Sunday, October 22, 2023

ಶ್ರೀರಾಮ ಕಾಲೇಜಿನಲ್ಲಿ ಪತ್ರಕರ್ತರೊಂದಿಗೆ ರಕ್ಷಾಬಂಧನ

Must read

ಬಂಟ್ವಾಳ: ಪ್ರಪಂಚದ ಅತೀದೊಡ್ಡ ಪ್ರಜಾಪ್ರಭುತ್ವ ರಾಷ್ಟ್ರವಾದ ಭಾರತದಲ್ಲಿ ಪತ್ರಿಕೆ ಹಾಗೂ ಮಾಧ್ಯಮ ವರ್ಗದವರಿಗೆ ಬಹುದೊಡ್ಡ ಸ್ಥಾನವಿದೆ. ಅವರೊಂದಿಗೆ ಆಚರಿಸುತ್ತಿರುವ ಈ ರಕ್ಷಾಬಂಧನವು ಬಹುಮಹತ್ವವನ್ನು ಪಡೆದಿದೆ. ರಕ್ಷೆಯ ಹಿಂದಿರುವುದು ಸಂಘಟನೆಯ ಭಾವನೆಯೇ ಹೊರತು ಮತ್ತೇನೂ ಅಲ್ಲ ಎಂದು ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ ಪುತ್ತೂರು ವಿವೇಕಾನಂದ ವಿದ್ಯಾವರ್ಧಕ ಸಂಘದ ಅಧ್ಯಕ್ಷ ಡಾ| ಪ್ರಭಾಕರ ಭಟ್ ಕಲ್ಲಡ್ಕ ನುಡಿದರು.

      

ಅವರು ಶ್ರೀರಾಮ ಪದವಿಪೂರ್ವ ಮತ್ತು ಪದವಿ ಕಾಲೇಜಿನಲ್ಲಿ ನಡೆದ ರಕ್ಷಾಬಂಧನ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಪ್ರಸ್ತುತ ರಕ್ಷಾಬಂಧನದ ಆಚರಣೆಯ ಅನಿವಾರ್ಯತೆಯನ್ನು ನೆನಪಿಸಿ ನಮ್ಮ ಧರ್ಮ, ಸಂಸ್ಕೃತಿ, ಆಚರಣೆ, ವಿಜ್ಞಾನ, ಯೋಚನಾ ಶೈಲಿ ಹಾಗೂ ನಡವಳಿಕೆಗಳು ಎಲ್ಲಿ ದಾರಿ ತಪ್ಪಿದೆ ಎಂಬುದನ್ನು ವಿವರಿಸುವುದರ ಜೊತೆಗೆ ರಕ್ಷಾಬಂಧನದ ಮಹತ್ವವನ್ನು ತಿಳಿಸಿದರು.
ಈ ಸಂದರ್ಭದಲ್ಲಿ ಮುಖ್ಯ ಅತಿಥಿಗಳಾಗಿ ಆಗಮಿಸಿದ ಉದಯವಾಣಿ ಹಿರಿಯ ಪತ್ರಕರ್ತ ರಾಜ ಬಂಟ್ವಾಳ ಮಾತನಾಡಿ ಭಾರತೀಯ ಇತಿಹಾಸ ಪುರಾಣದಿಂದಲೇ ರಕ್ಷೆಯು ಮಹತ್ತ್ವವನ್ನು ಪಡೆದಿದ್ದು, ಇದು ಬಾಂಧವ್ಯವನ್ನು ಜೋಡಿಸುವುದರೊಂದಿಗೆ ಜೀವದಾನದಂತಹ ಕೊಡುಗೆಯನ್ನು ನೀಡುವ ಶಕ್ತಿ ರಕ್ಷೆಗಿದೆ ಎಂದರು. ವಿಶ್ವವಾಣಿ ಪತ್ರಕರ್ತ ಜಿತೇಂದ್ರ ಕುಂದೇಶ್ವರ ಮಾತನಾಡಿ ಈ ರಕ್ಷಾಬಂಧನದಿಂದ ಯುವ ಶಕ್ತಿಗಳಲ್ಲಿ ಸನ್ನಡತೆ, ಸನ್ಮಾರ್ಗವನ್ನು ಮೂಡಿಸುವುದು ಮತ್ತು ಅಖಂಡ ಭಾರತದ ಪರವಾಗಿ ಚಿಂತಿಸುವ ಕಾರ್ಯವನ್ನು ಮಾಡುವುದು ಎಂದರು. ಬಂಟ್ವಾಳ ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಹರೀಶ ಮಾಂಬಾಡಿ ಮಾತನಾಡಿ ರಕ್ಷೆಯು ಪರಸ್ಪರರಿಗೆ ರಕ್ಷಣೆಯನ್ನು ಮತ್ತು ಅಭಯವನ್ನು ನೀಡುವುದು. ದೇಶದ ಒಳಗಿನ ಮತ್ತು ಹೊರಗಿನ ಶತ್ರುಗಳ ಎದುರಿಸುವ ಶಕ್ತಿ ರಕ್ಷಾಬಂಧನದಿಂದ ಆಗಲಿ ಎಂದರು.


