

ನವದೆಹಲಿ: ಮಾಜಿ ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್((14 ಫೆಬ್ರವರಿ 1953, 6 ಆಗಸ್ಟ್ 2019)) ಅವರು ಹೃದಯಾಘಾತದಿಂದ ನಿಧರಾಗಿದ್ದಾರೆ. ವಯೋಸಹಜ ಅನಾರೋಗ್ಯದಿಂದ ಬಳಲುತ್ತಿದ್ದ ಸುಷ್ಮಾ ಸ್ವರಾಜ್ ಅವರಿಗೆ ದೆಹಲಿಯ ಏಮ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿತ್ತು.
67 ವರ್ಷ ವಯಸ್ಸಿನ ಸುಷ್ಮಾ ಸ್ವರಾಜ್ ಅವರು ದೆಹಲಿ ಮುಖ್ಯಮಂತ್ರಿಯಾಗಿಯೂ ಸೇವೆ ಸಲ್ಲಿಸಿದ್ದರು. ಅವರು ಪತಿ ಮತ್ತು ಓರ್ವ ಪುತ್ರಿ, ಅಪಾರ ಬಂಧು-ಬಳಗ, ಅಭಿಮಾನಿ ವೃಂದವನ್ನು ಅಗಲಿದ್ದಾರೆ.
ಕೇಂದ್ರ ಸಚಿವೆಯಾಗಿ, ಪ್ರತಿಪಕ್ಷನಾಯಕಿಯಾಗಿ, ಸಂಸದೀಯ ಪಟುವಾಗಿ ಅವರ ಸೇವೆಯನ್ನು ದೇಶ ಸದಾ ಸ್ಮರಿಸುತ್ತದೆ.
ವಿದೇಶಗಳಲ್ಲಿ ಯಾವುದೋ ಮೂಲೆಯಲ್ಲಿ ಭಾರತೀಯರು ಸಮಸ್ಯೆಗೆ ಈಡಾಗಿದ್ದಾಗ ಹಗಲು ರಾತ್ರಿಯೆನ್ನದೆ ಸುಷ್ಮಾ ಸ್ವರಾಜ್ ಸ್ಪಂದಿಸುತ್ತಿದ್ದರು.
ಭಾರತದ ಇಲ್ಲಿಯವರೆಗೆ ಇಂತಹ ವಿದೇಶಾಂಗ ಸಚಿವರನ್ನೇ ನೋಡಿರಲಿಲ್ಲ. ವಿದೇಶಾಂಗ ಇಲಾಖೆಯ ಸಾಕಷ್ಟು ವಿಚಾರಗಳನ್ನು ಪ್ರಧಾನಿ ಕಚೇರಿ ನೇರವಾಗಿ ನಿಭಾಯಿಸುತ್ತಿದ್ದರೂ ಇಂತಹ ಸೂಕ್ಷ್ಮ ಹಾಗೂ ಭಾವನಾತ್ಮಕ ವಿಚಾರಗಳಲ್ಲಿ ಸುಷ್ಮಾ ಜನ ಮೆಚ್ಚುಗೆ ಪಡೆದಿದ್ದರು.
ಹರ್ಯಾಣದ ಅಂಬಾಲಾ ಕಾಂಟೋನ್ಮೆಂಟ್ ನಲ್ಲಿ ಹರ್ದೇವ್ ಶರ್ಮಾ ಮತ್ತು ಶ್ರೀಮತಿ ಲಕ್ಷ್ಮಿ ದೇವಿ ಅವರ ಮಗಳಾಗಿ ಜನಿಸಿದ ಸುಷ್ಮಾ ಸ್ವರಾಜ್, ಸುಪ್ರೀಂ ಕೋರ್ಟ್ ವಕೀಲೆಯಾಗಿ ವೃತ್ತಿ ಬದುಕು ಆರಂಭಿಸಿದವರು. ನಂತರ ಎಬಿವಿಪಿ ಮೂಲಕ ಸಾಮಾಜಿಕ ಮತ್ತು ರಾಜಕೀಯ ಬದುಕಿಗೆ 1970 ರಲ್ಲಿ ಪದಾರ್ಪಣೆ ಮಾಡಿದರು. ಜಾರ್ಜ್ ಫರ್ನಾಂಡೀಸ್, ಜಯಪ್ರಕಾಶ್ ನಾರಾಯಣ್, ಎಲ್.ಕೆ.ಅಡ್ವಾಣಿ, ಅಟಲ್ ಬಿಹಾರಿ ವಾಜಪೇಯಿ ಮುಂತಾದ ನಾಯಕರೊಂದಿಗೆ ಸುಷ್ಮಾ ಸ್ವರಾಜ್ ಅವರು ಆಪ್ತ ಬಾಂಧವ್ಯ ಹೊಂದಿದ್ದರು.
ದೆಹಲಿಯ ಏಮ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಅವರು ಹೃದಯಾಘಾತದಿಂದ ನಿಧನರಾಗಿದ್ದಾರೆ. ಬಿಜೆಪಿ ಮುಖಂಡರಾದ ಡಾ.ಹರ್ಷವರ್ಧನ್, ನಿತಿನ್ ಗಡ್ಕರಿ ಮುಂತಾದವರು ಏಮ್ಸ್ ಆಸ್ಪತ್ರೆಗೆ ತೆರಳಿದ್ದು, ಬಿಜೆಪಿಯ ಇತರ ಗಣ್ಯರು ಆಸ್ಪತ್ರೆಯತ್ತ ಧಾವಿಸುತ್ತಿದ್ದಾರೆ.
ಅನಾರೋಗ್ಯದ ಕಾರಣ 2019 ರ ಲೋಕಸಭೆ ಚುನಾವಣೆಗೂ ಸುಷ್ಮಾ ಸ್ವರಾಜ್ ಅವರು ಸ್ಪರ್ಧಿಸಿರಲಿಲ್ಲ. ಜಮ್ಮು ಮತ್ತು ಕಾಶ್ಮೀರಕ್ಕೆ ನೀಡಲಾಗಿದ್ದ ವಿಶೇಷ ಸ್ಥಾನಮಾನವನ್ನು ರದ್ದುಗೊಳಿಸಿದ ಸರ್ಕಾರದ ಕ್ರಮವನ್ನು ಶ್ಲಾಘಿಸಿ ಮಾಡಿದ್ದ ಟ್ವೀತ್ ಸುಷ್ಮಾ ಸ್ವರಾಜ್ ಅವರ ಕೊನೆಯ ಟ್ವೀಟ್. ಈ ಟ್ವೀತ್ ನಲ್ಲಿ ಅವರು ಈ ದಿನಕ್ಕಾಗಿ ನಾನು ನನ್ನ ಜೀವಮಾನದುದ್ದಕ್ಕೂ ಕಾಯುತ್ತಿದ್ದೆ ಎಂದು ಮೋದಿ ಅವರಿಗೆ ಧನ್ಯವಾದ ಅರ್ಪಿಸಿದ್ದರು. ದುರದೃಷ್ಟವಶಾತ್ ಅದೇ ಅವರ ಕೊನೆಯ ಟ್ವೀಟ್ ಆಗಿದೆ.








