ವಿಟ್ಲ: ಅಡಕೆ ಮತ್ತೆ ಮತ್ತೆ ಹಾನಿಕಾರಕ ಎಂಬ ವಿಚಾರ ಲೋಕಸಭೆಯಲ್ಲಿ ನೀಡಲಾಗುತ್ತಿದ್ದು, ಕೇಂದ್ರ ಸರಕಾರಕ್ಕೆ ವಿಷಕಾರಕವಲ್ಲ ಎಂದು ಸ್ಪಷ್ಟಪಡಿಸಬೇಕು.. ಕ್ಯಾಂಪ್ಕೋ ನೆರೆ ಸಂತ್ರಸ್ತರಿಗೆ ಪರಿಹಾರ ನೀಡಲು ಮುಂದಾಗಬೇಕು.. ಅಡಕೆ ಬೆಳೆಗಾರರಿಗೆ ಸಿಗುವ ಪರಿಹಾರವನ್ನು ಕ್ಯಾಂಪ್ಕೋ ಮೂಲಕ ವಿತರಣೆಗೆ ಕ್ರಮ ಕೈಗೊಳ್ಳಬೇಕು.. ಕೊಕ್ಕೊ ಬೆಳೆಗೆ ಕನಿಷ್ಠ ಕೆ.ಜಿಗೆ 100ರೂ ಸಿಗುವ ರೀತಿಯಲ್ಲಿ ಆಗಬೇಕು.. ರಾಸಯನಿಕಮಿಶ್ರಿತ ಮಾತ್ರೆ ಹಾಕಿಟ್ಟು ಅಡಕೆ ಸಂರಕ್ಷಣೆ ಮಾಡುವ ಬದಲು ಪರ್ಯಾಯ ವ್ಯವಸ್ಥೆ ಹುಡುಕುವ ಅಗತ್ಯವಿದೆ.. ನಗದು ವಹಿವಾಟು ಬಗ್ಗೆ ಜನರಿಗೆ ಗೊಂದಲ ಉಂಟಾಗುವುದನ್ನು ತಪ್ಪಿಸುವ ನಿಟ್ಟಿನಲ್ಲಿ ಕ್ರಮ ಕೈಗೊಳ್ಳಬೇಕು.. ಅಡಕೆ ಮರ ಹತ್ತುವ ಯಂತ್ರಗಳನ್ನು ರಿಯಾಯಿತಿ ದರದಲ್ಲಿ ನೀಡುವ ಕಾರ್ಯವಾಗಬೇಕು.. ಅಡ್ಯನಡ್ಕ ಸೇರಿ ಗ್ರಾಮೀಣ ಪ್ರದೇಶದಲ್ಲಿ ಬ್ಯಾಂಕಿಂಗ್ ವ್ಯವಸ್ಥೆಯಲ್ಲಿ ಸಮಸ್ಯೆ ಇದೆ.. ಎಪ್ರಿಲ್ ಮೇ ತಿಂಗಳಲ್ಲಿ ಕೊಕ್ಕೊ ಬೆಲೆ ಇಳಿಕೆ ಸರಿಯಲ್ಲ..
ಕ್ಯಾಂಪ್ಕೋ ಸಹಕಾರಿ ಸಂಸ್ಥೆಯ ವಿಟ್ಲ ಶಾಖೆಯಲ್ಲಿ ಮಂಗಳವಾರ ನಡೆದ ಸದಸ್ಯ ಬೆಳೆಗಾರರ ಸಭೆಯಲ್ಲಿ ಅಡಕೆ ಕೃಷಿಕರಿಂದ ಹೀಗೆ ಹತ್ತಾರು ಬೇಡಿಕೆಗಳು ಕೇಳಿ ಬಂದವು.
ಸಭಾಧ್ಯಕ್ಷತೆ ವಹಿಸಿ ಉತ್ತರಿಸಿದ ಕ್ಯಾಂಪ್ಕೋ ಅಧ್ಯಕ್ಷ ಎಸ್.ಆರ್ ಸತೀಶ್ಚಂದ್ರ ಅಡಕೆ ವಿಷಕಾರಕವಲ್ಲ ಎಂಬ ಬಗ್ಗೆ ಸಂಸ್ಥೆಯ ವತಿಯಿಂದ ನಡೆದ ಸಂಶೋಧನಾ ವರದಿಯನ್ನು ಈಗಾಗಲೇ ಕೇಂದ್ರ ಸರಕಾರಕ್ಕೆ ಮನವರಿಕೆ ಮಾಡಲಾಗಿದೆ. ಇನ್ನೂ ಸಹ ಈ ನಿಟ್ಟಿನಲ್ಲಿ ಸ್ಪಷ್ಟೀಕರಣ ನೀಡಲಾಗುವುದು. ದೇಶದ ಹಿತದೃಷ್ಟಿಯಿಂದ ಅಡಕೆ ನಗದು ವಹಿವಾಟು ಚೆಕ್ ಮೂಲಕ ನಡೆಸುವ ಅಗತ್ಯವಿದೆ. ಈ ವ್ಯವಸ್ಥೆಯನ್ನು ಹಂತ ಹಂತವಾಗಿ ತರುವಂತೆ ಸಂಸ್ಥೆಯ ಕಡೆಯಿಂದ ಕೇಂದ್ರಕ್ಕೆ ಪತ್ರ ಬರೆಯಲಾಗಿದೆ. ಕೊಕ್ಕೊಗೆ ಅಂತರಾಷ್ಟ್ರೀಯ ಮಾರುಕಟ್ಟೆಯಲ್ಲಿ ದರ ವ್ಯತ್ಯಾಸ ಆಗುತ್ತಿದೆ. ಗುಣಮಟ್ಟದ ವಿಚಾರದಿಂದಾಗಿ ಕೆಲವೊಮ್ಮೆ ಅಗತ್ಯ ಕ್ರಮ ಕೈಗೊಳ್ಳಬೇಕಾಗುತ್ತದೆ. ಹೊರದೇಶದ ಅಡಕೆ ಮಾರುಕಟ್ಟೆ ಬರುತ್ತಿರುವ ಹಿನ್ನೆಲೆ ಸಮಸ್ಯೆಗಳಾಗಿದೆ. ಅಡಕೆ ದರ ಹಿಂದೆ ಬರದ ರೀತಿಯಲ್ಲಿ ಎಚ್ಚರಿಕೆ ವಹಿಸುತ್ತಿದೆ ಎಂದು ತಿಳಿಸಿದರು.