ಹಿರಿಯರಿಂದ ಆರತಿ ಬೆಳಗಿ ತಿಲಕ ಇಟ್ಟು, ಅಕ್ಷತೆ ಹಾಕಿ ಶಾಲು ಹೊದಿಸಿ ಪತ್ರಕರ್ತ ಅತಿಥಿಗಳನ್ನು ಗೌರವಿಸಲಾಯಿತು. ವಿದ್ಯಾರ್ಥಿ ಸಂಘದ ಪ್ರತಿನಿಧಿಗಳು ಪತ್ರಕರ್ತ ಬಂಧುಗಳಿಗೆ ರಕ್ಷೆ ಕಟ್ಟಿ ಸಿಹಿ ಹಂಚಿದರು. ಈ ಸಂಧರ್ಭದಲ್ಲಿ ಕಾಲೇಜಿನ 1000 ವಿದ್ಯಾರ್ಥಿಗಳು ಮತ್ತು ಉಪನ್ಯಾಸಕ ವೃಂದ ಪರಸ್ಪರ ರಕ್ಷೆಯನ್ನು ಕಟ್ಟಿ ಸಿಹಿ ತಿನ್ನಿಸಿ ಶುಭಾಶಯ ಕೋರಿದರು.
ವೇದಿಕೆಯಲ್ಲಿ ಹೊಸದಿಗಂತದ ಸ್ಥಾನೀಯ ಸಂಪಾದಕ ಪ್ರಕಾಶ್ ಇಳಂತಿಲ, ಹೊಸದಿಗಂತದ ಹಿರಿಯ ವರದಿಗಾರ ವೆಂಕಟೇಶ ಬಂಟ್ವಾಳ, ಪ್ರಜಾವಾಣಿ ಪತ್ರಕರ್ತ ಮೋಹನ್ ಕೆ. ಶ್ರಿ ಯಾನ್, ವಿಜಯವಾಣಿ ಪತ್ರಕರ್ತ ಸಂದೀಪ್ ಸಾಲ್ಯಾನ್, ನಮ್ಮ ಬಂಟ್ವಾಳ ನ್ಯೂಸ್‌ನ ಚಂದ್ರಶೇಖರ ಕಲ್ಮಲೆ, ಕಹಳೆ ನ್ಯೂಸ್ ಪ್ರಧಾನ ಸಂಪಾದಕ ಶ್ಯಾಮ್‌ಸುದರ್ಶನ ಹೊಸಮೂಲೆ, ಉದಯವಾಣಿ ವರದಿಗಾರ ರತ್ನದೇವ್ ಪೂಂಜಾಲಕಟ್ಟೆ, ವಿಜಯಕರ್ನಾಟಕ ವರದಿಗಾರ ಯಾದವ ಅಗ್ರಬೈಲ್, ಸಂಜೆವಾಣಿ ಪತ್ರಕರ್ತ ಕಿಶೋರ್ ಪೆರಾಜೆ, ರಾಷ್ಟ್ರಸೇವಿಕಾ ಸಮಿತಿಯ ಹೊಯ್ಸಳ ಪ್ರಾಂತ ಕಾರ್ಯಕಾರಿಣಿ ಸದಸ್ಯೆ ಡಾ ಕಮಲಾ ಪ್ರಭಾಕರ ಭಟ್, ಪ.ಪೂರ್ವ ಕಾಲೇಜಿನ ಪ್ರಾಂಶುಪಾಲ ವಸಂತ ಬಲ್ಲಾಳ್ ಹಾಗೂ ಆಡಳಿತ ಮಂಡಳಿ ಸದಸ್ಯರು ಉಪಸ್ಥಿತರಿದ್ದರು.
ಪದವಿ ಕಾಲೇಜಿನ ಪ್ರಾಚಾರ್ಯ ಕೃಷ್ಣಪ್ರಸಾದ ಕಾಯರ್‌ಕಟ್ಟೆ ಪ್ರಸ್ತಾವನೆಗೈದು, ಸ್ವಾಗತಿಸಿ, ವಿದ್ಯಾರ್ಥಿಗಳಾದ ಹರ್ಷಿತಾ ವಂದಿಸಿ, ಸುಭಾಷಿಣಿ ಕಾರ್ಯಕ್ರಮವನ್ನು ನಿರೂಪಿಸಿದರು.

More articles

Latest article