ಬಂಟ್ವಾಳ: ಜಿಲ್ಲೆಯ ಅತೀ ಸೂಕ್ಷ್ಮ ಪ್ರದೇಶ ಬಂಟ್ವಾಳ ತಾಲೂಕಾದ್ಯಂತ ಮುಂದಿನವಾರ ಆಚರಿಸಲಾಗುವ ಬಕ್ರೀದ್ ಹಬ್ಬದ ಹಿನ್ನೆಲೆಯಲ್ಲಿ ಪೊಲೀಸರು ಕಟ್ಟೆಚ್ಚರ ವಿಧಿಸಿದ್ದಾರೆ‌.
ಬಂಟ್ವಾಳ ಸರ್ಕಲ್ ಇನ್ಸ್ಪೆಕ್ಟರ್ ಟಿ.ಡಿ.ನಾಗರಾಜ್ ಅವರ ಮಾರ್ಗದರ್ಶನದಂತೆ ತಾಲೂಕಿನ ಮೂರು ಠಾಣೆಗಳಲ್ಲೂ ಠಾಣಾಧಿಕಾರಿಗಳು ಶಾಂತಿ ಸಭೆ ಕರೆಯಲಾಗಿದ್ದು, ಕಾನೂನು ಸುವ್ಯವಸ್ಥೆ ಕಾಪಾಡಲು ಮುಂಜಾಗ್ರತಾ ಕ್ರಮ ಜರಗಿಸಿದ್ದಾರೆ.‌ ರೌಡಿ ಶೀಟರ್ ಮತ್ತು ಕ್ರಿಮಿನಲ್ ಹಿನ್ನೆಲೆಯುಳ್ಳ ವ್ಯಕ್ತಿಗಳನ್ನು ಈಗಾಗಲೇ ಠಾಣೆಗೆ ಕರೆಯಿಸಿ ಎಚ್ಚರಿಕೆ ನೀಡಲಾಗಿದೆ.
ಬಕ್ರೀದ್ ಹಬ್ಬದ ಹಿನ್ನೆಲೆಯಾಗಿಸಿಕೊಂಡು ಸಮಾಜ ಘಾತುಕ ವ್ಯಕ್ತಿಗಳು ಅಕ್ರಮವಾಗಿ ದನ ಸಾಗಾಟ ನಡೆಸಲಾಗುತ್ತಿದೆ. ದನ ಮಾಂಸಗಳನ್ನು ಕಾನೂನು ಬಾಹಿರವಾಗಿ ಮಾರಾಟ ಮಾಡುತ್ತಿದೆ ಎಂದು ಹಿಂದೂ ಸಂಘಟಕರು ಆರೋಪಿಸಿದ್ದು, ಈ ಹಿನ್ನೆಲೆಯಲ್ಲೂ ಕಾರ್ಯಾಚರಣೆ ಕೈಗೆತ್ತಿಕೊಂಡಿದ್ದಾರೆ. ಅಲ್ಲದೇ ಆಸುಪಾಸಿನ ಪ್ರದೇಶದಲ್ಲಿ ದನಗಳ ಸಹಿತ ಜಾನುವಾರುಗಳು ಕಳವಾಗುತ್ತಿರುವ ಪ್ರಕರಣ ನಡೆಯುತ್ತಿದ್ದು, ರಾತ್ರಿ ವೇಳೆ ಕರ್ತವ್ಯ ನಿರ್ವಹಿಸುವ ಪೊಲೀಸರು ಕಟ್ಟುನಿಟ್ಟಿನ ಕ್ರಮ ಜರುಗಿಸಬೇಕಾಗಿ ಪೊಲೀಸ್ ಅಧಿಕಾರಿಗಳು ಸೂಚನೆ ನೀಡಿದ್ದಾರೆ.

