

ಬಂಟ್ವಾಳ: ವಿದ್ಯಾರ್ಥಿಗಳು ತನ್ನ ಜೀವನದಲ್ಲಿ ನಯ-ವಿನಯ, ಶಿಸ್ತು-ಸಂಯಮ ಹಾಗೆಯೇ ಹಿರಿಯರ ಕುರಿತು ಗೌರವವನ್ನು ಯಾವತ್ತೂ ಬೆಳೆಸಿಕೊಳ್ಳಬೇಕು. ತಂದೆ-ತಾಯಿ, ವಿದ್ಯೆ ಕಲಿಸಿದ ಗುರುಗಳು, ನಮ್ಮ ಜೀವನಕ್ಕೆ ಆಶ್ರಯ ತಾಣವಾಗಿರುವ ಪ್ರಕೃತಿ, ಅದರೊಂದಿಗೆ ವಿಶಾಲವಾದ ಮಾನವ ಸಮಾಜ ಇವಕ್ಕೆ ಸದಾ ಚಿರಋಣಿಯಾಗಿರಬೇಕು. ಎಂದು ಎಸ್.ಡಿ.ಎಮ್ ಕಾನೂನು ಮಹಾವಿದ್ಯಾಲಯ ಮಂಗಳೂರು ಇಲ್ಲಿನ ಪ್ರಾಧ್ಯಾಪಕರಾದ ಪ್ರೊ ಉದಯಕುಮಾರ್ ಎಂ. ಹೇಳಿದರು.
ಅವರು ಬಂಟ್ವಾಳದ ಶ್ರೀ ವೆಂಕಟರಮಣ ಸ್ವಾಮಿ ಕಾಲೇಜಿನ 2019-20ನೆಯ ಸಾಲಿನ ವಿದ್ಯಾರ್ಥಿ ಸಂಘವನ್ನು ಉದ್ಘಾಟಿಸಿ ಮಾತನಾಡುತ್ತಿದ್ದರು ಸಮಾಜ ನಮ್ಮನ್ನು ಬೆಳೆಸುತ್ತದೆ. ಅಂತಹ ಸಮಾಜವನ್ನು ಬೆಳೆಸುವ ಜವಾಬ್ದಾರಿ ವಿದ್ಯಾರ್ಥಿಗಳಲ್ಲಿರಬೇಕು. ನಾವು ಇತರರನ್ನು ಪ್ರೀತಿಸಿದರೆ ಅವರು ನಮ್ಮನ್ನು ಪ್ರೀತಿಸುತ್ತಾರೆ. ಅದೇ ರೀತಿ ಇಡೀ ವಿಶ್ವವನ್ನು ಪ್ರೀತಿಸುವ ಗುಣವನ್ನು ವಿದ್ಯಾರ್ಥಿಗಳು ಬೆಳೆಸಿಕೊಳ್ಳಬೇಕು. ವಿದ್ಯಾರ್ಥಿಗಳಲ್ಲಿನ ಆಚಾರ ವಿಚಾರಗಳು, ಶಿಸ್ತು ಇತ್ಯಾದಿ ಅವರ ವ್ಯಕ್ತಿತ್ವವನ್ನು ರೂಪಿಸುತ್ತವೆ ಎಂದವರು ಹೇಳಿದರು.
ಕಾರ್ಯಕ್ರಮದಲ್ಲಿ ಗೌರವ ಅತಿಥಿಯಾಗಿ ಭಾಗವಹಿಸಿದ್ದ ಕರ್ನಾಟಕ ರಾಜ್ಯ ಹೈಕೋಟನ ಹಿರಿಯ ನ್ಯಾಯವಾದಿ ಶ್ರೀ ಸುಧಾಕರ್ ಪೈಯವರು ಮಾತನಾಡಿ ಭಾರತೀಯರ ಆತ್ಮದಲ್ಲಿ ಆಧ್ಯಾತ್ಮ ಇದೆ. ಇದಕ್ಕೆ ಕಾರಣ ಭಾರತದ ಸಂಸ್ಕೃತಿ. ಈ ಸಂಸ್ಕೃತಿಯು ಪ್ರಪಂಚವೇ ಹೊಗಳಿದ ಮಾದರಿ ಸಂಸ್ಕೃತಿಯಾಗಿದೆ ಪಾಶ್ಚಾತ್ಯರಿಗೆ ಶೈಲಿ ಮುಖ್ಯವಾದರೆ ಭಾರತೀಯರಿಗೆ ಸಂಸ್ಕೃತಿ ಮುಖ್ಯವಾಗಿದೆ. ಈ ದೇಶವು ಹಾವನ್ನು, ಗೋವನ್ನು, ತಾಯಿಯನ್ನು ಪೂಜಿಸುವ ಸಂಸ್ಕೃತಿಯ ದೇಶವಾಗಿದೆ. ವಿವಿಧತೆಯಲ್ಲಿನ ಏಕತೆಯನ್ನು ಸಾರುವ ಈ ಸಂಸ್ಕೃತಿಯನ್ನು ವಿದ್ಯಾರ್ಥಿಗಳು ಅಳವಡಿಸಿಕೊಳ್ಳಬೇಕು ಎಂದು ಕರೆಯಿತ್ತರು.
ಎಸ್.ವಿ.ಎಸ್ ಕಾಲೇಜುಗಳ ಸಂಚಾಲಕರಾದ ಕೂಡಿಗೆ ಪ್ರಕಾಶ್ ಶೆಣೈ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದರು.
ಕಾಲೇಜಿನ ಪ್ರಾಂಶುಪಾಲರಾದ ಡಾ| ಪಾಂಡುರಂಗ ನಾಯಕ್ ಪ್ರಾಸ್ತಾವಿಕ ಮಾತುಗಳನ್ನು ಆಡಿದರು. ವಿದ್ಯಾರ್ಥಿ ಸಂಘದ ಅಧ್ಯಕ್ಷ ಹರ್ಷಿತ್ ಆರ್ ಬಿ, ಸ್ವಾಗತಿಸಿದರು. ಕಾರ್ಯದರ್ಶಿ ರಿಚಾ ಶಿಫಾಲಿ ಡಿ ಸೋಜ ಸಂಘದ ಪಕ್ಷಿ ನೋಟವನ್ನು ನೀಡಿದರು. ಜತೆ ಕಾರ್ಯದರ್ಶಿ ಅಪೂರ್ವ ವಂದಿಸಿದರು. ಗಾಯನಾ ಪ್ರಾರ್ಥಿಸಿದರು. ಪ್ರಜ್ಞಾ ಕಾರ್ಯಕ್ರಮ ನಿರೂಪಿಸಿದರು.








