈರ್ಮಲ್ಯ ಹಾಗೂ ಕ್ರಮಬದ್ಧ ಚಿಕಿತ್ಸೆಯಿಂದ ಈ ರೋಗವನ್ನು ತಡೆಗಟ್ಟಬಹುದು ಎಂದರು.
ಈ ಕಾರ್ಯಕ್ರಮವನ್ನು ರೆಡ್ರಿಬ್ಬನ್ ಘಟಕದ ಸಂಚಾಲಕರಾದ ದೇವಿಪ್ರಸಾದ್ ಇವರು ಆಯೋಜಿಸಿದ್ದರು.
ಮನೀಶ್ ದ್ವಿತೀಯ ಬಿಎ ಇವರ ಪ್ರಾರ್ಥನೆಯೊಂದಿಗೆ ಕಾರ್ಯಕ್ರಮ ಪ್ರಾರಂಭಗೊಂಡಿತು. ಗುರುಪ್ರಸಾದ್ ದ್ವಿತೀಯ ಬಿಎ ಕಾರ್ಯಕ್ರಮವನ್ನು ನಿರೂಪಿಸಿದರು, ರಾಜೇಶ್ ತೃತೀಯ ಬಿಕಾಂ ಸ್ವಾಗತಿಸಿದರೆ, ದಿನೇಶ್ ಕೆ ದ್ವಿತೀಯ ಬಿಎ ಸರ್ವರಿಗೂ ವಂದಿಸಿದರು.







