ವಿಟ್ಲ: ಸೋಮವಾರದಿಂದ ಸುರಿಯುತ್ತಿರುವ ಕುಂಭದ್ರೋಣ ಮಳೆಗೆ ವಿಟ್ಲ ವ್ಯಾಪ್ತಿಯ ಹಲವಾರು ಭಾಗಗಳಲ್ಲಿ ರಸ್ತೆ, ಕೃಷಿ ತೋಟಗಳು ಜಲಾವೃತಗೊಂಡಿದ್ದು, ಕೆಲವು ಕಡೆ ಮನೆಗಳ ಸಮೀಪವೇ ನೀರು ತುಂಬಿಕೊಂಡಿದ್ದು, ಆತಂಕ ಸೃಷ್ಟಿ ಮಾಡಿದೆ. ಹಲವಾರು ಕಿಂಡಿಅಣೆಕಟ್ಟು ಮುಳುಗಡೆಯಾಗಿವೆ. ರಸ್ತೆಗೆ ನೆರೆ ನೀರು ನುಗ್ಗಿದ್ದರಿಂದ ಜಲಾವೃತಗೊಂಡಿದ್ದು, ವಾಹನ ಸಂಚಾರ ಸ್ಥಗಿತಗೊಂಡಿತ್ತು. ಇನ್ನೂ ಕೆಲವೆಡೆ ಗುಡ್ಡ, ಧರೆ ರಸ್ತೆಗೆ ಕುಸಿದು ಬಿದ್ದು, ವಾಹನ ಸಂಚಾರ ಅಸ್ತವ್ಯಸ್ತಗೊಂಡಿದೆ.


