


ಬಂಟ್ವಾಳ: ಮಳೆ, ಗಾಳಿ, ನೆರೆಯ ಪ್ರಾಕೃತಿಕ ವಿಕೋಪ ದ ಕಾರಣದಿಂದ ಆಗಿರುವ ಸಮಸ್ಯೆಯಿಂದ ಯಾರೂ ಎದೆಗುಂದಬೇಕಾಗಿಲ್ಲ, ಸರ್ಕಾರವೇ ನಿಮ್ಮ ಜೊತೆಯಲ್ಲಿದ್ದು ಅಗತ್ಯ ನೆರವು ನೀಡಲಿದೆ. ಪರಿಹಾರಕಾರ್ಯಗಳಿಗರ ಸರ್ಕಾರದಲ್ಲಿ ಅನುದಾನದ ಕೊರತೆ ಇಲ್ಲ ಎಂದು ವಿಧಾನ ಪರಿಷತ್ ಸದಸ್ಯ ಕೋಟ ಶ್ರೀನಿವಾಸ ಪೂಜಾರಿ ಹೇಳಿದ್ದಾರೆ.
ಬಂಟ್ವಾಳ ತಾಲೂಕಿನ ವಿವಿಧ ನೆರೆ ಹಾಗೂ ಮಳೆಹಾನಿ ಪ್ರದೇಶಗಳಿಗೆ ಭೇಟಿ ನೀಡಿದ ಬಳಿಕ, ಶಾಸಕರ ಕಛೇರಿಯಲ್ಲಿ ಕರೆದ ಪತ್ರಿಕಾ ಗೋಷ್ಠಿಯಲ್ಲಿ ಮಾತನಾಡಿದರು.
ಜಿಲ್ಲೆಯ ಎಲ್ಲಾ ಶಾಸಕರೂ ತಮ್ಮ ತಮ್ಮ ಕ್ಷೇತ್ರ ಗಳಲ್ಲಿ ಅಗತ್ಯ ಪರಿಹಾರ ಕ್ರಮಕೈಗೊಂಡಿದ್ದಾರೆ. ಜಿಲ್ಲಾಧಿಕಾರಿಯವರ ಮಾರ್ಗದರ್ಶನ ದಲ್ಲಿ ಎಲ್ಲಾ ಇಲಾಖೆಗಳ ಅಧಿಕಾರಿಗಳೂ ರಾತ್ರಿ ಹಗಲು ಶ್ರಮವಹಿಸುತ್ತಿದ್ದು, ಸೂಕ್ತರಕ್ಷಣಾ ಕಾರ್ಯ ನಡೆಸಿದ್ದಾರೆ ಎಂದ ಅವರು, ಸಂತ್ರಸ್ತರಿಗೆ ಸ್ಥಳದಲ್ಲೇ ಅಗತ್ಯ ನೆರವು ಒದಗಿಸುವ ಕಾರ್ಯ ಭರದಿಂದ ನಡೆಯುತ್ತಿದೆ ಎಂದರು. ಜಿಲ್ಲೆಯಲ್ಲಿ ಸುಮಾರು 543 ಮನೆಗಳಿಗೆ ಹಾನಿಯಾಗಿದ್ದು, ಬಂಟ್ವಾಳ, ಬೆಳ್ತಂಗಡಿ ಹಾಗೂ ಸುಳ್ಯದಲ್ಲಿ ಗರಿಷ್ಠ ಹಾನಿ ವರದಿಯಾಗಿದೆ ಎಂದ ಅವರು, ಅಪಾರ ಕೃಷಿ ಹಾಗೂ ಜಿಲ್ಲೆಯ ಹೆದ್ದಾರಿ, ಜಿ.ಪಂ. ಹಾಗೂ ಗ್ರಾಮಗಳ ರಸ್ತೆಗಳಿಗೆ ಹಾನಿಯಾಗಿದೆ ಎಂದರು.
ಕೇಂದ್ರ ಸರ್ಕಾರಕ್ಕೆ ರಾಜ್ಯದಿಂದ 3000 ಕೋಟಿಮಳೆಹಾನಿ ಪರಿಹಾರಕ್ಕೆ ಮನವಿ ಮಾಡಲಾಗಿದ್ದು, ಶೀಘ್ರ ಬಿಡುಗಡೆಯಾಗುವ ನಿರೀಕ್ಷೆ ಇರಿಸಲಾಗಿದೆ ಎಂದರು.
ಬಂಟ್ವಾಳ ಶಾಸಕ ರಾಜೇಶ್ ನಾಯ್ಕ್ ಮಾತನಾಡಿ, ತಾಲೂಕಿನಲ್ಲಿ ಸಂತ್ರಸ್ತರಿಗೆ ಅಗತ್ಯ ನೆರವು ಒದಗಿಸಲು ಎಲ್ಲಾ ಕ್ರಮ ಕೈಗೊಳ್ಳಲಾಗಿದೆ ಎಂದರು. ಪ್ರಮುಖರಾದ ದೇವದಾಸ್ ಶೆಟ್ಟಿ, ಪ್ರಭಾಕರ ಪ್ರಭು ಮತ್ತಿತರರಿದ್ದರು.





