

ವಿಟ್ಲ: ಸರಕಾರಿ ಅನುದಾನ ಬಳಕೆ ಮಾಡುವುದು ಮಾತ್ರ ಗ್ರಾಮಾಭಿವೃದ್ಧಿಯ ಒಂದು ಭಾಗವಾಗಿರದೇ ಶಿಕ್ಷಣ ನೀಡಿ ಆರೋಗ್ಯವಂತ ಮಾನವ ಸಂಪನ್ಮೂಲ ನಿರ್ಮಾಣ ಮಾಡಿದಾಗ ಮಾತ್ರ ಗ್ರಾಮ ಪಂಚಾಯಿತಿ ವ್ಯವಸ್ಥೆ ಅರ್ಥಪೂರ್ಣವಾಗಿರುತ್ತದೆ. ಈ ನಿಟ್ಟಿನಲ್ಲಿ ಕೊಳ್ನಾಡು ಗ್ರಾಮ ಪಂಚಾಯಿತಿ ವಿಕಲಚೇತನರ ಆರೋಗ್ಯ ತಪಾಸಣೆ ,ಯೋಗ, ಕಣ್ಣಿನ ಚಿಕಿತ್ಸೆ ಹಾಗೂ ಕನ್ನಡಕ ವಿತರಣೆ ಹಾಗೂ ಆರೋಗ್ಯ ತಪಾಸಣಾ ಶಿಬಿರಗಳನ್ನು ಮಾಡುವುದರ ಜೊತೆಗೆ ಕನ್ನಡ ಮಾಧ್ಯಮ ಶಾಲೆಗಳಲ್ಲಿ ಇಂಗ್ಲೀಷ್ ಆರಂಭಿಸಲು ವಿಶೇಷ ಪ್ರೋತ್ಸಾಹ ನೀಡುತ್ತದೆ ಎಂದು ಕೊಳ್ನಾಡು ಗ್ರಾಮ ಪಂಚಾಯಿತಿ ಅಧ್ಯಕ್ಷ ಸುಭಾಶ್ಚಂದ್ರ ಶೆಟ್ಟಿ ಕುಳಾಲು ಹೇಳಿದರು.
ಅವರು ಆಲ್ ಕಾರ್ಗೊ, ಕೊಳ್ನಾಡು ಗ್ರಾಮ ಪಂಚಾಯಿತಿ ,ಜನ ಶಿಕ್ಷಣ ಟ್ರಸ್ಟ್, ಸುಗ್ರಾಮ ವೇದಿಕೆ ಹಾಗೂ ಪ್ರಜ್ಞಾಸಲಹಾ ಕೇಂದ್ರ ಮಂಗಳೂರು ಇವರ ಜಂಟಿ ಆಶ್ರಯದಲ್ಲಿ ನಡೆದ ಉಚಿತ ಆರೋಗ್ಯ ತಪಾಸಣಾ ಶಿಬಿರದ ಉದ್ಫಾಟನಾ ಸಮಾರಂಭದಲ್ಲಿ ಅಧ್ಯಕ್ಷತೆ ವಹಿಸಿ ಮಾತಾಡಿದರು.
ಶಿಬಿರವನ್ನು ಉದ್ಫಾಟಿಸಿದ ಸಾಲೆತ್ತೂರು ಚರ್ಚ್ನ ಧರ್ಮಗುರು ಹೆನ್ರಿ ಡಿಸೋಜ ಶುಭ ಹಾರೈಸಿದರು. ವೇದಿಕೆಯಲ್ಲಿ ಅತಿಥಿಗಳಾಗಿ ಜಿಲ್ಲಾ ಸ್ವಚ್ಫತಾ ರಾಯಭಾರಿ ಶೀನ ಶೆಟ್ಟಿ, ಪ್ರಜ್ಞಾ ಸಲಹಾ ಕೇಂದ್ರದ ಯೋಜನಾಧಿಕಾರಿ ವಿಲಿಯಂ ಸ್ಯಾಮ್ಯುವೆಲ್ ಪ್ರಾಸ್ತಾವಿಕ ಮಾತನಾಡಿದರು. ವೇದಿಕೆಯಲ್ಲಿ ಡಾ.ಅಲ್ಬರ್ಟ್, ಶಿಬಿರ ಸಂಯೋಜಕರು, ಗ್ರಾಮ ಪಂಚಾಯಿತಿ ಉಪಾಧ್ಯಕ್ಷೆ ಯಮುನಾ ಲಕ್ಷ್ಮಣ ಗೌಡ ಹಾಗೂ ಪಂಚಾಯಿತಿ ಸದಸ್ಯರುಗಳು ಉಪಸ್ಥಿತರಿದ್ದರು.
ಪ್ರಜ್ಞಾ ಸಂಸ್ಥೆಯ ವಲಯ ಸಂಯೋಜಕ ಪ್ರದೀಪ್ ಸ್ವಾಗತಿಸಿ, ವಂದಿಸಿದರು. ಶಿಬಿರದಲ್ಲಿ ೩೨೫ ಮಂದಿ ಭಾಗವಹಿಸಿ ಪ್ರಯೋಜನ ಪಡೆದರು. 145 ಕನ್ನಡಕ ವಿತರಿಸಲಾಯಿತು. 49 ಮಂದಿಯನ್ನು ವಿಶೇಷ ಚಿಕಿತ್ಸೆಗೆ ಗುರುತಿಸಿ ಕಾರ್ಡ್ ನೀಡಲಾಯಿತು.








