ವಿಟ್ಲ : ಜುಲೈ ತಿಂಗಳಲ್ಲಿ ನಡೆದ ವಿಟ್ಲ ಪಟ್ಟಣ ಪಂಚಾಯಿತಿ ಸಾಮಾನ್ಯ ಸಭೆಯಂತೆಯೇ ಮಂಗಳವಾರ ನಡೆದ ಆಗಸ್ಟ್ ತಿಂಗಳ ವಿಟ್ಲ ಪಟ್ಟಣ ಪಂಚಾಯಿತಿ ಸಾಮಾನ್ಯ ಸಭೆ ಅರ್ಧಪಾಲು ಕಾಂಗ್ರೆಸ್-ಬಿಜೆಪಿ ಸದಸ್ಯರ ಕಟುಟೀಕೆಗಳ ಕೆಸರೆರಚಾಟದಲ್ಲಿ ಗೊಂದಲಮಯ, ಗೂಡಾಗಿ ಹೋಯಿತು. ಗದ್ದಲ ತಾರಕಕ್ಕೇರಿತ್ತು.
ಬಿಜೆಪಿ ಸದಸ್ಯರು ಸಭೆ ಆರಂಭವಾಗುತ್ತಲೇ ಆಕ್ಷೇಪಿಸಿ, ಮಾ.1ರಂದು ನಡೆದ ಸಾಮಾನ್ಯ ಸಭೆಯ ನಿರ್ಣಯ ನಂಬ್ರ 257/2018-19ರಲ್ಲಿ 3 ಕಾಮಗಾರಿಗಳ ಟೆಂಡರ್ ಮಂಜೂರಾತಿಯನ್ನು ರದ್ದುಪಡಿಸಬೇಕೆಂದು ಪ.ಪಂ.ಉಪಾಧ್ಯಕ್ಷರು, ಸ್ಥಾಯೀ ಸಮಿತಿ ಅಧ್ಯಕ್ಷರು ಸೇರಿ ಒಟ್ಟು 12 ಮಂದಿ ಸದಸ್ಯರು ನಿರ್ಣಯ ಮಾಡಿದ್ದರೂ, ಸಭೆಯ ಮಂಜೂರಾತಿಯನ್ನು ಪಡೆಯದೇ ಈ ಬಗ್ಗೆ ಟೆಂಡರ್ ಕರೆಯಲಾಗಿತ್ತು. ಆ ಬಗ್ಗೆ ಕೈಗೊಂಡ ನಿರ್ಣಯವನ್ನು ತಿದ್ದುಪಡಿ ಮಾಡಿದ ಬಗ್ಗೆ ನಾವು ವಿರೋಧ ವ್ಯಕ್ತಪಡಿಸಿ, ಜುಲೈ ತಿಂಗಳ ಸಾಮಾನ್ಯ ಸಭೆಯನ್ನು ಬಹಿಷ್ಕರಿಸಿದೆವು. ಆದರೆ ಮೀಟಿಂಗ್ ನಡೆದಿದೆಯೆಂದು ದಾಖಲಿಸಿದ್ದೀರಿ. ಇದನ್ನು ನಾವು ವಿರೋಧಿಸಲೇಬೇಕಾಗಿದೆ ಎಂದು ಹೇಳಿದರು.
ಅಧ್ಯಕ್ಷೆ ದಮಯಂತಿ ಅವರು ಮಾತನಾಡಿ, ನಿರ್ಣಯ ತಿದ್ದುಪಡಿ ಮಾಡಲಿಲ್ಲ. ಈ ಬಗ್ಗೆ ಆರೋಪ ಸರಿಯಲ್ಲ ಎಂದರು.