‌ ಎರಡೂ ಕಡೆಯಿಂದ ವಾಟ್ಸ್ ಅಪ್ ವಾರ್! 
ಅಕ್ರಮವಾಗಿ ಜಾನುವಾರು ಸಾಗಾಟ ಮಾಡುವ ವಾಹನಗಳನ್ನು ತಕ್ಷಣ ತಡೆಹಿಡಿದು, ಮುಂದೇನು ಮಾಡಬೇಕೆಂದು ಸೂಚಿಸಲಾದ ಸಲಹೆ ಹಾಗೂ ಬುದ್ದಿ ಮಾತು ಹೇಳಿರುವ ಹಿಂದೂ ಸಂಘಟನೆಗಳ ಪೋಸ್ಟರ್ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ. ದನ ಸಾಗಾಟಕಾರರಿಗೆ ಹಲ್ಲೆ ನಡೆಸಬೇಡಿ. ಅವರ ವಾಹನವನ್ನು ತಡೆದು ನಿಲ್ಲಿಸಿ ದನಗಳಿಗೆ ನೀಡಲಾದ ಚಿತ್ರಹಿಂಸೆಯನ್ನು ಚಿತ್ರೀಕರಿಸಿ ಎಂದು ಬುದ್ದಿ ಹೇಳಲಾಗಿದೆ.
ಅಕ್ರಮ ದನ ಸಾಗಾಟಕ್ಕೆ ವಿರುದ್ಧವೂ ಮುಸ್ಲಿಂ ಸಮಾಜದಲ್ಲಿ ಜಾಗೃತಿ ಮೂಡಿಸುವ ಕಾರ್ಯ ನಡೆಯುತ್ತಿದ್ದು, ದನಗಳ ಅಕ್ರಮ ಸಾಗಾಟ ಮತ್ತು ಕಳ್ಳತನಕ್ಕೆ ಬೆಂಬಲಿಸಬೇಡಿ ಎಂದು ಮುಸ್ಲಿಂ ಸಂಘಟಕರು ಎಚ್ಚರಿಕೆ ನೀಡಿದ್ದಾರೆ. ಈ ನಡುವೆಯೂ ಸಮಾಜದಲ್ಲಿ ಅಶಾಂತಿ ಉಂಟು ಮಾಡುವ ಉದ್ವೇಗಕಾರಿ ಸಂದೇಶಗಳು ಹರಿದಾಡುತ್ತಿದ್ದು, ವೈರಲ್ ಆಗುತ್ತಿದೆ.

ವಾಟ್ಸ್ ಅಪ್ ಮೇಲೂ ಕಣ್ಣು!
ದನ ಕಳ್ಳತನ, ಸಾಗಾಣಿಕೆ ಹಾಗೂ ಮಾರಾಟ ಇತ್ಯಾದಿ ಘಟನೆಗಳನ್ನು ಆಧರಿಸಿಕೊಂಡು ವಾಟ್ಸ್ ಅಪ್, ಫೇಸ್ ಬುಕ್ ಮತ್ತಿತರ ಸಾಮಾಜಿಕ ಜಾಲತಾಣದಲ್ಲಿ ಉದ್ವೇಗಕಾರಿ ಮೆಸೇಜ್ ಹರಿದಾಡುತ್ತಿದ್ದು, ಅಶಾಂತಿ ಉಂಟಾಗಲು ಕಾರಣವಾಗುತ್ತದೆ. ಈ ಹಿನ್ನೆಲೆಯಲ್ಲಿ ಮುಂಜಾಗ್ರತಾ ಕ್ರಮ ಜರಿಸಲಾಗುವುದಾಗಿ ತಿಳಿಸಿರುವ ಸರ್ಕಲ್ ಇನ್ಸ್ಪೆಕ್ಟರ್ ಟಿ.ಡಿ.ನಾಗರಾಜ್ ಅವರು, ಸಮಾಜದಲ್ಲಿ ಅಶಾಂತಿ ಉಂಟು ಮಾಡುವ ಸಮಾಜ ಘಾತುಕರ ವಿರುದ್ಧ ಕಠಿಣ ಕ್ರಮ ಜರಗಿಸಲಾಗುವುದಾಗಿ ಪ್ರತಿಕ್ರಿಯಿಸಿದ್ದಾರೆ.

LEAVE A REPLY

 Click this button or press Ctrl+G to toggle between Kannada and English

Please enter your comment!
Please enter your name here