ಬಂಟ್ವಾಳ: ಬೊರಿಮಾರ್ ಚರ್ಚ್ ನ ಶತಮಾನೋತ್ತರ ಬೆಳ್ಳಿ ಹಬ್ಬದ ಆಚರಣೆಯು ಎಲ್ಲಾ ಧರ್ಮಿಯರಿಗೂ ಮಾದರಿ ಎಂಬಂತೆ ಮುನ್ನಡೆಯುತ್ತಿದ್ದು, ಭಗವಂತನಿಗೂ ಪ್ರಿಯವಾಗುವುದರಲ್ಲಿ ಸಂದೇಹವಿಲ್ಲ ಎಂದು ಜಿಲ್ಲಾ ಪಂಚಾಯತ್ ಸದಸ್ಯೆ ಮಂಜುಳಾ ಮಾಧವಮಾವೆ ಹೇಳಿದರು. ಶತಮಾನೋತ್ತರ ಬೆಳ್ಳಿ ಹಬ್ಬದ ಸಂಭ್ರಮದಲ್ಲಿರುವ ಬೊರಿಮಾರ್ ನ ಸೈಂಟ್ ಜೋಸೆಫ್ ಚರ್ಚ್‌ನ ಆಶ್ರಯದಲ್ಲಿ ಮುನ್ನಡೆಯುತ್ತಿರುವ ಸೈಂಟ್ ಜೋಸೆಫ್ ಅನುದಾನಿತ ಹಿರಿಯ ಪ್ರಾಥಮಿಕ ಶಾಲೆ ಮತ್ತು ಆಂಗ್ಲ ಮಾಧ್ಯಮ ಶಾಲೆಯ ವಿದ್ಯಾರ್ಥಿಗಳಿಗಾಗಿ ಆಯೋಜಿಸಲಾದ “ಶಾಲೋತ್ಸವ” ಕಾರ್ಯಕ್ರಮದಲ್ಲಿ ಅವರು ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿದರು.