ಆಗ ಹಿರಿಯ ಸದಸ್ಯ ಅಶೋಕ್ ಕುಮಾರ್ ಶೆಟ್ಟಿ ಅವರು ಮಾತನಾಡಿ, ಅಧ್ಯಕ್ಷರು ದಲಿತ ಮಹಿಳೆಯೆಂಬ ಕಾರಣಕ್ಕೆ ಅವರ ವಿರುದ್ಧ ಪದೇ ಪದೇ ಸಭೆಗೆ ಅಡ್ಡಿಪಡಿಸುತ್ತಿದ್ದಾರೆ. ಅವರ ಮೇಲೆ ಬಿಜೆಪಿ ಸದಸ್ಯರು ನಿರ್ಣಯ ತಿದ್ದುಪಡಿಯ ಆರೋಪ ಮಾಡುತ್ತಿದ್ದಾರೆ. ಅದು ತನಿಖೆಯಾಗಲಿ ಎಂದರು. ಆಗ ಮಾಜಿ ಅಧ್ಯಕ್ಷ ಅರುಣ್ ಎಂ.ವಿಟ್ಲ ಅವರು ಮಾತನಾಡಿ, ಈ ರೀತಿ ನಾವು ಈ ತನಕ ಬಳಸದ ದಲಿತ ಪದವನ್ನು ಹೇಳಿ ಅವರಿಗೂ, ಸಭೆಗೂ ಅವಮಾನ ಮಾಡುತ್ತಿರುವುದು ಸರಿಯಲ್ಲ. ಅವರ ಮೇಲೆ ನಮಗೆ ಗೌರವವಿದೆ. ಸಾಮಾನ್ಯ ಸಭೆಯನ್ನು ನಿಭಾಯಿಸುವುದಕ್ಕೆ ಅವರು ಇತರರನ್ನು ಅವಲಂಬಿಸುವ ಅಗತ್ಯವಿಲ್ಲ. ಅವರು ಬಹುಮತದ ಅನುಮೋದನೆಯನ್ನು ಗೌರವಿಸಬೇಕು. ಬಂಟ್ವಾಳ ತಹಶೀಲ್ದಾರ್ ಅವರು ಪುರಸಭೆ ಅಧಿನಿಯಮ ಸೂಚಿಸಿದ ಒಮ್ಮತದ ನಿರ್ಣಯಗಳನ್ನು ತೆಗೆದು ಟೆಂಡರ್ ಪ್ರಕ್ರಿಯೆ ನಡೆಸುವಂತೆ ಮತ್ತು ಅಭಿವೃದ್ಧಿ ಕಾಮಗಾರಿಗಳ ವಿಚಾರದಲ್ಲಿ ಎಲ್ಲಾ ಸದಸ್ಯರ ಅಹವಾಲುಗಳನ್ನು ಕೇಳಿಕೊಂಡು, ವಿಶೇಷ ಸಭೆ ಕರೆದು, ಕ್ರಮಕೈಗೊಳ್ಳಬೇಕು ಎಂದು ಸೂಚಿಸಿದ್ದಾರೆ. ಅದರಂತೆ ವಿಶೇಷ ಸಭೆ ಕರೆಯಬೇಕು ಎಂದು ಆಗ್ರಹಿಸಿದರು.
ಆಗ ಮತ್ತೆ ಗದ್ದಲ ಆರಂಭವಾಯಿತು. ವಿಶೇಷ ಸಭೆ ಕರೆಯುವುದಕ್ಕೆ ಮುನ್ನ ಅಧ್ಯಕ್ಷರ ಮೇಲಿನ ಆರೋಪದ ಬಗ್ಗೆ ತನಿಖೆಯಾಗಬೇಕು ಎನ್ನಲಾಯಿತು. ವಿಶೇಷ ಸಭೆ ಕರೆಯದೇ ಈ ಸಭೆ ಮುಗಿಯುವುದಿಲ್ಲ ಎಂದೂ ಹೇಳಲಾಯಿತು. ಅಧ್ಯಕ್ಷರು ಸಭೆಯನ್ನು ಅರ್ಧ ಗಂಟೆ ಕಾಲ ಮುಂದೂಡಿದರು.
ಮತ್ತೆ ಸಭೆ ಆರಂಭವಾದಾಗ 15 ದಿನಗಳೊಳಗೆ ವಿಶೇಷ ಸಭೆ ಕರೆಯಲು ತೀರ್ಮಾನಿಸಲಾಯಿತು. ಮತ್ತೆ ಸಾಮಾನ್ಯ ಸಭೆ ಮುಂದುವರಿಯಿತು. ಸ್ಥಾಯಿ ಸಮಿತಿ ಸದಸ್ಯರನ್ನು ಆಯ್ಕೆ ಮಾಡುವ ಪ್ರಕ್ರಿಯೆ ನಡೆಯಿತು. ನಾನಾ ಕಾಮಗಾರಿಗಳ ಇ-ಟೆಂಡರ್ ಮಂಜೂರಾತಿ, ಕೆಲವೊಂದು ಹುದ್ದೆಗಳನ್ನು ಭರ್ತಿ ಮಾಡಲು ಗುತ್ತಿಗೆ ಆಧಾರದಲ್ಲಿ ಭರ್ತಿಗೊಳಿಸಲು ನಿರ್ಧರಿಸಲಾಯಿತು.
