ಬಂಟ್ವಾಳ, ಆ. ೯: ಶುಕ್ರವಾರವೂ ಬೆಳಿಗ್ಗೆಯೂ ಗಾಳಿ, ಮಳೆ ಮುಂದುವರಿದ ಕಾರಣ ನೇತ್ರಾವತಿ ನೀರಿನ ಮಟ್ಟ ಹೆಚ್ಚಾಗಿದೆ. ಅಪಾಯದ ಮಟ್ಟ ೮.೫ ಆಗಿದ್ದು, ಇಂದು ಬೆಳಿಗ್ಗೆ ೧೦ರ ವೇಳೆಗೆ ನೇತ್ರಾವತಿ ನದಿ ನೀರಿನ ಮಟ್ಟ ೮.೭ ಮೀಟರ್ ಇತ್ತು. ಮಧ್ಯಾಹ್ನ ೯.೭ ಮೀ. ಹರಿಯುತ್ತಿದ್ದ, ಇದೀಗ ಭಾರೀ ಮಳೆಯಾಗುತ್ತಿದ್ದು, ರಾತ್ರಿ ಹೊತ್ತಿನಲ್ಲಿ ೧೦.೬ಮೀ. ಅಪಾಯಮಟ್ಟದಲ್ಲಿ ಹರಿಯುತ್ತಿದೆ. ಶಂಭೂರು ಎಎಂಆರ್‌ನ ೨೬ ಗೇಟುಗಳಲ್ಲಿ ನೇತ್ರಾವತಿ ನದಿ ನೀರು ಹೊರಬಿಡಲಾಗಿದ್ದು, ತುಂಬೆಯಲ್ಲಿ ೮.೭ ಮೀ.ಎತ್ತರದಲ್ಲಿ ನೀರು ಸಂಗ್ರಹಗೊಂಡಿದೆ.

