ವಿಟ್ಲ: ಮೆಸ್ಕಾಂ ಗುತ್ತಿಗೆದಾರರು ಕಾಮಗಾರಿ ನಡೆಸುವ ವೇಳೆ ಮೆಸ್ಕಾಂ ಅಧಿಕಾರಿಗಳು ಸ್ಥಳದಲ್ಲಿ ನಿಂತು ಕೆಲಸ ಮಾಡಿಸಬೇಕು. ಅಪಾಯಕಾರಿ ತಂತಿಗಳನ್ನು ತೆರವುಗೊಳಿಸದಿರುವುದರಿಂದ ಪ್ರಾಣ ಹಾನಿ ಸಂಭವಿಸುತ್ತಿದೆ. ಸಮರ್ಪಕ ಪ್ರಾಮಾಣಿಕ ಕೆಲಸ ಮಾಡಿದಾಗ ಅಪಾಯಕಾರಿ ವಿದ್ಯುತ್ ತಂತಿಗಳ ಸಮಸ್ಯೆ ದೂರವಾಗಲಿದೆ. ಮೆಸ್ಕಾಂನಿಂದ ವಿದ್ಯುತ್ ಸಮಸ್ಯೆಗೆ ಯಾವುದೇ ಸ್ಪಂದನೆ ಸಿಗುತ್ತಿಲ್ಲ. ಬೇಜಾಬ್ದಾರಿತನದಿಂದ ವರ್ತಿಸುತ್ತಿದ್ದಾರೆ ಎಂದು ಗ್ರಾಮಸ್ಥರು ದೂರಿದರು.
ಕೊಳ್ನಾಡು ಗ್ರಾಮ ಪಂಚಾಯಿತಿನ ನೇತ್ರಾವತಿ ಸಭಾಂಗಣದಲ್ಲಿ ಅಧ್ಯಕ್ಷ ಸುಭಾಶ್ಚಂದ್ರ ಶೆಟ್ಟಿ ಕುಳಾಲು ಅವರ ಅಧ್ಯಕ್ಷತೆಯಲ್ಲಿ ಬುಧವಾರ ನಡೆದ ಪ್ರಥಮ ಸುತ್ತಿನ ಗ್ರಾಮಸಭೆಯಲ್ಲಿ ಕೇಳಿ ಬಂದ ದೂರುಗಳು.
ಕೊಳ್ನಾಡು ಗ್ರಾಮದಲ್ಲಿ ವಿದ್ಯುತ್ ತಂತಿಗೆ ಸ್ಪರ್ಶಿಸಿ ಈ ಹಿಂದೆ ಪ್ರಾಣಹಾನಿ ಆಗಿದೆ. ಮನೆಯ ಮೇಲೆ ತಂತಿಗಳು ಹಾದು ಹೋಗುತ್ತಿದೆ. ಮೆಸ್ಕಾಂ ಸಿಬ್ಬಂದಿಗಳ ಬೇಜಾಬ್ದಾರಿತನದಿಂದ ಗುತ್ತಿಗೆದಾರರು ಕೆಲಸ ಮಾಡಲು ಹಿಂದೇಟು ಹಾಕುತ್ತಿದ್ದಾರೆ. ಈ ಬಗ್ಗೆ ಅಧಿಕಾರಿಗಳು ಗಮನಹರಿಸಬೇಕು ಎಂದು ಗ್ರಾಮಸ್ಥರು ಆಗ್ರಹಿಸಿದರು.
ಸರಕಾರದ ಯೋಜನೆಗಳಿಗೆ ಬ್ಯಾಂಕ್‌ಗಳು ಸಹಕಾರ ನೀಡಬೇಕು. ಸಮರ್ಪಕ ದಾಖಲೆ ನೀಡಿದರೂ ಬ್ಯಾಂಕ್ ಸಿಬ್ಬಂದಿಗಳು ಸಾಲ ನೀಡಲು ಹಿಂದೇಟು ಹಾಕುತ್ತಿದ್ದಾರೆ. ಇದರಿಂದ ಜನರು ತೊಂದರೆ ಅನುಭವಿಸುತ್ತಿದ್ದಾರೆ ಎಂದು ಗ್ರಾಮಸ್ಥರು ಆರೋಪಿಸಿದರು.
ಅಧ್ಯಕ್ಷ ಸುಭಾಶ್ಚಂದ್ರ ಶೆಟ್ಟಿ ಕುಳಾಲು ಮಾತನಾಡಿ ವಾರ್ಡ್ ಸಭೆಯಲ್ಲಿ ಮೆಸ್ಕಾಂ ಇಲಾಖೆಯ ವಿರುದ್ಧ ಹಲವು ದೂರು ಬಂದಿತ್ತು. ಗ್ರಾಮ ಸಭೆಗೆ ಮೆಸ್ಕಾಂ ಹಿರಿಯ ಅಧಿಕಾರಿಗಳು ಬರುವಂತೆ ಹಲವು ಕಾಲಾವಕಾಶ ನೀಡಿ ಗ್ರಾಮಸಭೆ ದಿನಾಂಕ ನಿಗದಿ ಪಡಿಸಲಾಗಿತ್ತು. ಆದರೆ ವಿಟ್ಲದ ಹಿರಿಯ ಅಧಿಕಾರಿಗಳು ಗ್ರಾಮ ಸಭೆಗೆ ಗೈರು ಹಾಜರಾಗಿದ್ದಾರೆ. ಬಿಲ್ಲು ಕಟ್ಟಲು ಹೋಗುವಾಗಲೂ ಚರ್ಚೆ ಮಾಡುವ ಅವಶ್ಯಕತೆ ಇದೆ. ಅಧಿಕಾರಿಗಳು ಉಡಾಫೆಯಿಂದ ಉತ್ತರಿಸುತ್ತಿದ್ದಾರೆ. ವಿದ್ಯುತ್ ಸ್ಥಗಿತಗೊಂಡರೆ ಗ್ರಾಮಸ್ಥರು ಗ್ರಾಮ ಪಂಚಾಯಿತಿ ಕರೆ ಮಾಡುತ್ತಾರೆ ಹೊರತು ಮೆಸ್ಕಾಂ ಕಚೇರಿ ಮಾಡುತ್ತಿಲ್ಲ. ಒತ್ತಡದ ನಡುವೆಯೂ ಗ್ರಾಮ ಪಂಚಾಯಿತಿ ಇತರ ಸಮಸ್ಯೆಗಳಿಗೆ ಸ್ಪಂದಿಸುತ್ತಿದೆ ಎಂದ ಅವರು ಮುಂದಿನ ಪ್ರಗತಿ ಪರಿಶೀಲನಾ ಸಭೆಯ ಮೊದಲು ವಿದ್ಯುತ್‌ಗೆ ಸಂಬಂಧಪಟ್ಟ ಎಲ್ಲಾ ಸಮಸ್ಯೆಗಳು ನಿವಾರಣೆಯಾಗಬೇಕು ಎಂದು ಮೆಸ್ಕಾಂ ಅಧಿಕಾರಿಗಳಿಗೆ ಸೂಚಿಸಿದರು.
ಕೊಳ್ನಾಡು ಗ್ರಾಮ ಪಂಚಾಯಿತಿ ವ್ಯಾಪ್ತಿಯ ರಸ್ತೆ ಬದಿಯ ಅಪಾಯಕಾರಿ ಕಂಬಗಳನ್ನು ತೆರವುಗೊಳಿಸಲು ನಿರ್ಣಯ ಕೈಗೊಳ್ಳಲಾಯಿತು.
ಸರಕಾರದ ಯೋಜನೆಗಳನ್ನು ಸದ್ವಿಯೋಗಪಡಿಸಲು ಬ್ಯಾಂಕ್‌ಗಳ ಸಹಕಾರ ಅಗತ್ಯವಾಗಿದೆ. ಕಾನೂನು ಬದ್ಧವಾಗಿ ಜನರ ಬೇಡಿಕೆಗಳಿಗೆ ಸಂದಿಸಬೇಕು. ಸಾಲ ನೀಡಲು ಸಾಧ್ಯವಾಗದಿದ್ದಲ್ಲಿ ಹಿಂಬರಹ ನೀಡಬೇಕು ಎಂದರು.
ಜಿಲ್ಲಾ ಪಂಚಾಯಿತಿ ಸದಸ್ಯ ಎಂ.ಎಸ್ ಮಹಮ್ಮದ್ ಮಾತನಾಡಿ ಕೊಳ್ನಾಡು ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಜಿಲ್ಲಾ ಪಂಚಾಯಿತಿ ವತಿಯಿಂದ ಅನುದಾನ ಬಿಡುಗಡೆಗೊಂಡು ಹಲವು ಅಭಿವೃದ್ಧಿ ಕಾಮಗಾರಿ ನಡೆದಿದೆ. ಜನಪ್ರತಿನಿಧಿಗಳಲ್ಲಿ ಇಚ್ಚಾಶಕ್ತಿ ಇದ್ದಾಗ ಗ್ರಾಮದ ಅಭಿವೃದ್ಧಿ ಸಾಧ್ಯವಾಗುತ್ತದೆ. ಕೊಳ್ನಾಡು ಗ್ರಾಮ ಪಂಚಾಯಿತಿ ಮಾದರಿ ಪಂಚಾಯಿತಿ ಆಗಿ ಕೆಲಸ ನಿರ್ವಹಿಸುತ್ತಿದೆ. ಮಾಜಿ ಸಚಿವ ರಮಾನಾಥ ರೈ ಅವರ ವಿಶೇಷ ಪ್ರಯತ್ನದಿಂದ ಬಹುಗ್ರಾಮ ಕುಡಿಯುವ ನೀರಿನ ಯೋಜನೆಯಿಂದ ಗ್ರಾಮದಲ್ಲಿ ನೀರಿನ ಸಮಸ್ಯೆ ನಿವಾರಣೆಯಾಗಿದೆ ಎಂದರು.
ಸಮಾಜ ಕಲ್ಯಾಣ ಇಲಾಖೆಯ ಅಧಿಕಾರಿ ನೋಡಲಾಧಿಕಾರಿಯಾಗಿ ಭಾಗವಹಿಸಿದ್ದರು. ಗ್ರಾಮ ಪಂಚಾಯಿತಿ ಉಪಾಧ್ಯಕ್ಷ ಯಮುನಾ ಲಕ್ಷ್ಮಣ ಗೌಡ, ಅಭಿವೃದ್ಧಿ ಅಧಿಕಾರಿ ರೋಹಿನಿ, ಕಾರ್ಯದರ್ಶಿ ಆಯಿಷಾ ಭಾನು, ಗ್ರಾಮ ಪಂಚಾಯಿತಿ ಸದಸ್ಯರು ಉಪಸ್ಥಿತರಿದ್ದರು.

LEAVE A REPLY

 Click this button or press Ctrl+G to toggle between Kannada and English

Please enter your comment!
Please enter your name here