ಅಧ್ಯಕ್ಷ ಅನುಮತಿ ಮೇರೆಗೆ ಇತರ ವಿಷಯಗಳ ಬಗ್ಗೆ ಚರ್ಚೆ ಆರಂಭವಾದಾಗ ಹಿರಿಯ ಸದಸ್ಯ ಅಶೋಕ್ ಕುಮಾರ್ ಶೆಟ್ಟಿ ಅವರು ಮಾತನಾಡಿ, ಕಾರ್ಮಿಕರು ತಿಂಡಿ ತಿನ್ನುವ ಹೊಟೇಲ್ ಬಿಲ್ ನೀಡದೇ ಮತ್ತೊಂದು ಹೋಟೆಲ್ ಬಿಲ್ಲಿಗೆ ಹಣ ಪಾವತಿಯಾಗುತ್ತದೆ. ಇದರಲ್ಲಿ ಭ್ರಷ್ಟಾಚಾರದ ಶಂಕೆಯಿದೆ ಎಂದರು. ಆಗ ಮಾಜಿ ಅಧ್ಯಕ್ಷ ಅರುಣ್ ವಿಟ್ಲ ಅವರು ಮಾತನಾಡಿ, ಇದು ಸರಿಯಲ್ಲ. ಸಮರ್ಪಕವಾದ ಬಿಲ್‌ಗೆ ಪಾವತಿಸುವುದು ತಪ್ಪಲ್ಲ. ಮತ್ತು ಓರ್ವ ಪ.ಪಂ.ಸದಸ್ಯರು ಪಟ್ಟಣ ಪಂಚಾಯಿತಿ ಕಾರ್ಮಿಕರಲ್ಲಿ ತನ್ನ ಮನೆ ಕೆಲಸ ಮಾಡಿಸುವ ಪೋಟೋ ನನ್ನಲ್ಲಿದೆ ಎಂದರು. ಪರಸ್ಪರ ಆರೋಪಗಳ ಸುರಿಮಳೆಯ ನಡುವೆ ಕೊನೆಗೆ ಪರಿಸ್ಥಿತಿ ಶಾಂತವಾಯಿತು.
ಉಪಾಧ್ಯಕ್ಷ ಜಯಂತ ನಾಯ್ಕ, ಸ್ಥಾಯಿ ಸಮಿತಿ ಅಧ್ಯಕ್ಷೆ ಚಂದ್ರಕಾಂತಿ ಶೆಟ್ಟಿ, ಸದಸ್ಯರಾದ ರಾಮದಾಸ ಶೆಣೈ, ಶ್ರೀಕೃಷ್ಣ ವಿಟ್ಲ, ಲೋಕನಾಥ ಶೆಟ್ಟಿ ಕೊಲ್ಯ, ರವಿಪ್ರಕಾಶ್, ಮಂಜುನಾಥ ಕಲ್ಲಕಟ್ಟ, ಅಬ್ದುಲ್‌ರಹಿಮಾನ್ ನೆಲ್ಲಿಗುಡ್ಡೆ, ಸುನಿತಾ ಕೋಟ್ಯಾನ್, ಲತಾ ಅಶೋಕ್, ಮುಖ್ಯಾಕಾರಿ ಮಾಲಿನಿ, ಕಂದಾಯ ನಿರೀಕ್ಷಕ ಪಕೀರ ಮೂಲ್ಯ, ಎಂಜಿನಿಯರ್ ಶ್ರೀಧರ್, ರತ್ನಾ ಉಪಸ್ಥಿತರಿದ್ದರು.

LEAVE A REPLY

 Click this button or press Ctrl+G to toggle between Kannada and English

Please enter your comment!
Please enter your name here