ನಮ್ಮ ಮೇಲೆ ನಮಗೆ ನಂಬಿಕೆಯಿರಬೇಕು, ಹೆಮ್ಮೆಯಿರಬೇಕು, ಗೌರವವಿರಬೇಕು. ಆದರೆ ಹೆಡ್ ವೈಟ್, ಗರ್ವ, ಅಹಂಕಾರ, “ನಾನೇ ಅದನ್ನು ಪ್ರಪಂಚದಲ್ಲಿ ಚೆನ್ನಾಗಿ ಮಾಡುವುದು” ಎಂಬ ಅಹಂಭಾವ ಇರಬಾರದು. ಇಂದಿನ ಯುವ ಜನಾಂಗ, ಮಕ್ಕಳ ಸಾಧನೆ ನೋಡಿದರೆ ಸಾಕು, ನಾವೇನೂ ಇಲ್ಲ ಅನ್ನಿಸಿಬಿಡುತ್ತದೆ! ಆದರೆ ನನಗಿಂತ ಯಾರಿಲ್ಲವೆಂಬ ಅಹಂ, ಅಲ್ಪನಿಗೆ ಐಶ್ವರ್ಯ ಬಂದರೆ ಅರ್ಧ ರಾತ್ರೀಲೂ ಕೊಡೆ ಹಿಡ್ಕೊಂಡು ಹೋಗ್ತಾನೇಂತ ಹಿರಿಯರು ಹೇಳಿದ್ದು!
ಯಾರು ತನ್ನನ್ನು ತಾನು ತಿಳಿದು, ಗುರು- ಹಿರಿಯರಿಗೆ ತಲೆಬಾಗಿ, ಕಿರಿಯರೊಂದಿಗೆ ಪ್ರೀತಿಯಿಂದ ಬದುಕಿ, ತನ್ನನ್ನು ತಾನು ವಿದ್ಯಾರ್ಥಿಯೆಂಬ ದೃಷ್ಠಿಯಿಂದ ಕಲಿಯುತ್ತಾ, ಕಲಿಯಲಿಕ್ಕಿದೆಯೆನುತ ಬದುಕುವನೋ ಅವನೇ ನಿಜವಾದ ಮನುಷ್ಯ ಮತ್ತು ಅಂತಹ ಮನುಜ ತುಂಬಾ ಎತ್ತರಕ್ಕೇರುತ್ತಾನೆ. ಆದರೆ ತಾನ್, ತನ್ನಿಂದಲೇ ಎಂದು ಮೆರೆದಂತಹ ಚಕ್ರವರ್ತಿ ಅಲೆಕ್ಸಾಂಡರ್ ಕೂಡಾ ಸಾಯುವಾಗ ‘ನನ್ನ ಕೈಗಳೆರಡು ಗೋರಿಯ ಮೇಲಿರಲಿ,ಏಕೆಂದರೆ ಇಡೀ ಪ್ರಪಂಚವನ್ನೇ ಗೆದ್ದ ವ್ಯಕ್ತಿ ಖಾಲಿ ಕೈಲಿ ಮೇಲೆ ಹೋಗಿರುವನೆಂಬ ನೀತಿ ಪ್ರಪಂಚಕ್ಕೆ ಗೊತ್ತಾಗ್ಲಿ’ ಎಂದಿದ್ದನಂತೆ!
ಎಷ್ಟೆಷ್ಟೋ ಕಲಿತ ಹಿರಿಯ ಸ್ವಾಮೀಜಿ, ಮುನಿಗಳಿದ್ದರು. ಧರ್ಮವ್ಯಾದನ ಕಥೆ ಮಹಾಭಾರತದಲ್ಲಿದೆ. ನೀವು ಓದಿರಬಹುದು. ಇಡೀ ನಾಲ್ಕು ವೇದಗಳನ್ನೆಲ್ಲ ಬಾಯಿಪಾಠ ಮಾಡಿ ಕಲಿತು ವೇದವಿದ್ಯೆಯ ಪೂರೈಸಿ ‘ಇಡೀ ವಿಶ್ವದಲ್ಲಿ ನಾನೇ ಮಹಾನ್ ಪಂಡಿತ, ನನ್ನ ಕೋಪದಿಂದ ಒಂದು ಪಕ್ಷಿಯನ್ನು ನೋಡಿದರೆ ಸಾಕು, ಅದು ನನ್ನ ತಪಃಶಕ್ತಿಯ ಫಲವಾಗಿ ಸುಟ್ಟು ಬೂದಿಯಾಗಿ ಹೋಗುತ್ತದೆ. ಅಂಥ ಪವರ್ಫುಲ್ ನಾನು, ನಾನೇ ಪ್ರಪಂಚದ ವೇದವಿದ್ಯಾ ಪ್ರವೀಣ’ ಎಂದು ಕೌಶಿಕ ಮುನಿ ಬೀಗುತ್ತಾ, ಬಕ ಪಕ್ಷಿಯೊಂದನ್ನು ತನ್ನ ವೇದ ವಿದ್ಯಾ ಕೌಶಲದಿಂದ ಕೋಪದಿ ಕೆಕ್ಕರಿಸಿ ನೋಡಿ, ಬೂದಿ ಮಾಡಿ ಹೋದ ಕೌಶಿಕನನ್ನು ಒಬ್ಬ ಸಾಮಾನ್ಯ ಗೃಹಿಣಿ ಸೋಲಿಸಿ ಬಿಡುತ್ತಾಳೆ! ಬಿಕ್ಷೆ ಬೇಡಲು ಬಂದ ಕೌಶಿಕನಿಗೆ ತಡವಾದುದಕ್ಕೆ ಕೆಕ್ಕರಿಸಿ ನೋಡಿದ! “ಬೂದಿಯಾಗಲು ನಾನೇನೂ ಬಕ ಪಕ್ಷಿಯಲ್ಲ”ಎಂದಳು. ಆಶ್ಚರ್ಯವಾಯಿತವನಿಗೆ! ನಾನು ಸಾಯಿಸಿದ್ದು ಇವಳಿಗೆ ಹೇಗೆ ಗೊತ್ತಾಯಿತು ಎಂದು. ಅವಳೇ ಮುಂದುವರಿದು ಧರ್ಮದ ಬಗ್ಗೆ ಧರ್ಮವ್ಯಾದನ ಬಳಿಗೆ ಕಳುಹಿಸಿದಳು.
ಕಲಿತು, ತಿಳಿಯಲೇನಿದೆ, ಅವನಲ್ಲಿ ನೋಡೇ ಬಿಡುವ ಎಂದು ಹೋದ ಕೌಶಿಕ ಮುನಿ! ಅದೊಂದು ಮಾಂಸದಂಗಡಿ! ಧರ್ಮವ್ಯಾದ ಮಾಂಸ ಮಾರುವವ, ಆದರೆ ಯಾವ ಪ್ರಾಣಿಯನ್ನೂ ಸಾಯಿಸದ, ಮೋಸ ಮಾಡದ, ಸುಳ್ಳು ಹೇಳದ, ಅತಿಯಾಸೆ ಇರದ, ಪೋಷಕರನ್ನು ನೋಡಿಕೊಳ್ಳುತ್ತಾ ಸರ್ವರನ್ನೂ ಗೌರವಿಸುವ, ದೇವರನ್ನು ನಂಬಿ ಬದುಕುವ ಧರ್ಮ ಅವನದು! ಕೌಶಿಕನಿಗೆ ಅದನ್ನು ಕೇಳಿ ನಾಚಿಕೆಯಾಗುತ್ತದೆ! ವಯಸ್ಸಾದ ಪೋಷಕರನ್ನು ಕೌಶಿಕ ನೋಡದೆ ತಾನೇ ತಪಸ್ಸನ್ನಾಚರಿಸುತ್ತಿದ್ದ. ಅಂದಿನಿಂದ ತನ್ನ ಗರ್ವ ಮರೆತು ಸಕಲರಿಗೆ ಒಳಿತಾಗುವ ಕಾರ್ಯ ಮಾಡುತ್ತಾ ಒಳ್ಳೆಯವನಾಗಿ ಬಾಳುತ್ತಾನೆ.
ಇದೊಂದು ಕತೆಯಾದರೂ ಅದರಿಂದ ನಾವು ಪ್ರತಿಯೊಬ್ಬರೂ ಕಲಿಯುವುದು ಬಹಳವಿದೆ ಅನ್ನಿಸುತ್ತದೆ ಅಲ್ಲವೇ?ನೀವೇನಂತೀರಿ?

 

@ಪ್ರೇಮ್@

LEAVE A REPLY

 Click this button or press Ctrl+G to toggle between Kannada and English

Please enter your comment!
Please enter your name here