ಕಳೆದ ೬ ದಿನಗಳಿಂದ ಸುರಿಯುತ್ತಿರುವ ಮಳೆಯಿಂದ ಶುಕ್ರವಾರವೂ ನೇತ್ರಾವತಿ ನದಿಯು ಅಪಾಯದ ಮಟ್ಟವನ್ನು ಮೀರಿದ ಪರಿಣಾಮ ಕೃತಕ ನೆರೆಯಿಂದಾಗಿ ತಾಲೂಕಿನಲ್ಲಿ ಒಟ್ಟು ೫೦ಕ್ಕೂ ಮನೆಗಳು ಜಲಾವೃತಗೊಂಡಿದ್ದು, ಸಮೀಪದ ಉಳಿದ ಮನೆಗಳು ಜಲಾವೃತಗೊಳ್ಳುವ ಭೀತಿಯಿದೆ. ಬೆಳ್ತಂಗಡಿ ಸಹಿತ ಘಟ್ಟಪ್ರದೇಶಗಳಲ್ಲಿ ಇಂದು ಭಾರೀ ಮಳೆಯಾದ ಪರಿಣಾಮ ತಾಲೂಕಿನ ಕೆಲ ಪ್ರದೇಶ ಹಾಗೂ ನೆರೆ ಪೀಡಿತ ಪ್ರದೇಶಗಳಲ್ಲಿ ನೀರು ತುಂಬಿರುವ ದೃಶ್ಯ ಕಂಡುಬಂತು.
ಅಜಿಲಮೊಗರು, ಬರಿಮಾರು ಮಸೀದಿಯು ಮುಳುಗಡೆಯಾಗಿದೆ. ನಾವೂರು, ಅಜಿಲಮೊಗರು, ಬಂಟ್ವಾಳ ಸಮೀಪದ ಜಕ್ರಿಬೆಟ್ಟು, ಕಡೇಶಿವಲಾಯ, ಬಡ್ಡಕಟ್ಟೆ, ವಿ.ಪಿ.ರಸ್ತೆ, ಕಂಚಿಕಾರಪೇಟೆ, ಬಸ್ತಿಪಡ್ಪು, ಭಂಡಾರಿಬೆಟ್ಟು, ನಂದರಬೆಟ್ಟು, ತಲಪಾಡಿ, ಬ್ರಹ್ಮರಕೊಟ್ಲು ಹಾಗೂ ಬರಿಮಾರು-ಬುಡೋಳಿ ಸಂಪರ್ಕ ರಸ್ತೆ ಮೊದಲಾದೆಡೆ ನೀರಿನಿಂದ ಮುಳುಗಡೆಯಾಗಿದೆ. ಹಲವು ಮನೆಗಳು, ತೋಟ, ಕೃಷಿ ಭೂಮಿಗೆ ನೆರೆ ನೀರು ನುಗ್ಗಿ ಅಪಾರ ನಷ್ಟ ಸಂಭವಿಸಿರುವ ಬಗ್ಗೆ ವರದಿಯಾಗಿದೆ.
೩೦೦ಕ್ಕೂ ಹೆಚ್ಚು ಮಂದಿ ಅತಂತ್ರ:
ಮುಳುಗಡೆ ಪ್ರದೇಶದ ಸುಮಾರು ೩೦೦ಕ್ಕೂ ಹೆಚ್ಚು ಮಂದಿ ಸಂತ್ರಸ್ಥರನ್ನು ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರಿಸಲಾಗಿದೆ. ಬಂಟ್ವಾಳ ಪ್ರವಾಸಿಮಂದಿರ, ಪಾಣೆಮಂಗಳೂರು ಪ್ರೌಢಶಾಲೆಯಲ್ಲಿ ಗಂಜಿ ಕೇಂದ್ರವನ್ನು ತೆರೆಯಲಾಗಿದೆ. ಕೆಲವರು ಗಂಜಿ ಕೇಂದ್ರದಲ್ಲಿ ಉಳಿದುಕೊಂಡರೆ, ಮತ್ತೆ ಕೆಲ ಸಂತ್ರಸ್ಥರು ತಮ್ಮ ಸಂಬಂಧಿಕರ ಮನೆಗೆ ತೆರಳಿದ್ದಾರೆ ಎಂದು ತಹಶೀಲ್ದಾರ್ ರಶ್ಮಿ ಅವರು ತಿಳಿಸಿದ್ದಾರೆ.
ಧ್ವನಿವರ್ದಕ ಮೂಲಕ ಎಚ್ಚರಿಕೆ ಸಂದೇಶ:
ನೇತ್ರಾವತಿ ನದಿಗೆ ಭಾರೀ ಪ್ರಮಾಣದಲ್ಲಿ ನೀರು ಹರಿದು ಬರುತ್ತಿರುವುದರಿಂದ ನದಿ ನೀರು ಅಪಾಯದ ಮಟ್ಟದಲ್ಲಿ ಹರಿಯುತ್ತಿದ್ದು, ನದಿ ತೀರದಲ್ಲಿ ವಾಸಿಸುವವರು ಸುರಕ್ಷಿತ ಸ್ಥಳಗಳಿಗೆ ತೆರಳುವಂತೆ ಹಾಗೂ ಬಂಟ್ವಾಳ ನಗರ ಪ್ರದೇಶ ನೆರೆ ನೀರಿನಿಂದ ಅವರಿಸಿರುವುದರಿಂದ ಎಚ್ಚರಿಕೆಯಿಂದ ಇರುವಂತೆ, ಅಪಾಯದಂಚಿನಲ್ಲಿರುವವರು ಸುರಕ್ಷಿತ ಸ್ಥಳಕ್ಕೆ ತೆರಳುವಂತೆ ಪುರಸಭೆ ವತಿಯಿಂದ ಮೈಕ್ ಮೂಲಕ ಸಮಜೆಯ ಹೊತ್ತಿಗೆ ಎಚ್ಚರಿಸಿದೆ.

 

LEAVE A REPLY

 Click this button or press Ctrl+G to toggle between Kannada and English

Please enter your comment!
Please enter your name here