ಬೊರಿಮಾರ್ ಚರ್ಚಿನ ಪಾಲನಾ ಸಮಿತಿಯವರು ಪ್ರತೀ ತಿಂಗಳು ಹಮ್ಮಿಕೊಂಡಂತಹ ಕಾರ್ಯಕ್ರಮಗಳು ರಾಜಕೀಯದಲ್ಲಿ ಸೇವೆ ನೀಡುತ್ತಿರುವ ನಮಗೆ ಮಾದರಿಯಾಗಿದೆ ಎಂದ ಅವರು, ಫಾದರ್ ಗ್ರೆಗರಿ ಪಿರೇರಾ ರವರ ಕೃಷಿ ಕ್ರಾಂತಿ ಹಾಗೂ ಚರ್ಚ್ ಪಾಲನಾ ಸಮಿತಿಯ ಉಪಾಧ್ಯಕ್ಷರಾದ ರೋಷನ್ ಬೊನಿಫಾಸ್ ಮಾರ್ಟಿಸ್ ರ ಪರಿಕಲ್ಪನೆಯಲ್ಲಿ ಕಳೆದ ನಾಲ್ಕು ವರ್ಷಗಳಿಂದ ನಡೆಯುತ್ತಿರುವ ಸಾಮಾಜಿಕ ಸಾಮರಸ್ಯ ಸಾರುವ ಕ್ರಿಸ್ಮಸ್ ಸೌಹಾರ್ದಕೂಟ ಸೂರಿಕುಮೇರು ಚರ್ಚ್ ನ ಹೆಸರನ್ನು ಉತ್ತುಂಗಕ್ಕೆ ಏರಿಸಿದೆ ಎಂದವರು ಅಭಿಪ್ರಾಯಪಟ್ಟರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶಾಲಾ ಸಂಚಾಲಕರಾದ ವಂದನೀಯ ಫಾದರ್ ಗ್ರೆಗರಿ ಪಿರೇರಾ ವಹಿಸಿದ್ದರು. ಮಕ್ಕಳು ಶಿಕ್ಷಣದ ಕಡೆಗೆ ಹೆಚ್ಚು ಗಮನ ನೀಡುವುದರ ಮೂಲಕ ಹೆತ್ತವರ ಕನಸನ್ನು ನನಸು ಮಾಡಬೇಕು, ಇದು ದೇವರಿಗೂ ಪ್ರೀತಿ ಎಂದರು.
ಮುಖ್ಯ ಅತಿಥಿಗಳಾಗಿ ತಾಲೂಕು ಪಂಚಾಯತ್ ಸದಸ್ಯೆ ಮಂಜುಳಾ ಕುಶಲ ಪೆರಾಜೆ, ಮಾಣಿ ಗ್ರಾಮ ಪಂಚಾಯತ್ ಅಧ್ಯಕ್ಷೆ ಮಮತಾ ಶೆಟ್ಟಿ ಭಾಗವಹಿಸಿದ್ದರು.
ಜೀವನ್ ನಿಲಯ ಕಾನ್ವೆಂಟಿನ ಸುಪೀರಿಯರ್ ಸಿಸ್ಟರ್ ನ್ಯಾನ್ಸಿ, ಚರ್ಚ್ ಪಾಲನಾ ಸಮಿತಿಯ ಉಪಾಧ್ಯಕ್ಷರಾದ ರೋಷನ್ ಬೊನಿಫಾಸ್ ಮಾರ್ಟಿಸ್, ಕಾರ್ಯದರ್ಶಿ ಪ್ರೀತಿ ಲ್ಯಾನ್ಸಿ ಪಿರೇರಾ, ಮುಖ್ಯ ಶಿಕ್ಷಕಿ ತೆರೆಜಾ ಫೆರ್ನಾಂಡಿಸ್ ಮತ್ತು ರೀನಾ ಡಿ’ಸೋಜ ವೇದಿಕೆಯಲ್ಲಿ ಉಪಸ್ಥಿತರಿದ್ದರು. ವಿದ್ಯಾರ್ಥಿಗಳಿಗೆ ವಿವಿಧ ರೀತಿಯ ಆಟೋಟ ಸ್ಪರ್ಧೆಗಳನ್ನು ನಡೆಸಿ, ವಿಜೇತರಿಗೆ ಬಹುಮಾನ ವಿತರಿಸಲಾಯಿತು. ಶತಮಾನೋತ್ತರ ಬೆಳ್ಳಿಹಬ್ಬದ ಸಂಭ್ರಮದ ಅಂಗವಾಗಿ ನಡೆದ ಶಾಲೋತ್ಸವ ಕಾರ್ಯಕ್ರಮ ನೆನಪಿಗಾಗಿ ಎರಡೂ ಶಾಲೆಗಳ ಶಿಕ್ಷಕರಿಗೆ , ಸಿಬ್ಬಂದಿಗಳಿಗೆ ಚರ್ಚ್ ಪಾಲನಾ ಸಮಿತಿಯ ಪರವಾಗಿ ನೆನಪಿನ ಕಾಣಿಕೆಯನ್ನು ನೀಡಿ ಗೌರವಿಸಲಾಯಿತು. ಅಪಘಾತದಲ್ಲಿ ಗಾಯಾಳುವಾದ ವಿದ್ಯಾರ್ಥಿಗಳಿಗೆ ತುರ್ತು ಚಿಕಿತ್ಸೆ ನೀಡಿದ ಪೋಸ್ಟ್ ಮ್ಯಾನ್ ಅಶ್ರಫ್ ಸೂರಿಕುಮೇರು ಮತ್ತು ಇಲೆಕ್ಟ್ರಿ್ಶಿಯನ್ ಚಿದಾನಂದರವರನ್ನು ಸನ್ಮಾನಿಸಲಾಯಿತು.
ಶಿಕ್ಷಕಿ ಜೆಸಿಂತಾರವರು ಕಾರ್ಯಕ್ರಮವನ್ನು ನಿರೂಪಿಸಿದರು. ಕಾರ್ಯಕ್ರಮದ ಬಳಿಕ ಎಲ್ಲರಿಗೂ ಭೋಜನದ ವ್ಯವಸ್ಥೆ ಮಾಡಲಾಗಿತ್ತು.

LEAVE A REPLY

 Click this button or press Ctrl+G to toggle between Kannada and English

Please enter your comment!
Please enter your name here