ಧರ್ಮ ಮರೆತ ರಾಷ್ಟ್ರ ಪ್ರಗತಿ ಸಾಧಿಸಲು ಅಸಾಧ್ಯ’-ಒಡಿಯೂರುಶ್ರೀ
ಶ್ರೀ ಒಡಿಯೂರು ಗ್ರಾಮೋತ್ಸವ ಸಂಪನ್ನ: ಗುರುದೇವ ಬಂಧುಗಳಿಂದ ಗುರುವಂದನೆ: ನಾನಾ ಸೇವಾ ಪ್ರಕಲ್ಪಗಳ ವಿತರಣೆ
ಒಡಿಯೂರು: ನಾವು ಬದುಕಿನಲ್ಲಿ ನಿತ್ಯ ವಿದ್ಯಾರ್ಥಿಯಾಗುವ ಹಂಬಲವಿದ್ದಾಗ ವಿಶ್ವ ವಿಚಾರಗಳನ್ನು ಅರಿಯುತ್ತಾ ಸಾಗಬಹುದು. ಧರ್ಮ ಮರೆತ ರಾಷ್ಟ್ರ ಪ್ರಗತಿ ಸಾಧಿಸಲು ಅಸಾಧ್ಯ. ಧರ್ಮ ಸಂಸ್ಕೃತಿ ಬದುಕಿನ ಶ್ವಾಸವಾಗಬೇಕು ಅಧಾತ್ಮದ ಬೆಳಕು ಭಾರತವನ್ನು ವಿಶ್ವದೆಲ್ಲೆಡೆ ಬೆಳಗುವಂತೆ ಮಾಡಿ ಜಗದ್ಗುರು ಸ್ಥಾನಕ್ಕೇರಿಸಿದೆ. ಗ್ರಾಮಗಳು ಅಭಿವೃದ್ಧಿ ಆದಾಗ ಮಾತ್ರ ರಾಷ್ಟ್ರ ಅಭಿವೃದ್ಧಿಯಾಗಲು ಸಾಧ್ಯ. ತಂತ್ರಜ್ಞಾನದ ಜೊತೆ ತತ್ವಜ್ಞಾನದ ಬಳಕೆಯಾಗಬೇಕು. ಎಂದು ಒಡಿಯೂರು ಶ್ರೀ ಗುರುದೇವದತ್ತ ಸಂಸ್ಥಾನದ ಶ್ರೀ ಗುರುದೇವಾನಂದ ಸ್ವಾಮೀಜಿ ಹೇಳಿದರು.


ಅವರು ಸೋಮವಾರ ಒಡಿಯೂರು ಶ್ರೀ ಗುರುದೇವದತ್ತ ಸಂಸ್ಥಾನದಲ್ಲಿ ಶ್ರೀ ಒಡಿಯೂರು ಗ್ರಾಮೋತ್ಸವ, ಪೂಜ್ಯ ಶ್ರೀಗಳವರ ಜನ್ಮದಿನೋತ್ಸವ ಗುರುವಂದನ ಕಾರ್ಯಕ್ರಮದ ಧರ್ಮ ಸಭೆಯಲ್ಲಿ ಒಡಿಯೂರು ಶ್ರೀ ವಿವಿಧೋದ್ದೇಶ ಸೌಹಾರ್ದ ಸಹಕಾರಿ ನಿಯಮಿತದ ಮೊಬೈಲ್ ಸಹಕಾರಿ ಆಪ್ ಅನಾವರಣಗೊಳಿಸಿ ಆಶೀರ್ವಚನ ನೀಡಿದರು. ಮನಸ್ಸಿನ ಕೊಳೆಯನ್ನು ದೂರ ಮಾಡುತ್ತಾ ವಿಶ್ವದ ಕೊಳೆ ದೂರ ಮಾಡಬೇಕು. ತ್ಯಾಗಪೂರ್ಣವಾದ ಸೇವೆಗಳು ಸಮರ್ಪಕವಾಗಿ ನಡೆಯುವಲ್ಲಿ ನಿಜವಾದ ಆನಂದದ ಸೆಳೆ ಇದೆ. ಸಮಾಜಕ್ಕೆ ಸದ್ವಿನಿಯೋಗವಾಗುವ ಜತೆಗೆ ಅನ್ಯರಿಗೆ ಪ್ರೇರಣೆ ನೀಡುವ ರೀತಿಯಲ್ಲಿ ಜನ್ಮದಿನದ ಆಚರಣೆಗಳು ನಡೆಯಬೇಕು ಎಂದು ತಿಳಿಸಿದರು.

ಪೆನ್ಸಿಲ್ ಬಾಕ್ಸ್ ಕನ್ನಡ ಚಲನ ಚಿತ್ರದ ಹಾಡುಗಳ ಅನಾವರಣ ಮಾಡಿದ ಸಾದ್ವಿ ಮಾತಾನಂದಮಯೀ ಆಶೀರ್ವಚನ ನೀಡಿ ಗುರುಗಳ ಮಾರ್ಗದರ್ಶನದಲ್ಲಿ ನಡೆಯುವ ಗ್ರಾಮೋತ್ಸವ ಗುರು ಬಂಧುಗಳ ಉತ್ಸವವಾಗಿ ನಡೆಯುತ್ತಿದೆ. ಸಮಾಜದಿಂದ ದೊರೆತ ಸೇವೆಗಳು ಪೂಜ್ಯ ಗುರುಗಳ ಮೂಲಕ ಯೋಗ್ಯವಾಗಿ ಅರ್ಹರಿಗೆ ಸಲ್ಲಿಸುವ ಇಂತಹ ಹುಟ್ಟುಹಬ್ಬ ಪ್ರತಿಯೊಬ್ಬರಿಗೂ ಪ್ರೇರಣೆಯಾಗಬೇಕು ಎಂದು ತಿಳಿಸಿದರು.