ವಿಟ್ಲ ಕಸಬಾ ಗ್ರಾಮದ ಒಕ್ಕೆತ್ತೂರು ಸುರಂಬಡ್ಕ ಕಿಂಡಿ ಅಣೆಕಟ್ಟು ಸಂಪೂರ್ಣವಾಗಿ ಮುಳುಗಡೆಯಾಗಿದೆ. ಇದರಿಂದ ಸಾರ್ವಜನಿಕರು ಮುಂದಕ್ಕೆ ಹೋಗದೇ ಹೊಳೆಯ ಬದಿಯ ಮನೆಗಳಲ್ಲಿ ಹಾಗೂ ಹೊಳೆಯ ಬದಿಭಾಗದಲ್ಲಿಯೇ ನಿಲ್ಲುವಂತಾಗಿದೆ.
ಈ ಮಧ್ಯೆ ಶಾಲೆಗಳಿಗೆ ರಜೆ ಘೋಷಣೆ ಮಾಡಿದ ಬಗ್ಗೆ ಮುನ್ಸೂಚನೆ ತಿಳಿಯದ ಹಲವು ವಿದ್ಯಾರ್ಥಿಗಳು ತೊಂದರೆ ಅನುಭವಿಸಿದರು. ಮನೆಯ ಅಂಗಳಕ್ಕೆ ಹಾಗೂ ತೋಟಗಳಿಗೆ ನೀರು ನುಗ್ಗಿದೆ. ಮರದ ದಿಮ್ಮಿ ಹಾಗೂ ಇನ್ನಿತರ ವಸ್ತುಗಳು ಸೇತುವೆಯಲ್ಲಿ ಸಿಲುಕಿ ಹಾಕಲ್ಪಟ್ಟ ಕಾರಣ ಕಿಂಡಿ ಅಣೆಕಟ್ಟೆಯ ಬದಿಯ ರಾಡ್ ಮುರಿತಕ್ಕೊಳಗಾಗಿದೆ. ಇದು ಅಪಾಯವನ್ನು ಆಹ್ವಾನಿಸುತ್ತಿದೆ. ಅಣೆಕಟ್ಟೆ ಮೇಲೆ ಬಾಕಿಯಾಗಿರುವ ಮರದ ತುಂಡು, ಕಸಗಳನ್ನು ಒಕ್ಕೆತ್ತೂರು ಹಾಗೂ ಮಂಗಳಪದವು ಯುವಕರು ತೆರವುಗೊಳಿಸಿದರು. ಐದು ವರ್ಷಗಳ ಹಿಂದೆ ಒಂದು ಕೋಟಿ ಅನುದಾನದಲ್ಲಿ ಈ ಕಿಂಡಿ ಅಣೆಕಟ್ಟನ್ನು ನಿರ್ಮಿಸಲಾಗಿತ್ತು. ಸ್ಥಳಕ್ಕೆ ವಿಟ್ಲ ಪಟ್ಟಣ ಪಂಚಾಯಿತಿ ಅಧ್ಯಕ್ಷೆ ದಮಯಂತಿ, ಎಂಜಿನಿಯರ್ ಶ್ರೀಧರ್, ಒಕ್ಕೆತ್ತೂರು ಶಾಲಾ ಎಸ್‌ಡಿಎಂಸಿ ಅಧ್ಯಕ್ಷ ಸಿ.ಎಚ್ ಮಹಮ್ಮದ್ ಹಾರೀಸ್, ವಿಟ್ಲ ಗ್ರಾಮ ಕರಣಿಕ ಪ್ರಕಾಶ್ ಭೇಟಿ ನೀಡಿ ಪರಿಶೀಲಿಸಿದ್ದಾರೆ.
ಕೊಳ್ನಾಡು ಗ್ರಾಮದ ಕುಡ್ತಮುಗೇರು ಹೊಳೆ ತುಂಬಿ ಹರಿದ ಪರಿಣಾಮ ವಿಟ್ಲ-ಸಾಲೆತ್ತೂರು ರಸ್ತೆಯ ಕುಡ್ತಮುಗೇರು ರಸ್ತೆ ಜಲಾವೃತಗೊಂಡಿದೆ. ಇದರಿಂದ ಸುಮಾರು ತಾಸುಗಳವರೆಗೆ ರಸ್ತೆ ಸಂಚಾರದಲ್ಲಿ ವ್ಯತ್ಯಯ ಉಂಟಾಗಿತ್ತು. ಈ ಭಾಗ ತಗ್ಗು ಪ್ರದೇಶವಾಗಿದ್ದರಿಂದ ಪ್ರತಿವರ್ಷವೂ ಇದೇ ಪರಿಸ್ಥಿತಿ ಎದುರಾಗುತ್ತಿದೆ. ಕೊಳ್ನಾಡು ಗ್ರಾಮದ ಕರೈ-ಕಾಡುಮಠದಲ್ಲಿ ರಸ್ತೆಗೆ ಗುಡ್ಡ ಕುಸಿದು ಬಿದ್ದ ಕಾರಣ ರಸ್ತೆ ಸಂಚಾರ ಬಂದ್ ಆಗಿತ್ತು. ಸ್ಥಳೀಯ ಎಸ್‌ಡಿಪಿಐ ಕಾರ್ಯಕರ್ತರು, ಸ್ಥಳೀಯರು ಕಾರ್ಯಾಚರಣೆ ನಡೆಸಿದ್ದಾರೆ. ಕುಡ್ತಮುಗೇರು-ಕುಳಾಲು ರಸ್ತೆಯ ಕುದ್ರಿಯಾ ಎಂಬಲ್ಲಿ ಗುಡ್ಡ ಕುಸಿದು ರಸ್ತೆ ಬಿದ್ದಿದೆ. ಇದರಿಂದ ರಸ್ತೆಯಲ್ಲಿ ವಾಹನ ಸಂಚಾರ ಸ್ಥಗಿತಗೊಂಡಿದೆ. ಕೊಳ್ನಾಡು ಗ್ರಾಮ ಪಂಚಾಯಿತಿ ಅಧ್ಯಕ್ಷ ಸುಭಾಶ್ಚಂದ್ರ ಶೆಟ್ಟಿ ಕುಳಾಲು ಅವರು ಸ್ಥಳಕ್ಕೆ ಆಗಮಿಸಿ ತಕ್ಷಣವೇ ಕಾರ್ಯಾಚರಣೆಗೆ ಇಲಾಖೆಗೆ ಸೂಚಿಸಿದ್ದಾರೆ. ಅದೇ ರೀತಿ ಪೆರ್ಲದಬೈಲು ಎಂಬಲ್ಲಿ ಗುಡ್ಡ ಕುಸಿದು ವಿದ್ಯುತ್ ಕಂಬಗಳು ವಾಲಿದ ಕಾರಣ ಅಪಾಯ ಆಹ್ವಾನಿಸುತ್ತಿದೆ. ಸ್ಥಳಕ್ಕೆ ಜಿಲ್ಲಾ ಪಂಚಾಯಿತಿ ಸದಸ್ಯ ಎಂ.ಎಸ್ ಮಹಮ್ಮದ್, ಕೊಳ್ನಾಡು ಗ್ರಾಮ ಪಂಚಾಯಿತಿ ಅಧ್ಯಕ್ಷ ಸುಭಾಶ್ಚಂದ್ರ ಶೆಟ್ಟಿ ಕುಳಾಲು, ಸದಸ್ಯರಾದ ಪವಿತ್ರ ಪೂಂಜ, ಜಗದೀಶ ಭೇಟಿ ನೀಡಿ ಪರಿಶೀಲಿಸಿದ್ದಾರೆ. ವಿಟ್ಲ-ಮಂಗಳೂರು ಪ್ರಧಾನ ರಸ್ತೆಯ ಬೊಬ್ಬೆಕೇರಿ ಎಂಬಲ್ಲಿ ಸಮರ್ಪಕ ಚರಂಡಿ ವ್ಯವಸ್ಥೆ ಕಲ್ಪಿಸದ ಕಾರಣ ರಸ್ತೆಯ ಮೇಲೆ ಮಳೆ ನೀರ ಪ್ರವಾಹ ಏರ್ಪಟ್ಟಿತ್ತು. ವಿಟ್ಲ ವ್ಯಾಪ್ತಿಯ ಕೆಲ ಮನೆಗಳ ಅಂಗಳ ಹಾಗೂ ಸಿಟೌಟ್‌ಗಳು ಜಲಾವೃತಗೊಂಡಿವೆ

LEAVE A REPLY

 Click this button or press Ctrl+G to toggle between Kannada and English

Please enter your comment!
Please enter your name here