ಕ್ಯಾಂಪ್ಕೋ ಹಿರಿಯ ಸದಸ್ಯ ಬೆಳೆಗಾರರಾದ ಬಾಲಕೃಷ್ಣ ರೈ ಅನಂತಾಡಿ, ಜಯಶ್ಯಾಮ್ ನೀರ್ಕಜೆ, ಗೋಪಾಲಕೃಷ್ಣ ಭಟ್ ಮಿತ್ತೂರು, ಶಂಕರ ಸಾರಡ್ಕ, ಸವಿತಾ ಅಡ್ವಾಯಿ ಕಾರ್ಯಕ್ರಮ ಉದ್ಘಾಟಿಸಿದರು.
ವ್ಯವಸ್ಥಾಪಕ ನಿರ್ದೇಶಕ ಸುರೇಶ್ ಭಂಡಾರಿ ಎಂ. ಮಾತನಾಡಿ ಕ್ಯಾಂಪ್ಕೋ ೧೮೭೫ ಕೋಟಿ ವ್ಯವಹಾರ ನಡೆಸುವ ಮೂಲಕ ೪೫ ವರ್ಷಗಳಲ್ಲಿ ದಾಖಲೆಯನ್ನು ಮಾಡಿ, ೨೮.೨೯ಕೋಟಿ ಲಾಭ ಗಳಿಸಿದೆ. ಸದಸ್ಯ ಬೆಳೆಗಾರರಿಗೆ ಸುಮಾರು ೧೯ ಮಂದಿಗೆ ತೆರೆದ ಹೃದಯ ಚಿಕಿತ್ಸೆಗೆ, ಕಿಡ್ನಿ ವೈಫಲ್ಯವಾದ ೭ ಜನರಿಗೆ ಡಯಾಲೀಸಿಸ್ ಮಾಡಲು ನೆರವು ನೀಡಲಾಗಿದೆ. ಬೆಳೆಗಾರ ಸದಸ್ಯರಿಗೆ ಹಾಗೂ ಕಾರ್ಮಿಕರಿಗೆ ಅವಘಡಗಳು ನಡೆದಾಗ ಸಹಾಯಧನ ವಿತರಿಸುವ ಕಾರ್ಯ ಮಾಡಲಾಗುತ್ತಿದೆ ಎಂದು ತಿಳಿಸಿದರು.
ನಿರ್ದೇಶಕರಾದ ಕೊಂಕೋಡಿ ಪದ್ಮನಾಭ, ಬಿ. ತಿಮ್ಮಪ್ಪ ಶೆಟ್ಟಿ, ಕೃಷ್ಣಪ್ರಸಾದ್ ಮಡ್ತಿಲ, ಶಂಭುಲಿಂಗ ಜಿ. ಹೆಗ್ಡೆ ನಡಗೋಡು, ಕೆ. ಸತೀಶ್ಚಂದ್ರ ಭಂಡಾರಿ, ಎಂ. ಕೆ. ಶಂಕರನಾರಾಯಣ ಭಟ್, ಎ. ಸುಬ್ರಹ್ಮಣ್ಯ ಭಟ್, ಜಿಎಂ ರೇಶ್ಮಾ ಮಲ್ಯ, ಅಡಕೆ ವಿಭಾಗದ ಸಿಎಂ ಮುರಳೀಧರ, ಮಾರುಕಟ್ಟೆ ವಿಭಾಗದ ಜಯ ಭಂಡಾರಿ, ವಿಟ್ಲ ವ್ಯವಸ್ಥಾಪಕ ರಾಜೇಶ್ ಉಪಸ್ಥಿತರಿದ್ದರು.
ಉಪಾಧ್ಯಕ್ಷ ಶಂಕರನಾರಾಯಣ ಭಟ್ ಖಂಡಿಗೆ ಸ್ವಾಗತಿಸಿದರು. ಪುತ್ತೂರು ಸ್ಥಾನೀಯ ವ್ಯವಸ್ಥಾಪಕ ಗೋವಿಂದ ಭಟ್ ವಂದಿಸಿದರು. ಸಿಬ್ಬಂದಿ ಅಭಿಜಿತ್ ಕಾರ್ಯಕ್ರಮ ನಿರೂಪಿಸಿದರು. ಸಿಬ್ಬಂದಿಗಳಾದ ಕೃಷ್ಣಪ್ಪ ಕೆ., ಧನ ಲಕ್ಷ್ಮಿ ಸಹಕರಿಸಿದರು.

 

LEAVE A REPLY

 Click this button or press Ctrl+G to toggle between Kannada and English

Please enter your comment!
Please enter your name here