

ಬಂಟ್ವಾಳ: ಮಂಗಳೂರು ಶ್ರೀ ನಾರಾಯಣ ಗುರು ವೈದಿಕ ಸಮಿತಿ ವತಿಯಿಂದ ಯಜುರುಪಾಕರ್ಮ ಮತ್ತು ಗುರುವಂದನಾ ಕಾರ್ಯಕ್ರಮ ಕಾರ್ಕಳ ಆನೆಕೆರೆ ಶ್ರೀ ಕೃಷ್ಣ ಮಂದಿರದಲ್ಲಿ ಆ.15ರಂದು ಜರಗಿತು.
ಶ್ರೀ ಕೃಷ್ಣ ಮಂದಿರದ ಆಡಳಿತ ಮೊಕ್ತೇಸರ ಭಾಸ್ಕರ್ ಎಸ್. ಕೋಟ್ಯಾನ್ ಅವರು ಕಾರ್ಯಕ್ರಮವನ್ನು ಉದ್ಘಾಟಿಸಿದರು. ಬಲ್ಯೊಟ್ಟು ಕಾರ್ಕಳ ಶ್ರೀ ಗುರುಕೃಪಾ ಸೇವಾಶ್ರಮದ ಶ್ರೀ ವಿಖ್ಯಾತಾನಂದ ಸ್ವಾಮೀಜಿ ಆಶೀರ್ವಚನ ನೀಡಿ ಮಾತನಾಡಿ, ಬ್ರಹ್ಮಶ್ರೀ ನಾರಾಯಣ ಗುರುಗಳ ಸಂದೇಶವನ್ನು ಸಮಾಜಮುಖಿಯಾಗಿ ನಿರ್ವಹಿಸುವುದರ ಜೊತೆಗೆ ವೈದಿಕ ಸೇವೆಯನ್ನು ಸಮಾಜದ ಜನರ ಕೈಗೆಟಕುವಂತೆ ಮಾಡುವುದು ಉತ್ತಮ ಕಾರ್ಯ ಎಂದರು. ಜಾನಪದ ವಿದ್ವಾಂಸ ಬನ್ನಂಜೆ ಬಾಬು ಅಮೀನ್ ಅವರು ಧಾರ್ಮಿಕ ಉಪನ್ಯಾಸ ನೀಡಿದರು. ಶ್ರೀ ನಾರಾಯಣ ಗುರು ವೈದಿಕ ಸಮಿತಿ ಅಧ್ಯಕ್ಷ ಸೋಮನಾಥ ಶಾಂತಿ ಅವರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.
ಈ ಸಂದರ್ಭದಲ್ಲಿ ಬನ್ನಂಜೆ ಕೇಶವ ಶಾಂತಿ, ವಿಶ್ವನಾಥ್ ಶಾಂತಿ ಮರಳಿ, ಸದಾನಂದ ಶಾಂತಿ ಆನೆಕೆರೆ ಕಾರ್ಕಳ ಅವರಿಗೆ ಗುರುವಂದನೆ ಸಲ್ಲಿಸಲಾಯಿತು. ಕಾರ್ಕಳ ಬಿಲ್ಲವ ಸಂಘದ ಅಧ್ಯಕ್ಷ ಡಿ.ಆರ್. ರಾಜು, ಮೂಡುಬಿದಿರೆ ಬಿಲ್ಲವ ಸಂಘದ ಅಧ್ಯಕ್ಷ ಪಿ.ಕೆ. ರಾಜು ಪೂಜಾರಿಅವರು ವೇದಿಕೆಯಲ್ಲಿ ಉಪಸ್ಥಿತರಿದ್ದರು ವಿವಿಧ ತಾಲೂಕುಗಳ ಸುಮಾರು ೧೫೦ ಮಂದಿ ವೈದಿಕ ಶಾಂತಿ ಅವರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.
ಕೇಶವ ಶಾಂತಿ ನಾಟಿ ಸ್ವಾಗತಿಸಿದರು. ರಾಜೇಶ ಶಾಂತಿ ಸಂಕೇಶ ಪ್ರಾರ್ಥಿಸಿದರು. ಹರೀಶ್ ಶಾಂತಿ ಪುತ್ತೂರು ಕಾರ್ಯಕ್ರಮ ನಿರೂಪಿಸಿದರು.