ಕಟೀಲು ಶ್ರೀ ದುರ್ಗಾಪರಮೇಶ್ವರೀ ದೇವಸ್ಥಾನದ ಅನುವಂಶಿಕ ಅರ್ಚಕ ಕಮಲಾದೇವಿ ಪ್ರಸಾದ ಅಸ್ರಣ್ಣ ಮಾತನಾಡಿ ಪಾಪಗಳು ಕ್ಷಯವಾಗಿ, ಒಳಿತಿನ ರಕ್ಷಣೆಯಾಗುವ ಜಾಗ ಕ್ಷೇತ್ರವಾಗುತ್ತದೆ. ಒಡಿಯೂರು ಕ್ಷೇತ್ರದ ಮೂಲಕ ಸಹಸ್ರಾರು ಮಂದಿಗಳ ದಾರಿದ್ರ್ಯ ಕ್ಷಯವಾಗಿ, ರಕ್ಷಣೆ ನೀಡುವ ಕಾರ್ಯವಾಗುತ್ತಿದ್ದು, ಅದ್ಭುತ ಕ್ಷೇತ್ರವಾಗಿ ಬೆಳೆಯುತ್ತಿದೆ.
ಬೆಳಗ್ಗೆ ಶ್ರೀ ಕ್ಷೇತ್ರದಲ್ಲಿ ಗಣಪತಿ ಹವನ, ಆರಾಧ್ಯದೇವರಿಗೆ ಮಹಾಪೂಜೆ, ಶ್ರೀಗುರು ಪಾದಪೂಜೆ, ಪಾದುಕಾರಾಧನೆ, ಗುರುಕುಲದ ಪುಟಾಣಿಗಳಿಂದ ಗುರುನಮನ, ಉಯ್ಯಾಲೆ ಸೇವೆ, ಲಡ್ಡುಗಳಿಂದ ತುಲಾಭಾರ ನಡೆಯಿತು. ರಾತ್ರಿ ಶ್ರೀ ಸನ್ನಿಧಿಯಲ್ಲಿ ವಿಶೇಷ ರಂಗಪೂಜೆ, ಮಹಾಪೂಜೆ ನಡೆಯಿತು.
ನವನಿಕೇತನ ಯೋಜನೆಯಡಿ ನಿರ್ಮಾಣವಾದ ಮನೆಯ ಕೀಲಿಕೈ ಚಂದ್ರಾವತಿ ನಾಯ್ಕ ಅಡ್ವಾಯಿ ಅವರಿಗೆ ನೀಡಲಾಯಿತು. ಸಸಿಗಳ ವಿತರಣೆ, ಮನೆ ದುರಸ್ತಿಗೆ ನೆರವು, ಅನಾರೋಗ್ಯಕ್ಕೆ ನೆರವು, ಸಂಘ ಸಂಸ್ಥೆ- ಧಾರ್ಮಿಕ ಶ್ರದ್ಧಾ ಕೇಂದ್ರಗಳಿಗೆ ನೆರವು ನೀಡಲಾಯಿತು.
ವಜ್ರಮಾತಾ ಮಹಿಳಾ ವಿಕಾಸ ಕೇಂದ್ರ ಒಡಿಯೂರು ವತಿಯಿಂದ ಒಡಿಯೂರು ಶ್ರೀ ಗುರುದೇವ ವಿದ್ಯಾಪೀಠಕ್ಕೆ ಶಾಲಾ ವಾಹನ ಕೊಡುಗೆಯಾಗಿ ನೀಡಲಾಯಿತು. ಪ್ರೌಢ ಶಾಲಾ ಮಟ್ಟದ ಬಂಟ್ವಾಳ ತಾಲೂಕು ಮಟ್ಟದ ಪ್ರಬಂಧ ಸ್ಪರ್ಧೆಯ ವಿಜೇತರಿಗೆ ಬಹುಮಾನ ವಿತರಿಸಲಾಯಿತು.
ಸೇವಾ ಗ್ರಾಮಗಳ ಸಮಿತಿಯ ಅಧ್ಯಕ್ಷರಿಗೆ ಗೌರವಾರ್ಪಣೆ, ಒಡಿಯೂರು ಶ್ರೀ ಗ್ರಾಮ ವಿಕಾಸ ಯೋಜನೆಗೆ ಉಚಿತ ಕಚೇರಿ ನೀಡುವ ಬಂಧುಗಳಿಗೆ ಗೌರವಾರ್ಪಣೆ, ರಾಜ್ಯ ಮಟ್ಟದ ಪವರ್ ಲಿಪ್ಟಿಂಗ್ ಸ್ಪರ್ಧೆಯಲ್ಲಿ ಚಿನ್ನ ಗೆದ್ದ ಸುಮನ ಮಾಧವ ಸುವರ್ಣ ಅವರಿಗೆ ಗೌರವಾರ್ಪಣೆ ಮಾಡಲಾಯಿತು.
ಸಮಾರಂಭದಲ್ಲಿ ಜನ್ಮದಿನೋತ್ಸವ ಮಹಾರಾಷ್ಟ್ರ ಘಟಕ ಅಧ್ಯಕ್ಷ ವಾಮಯ್ಯ ಬಿ. ಶೆಟ್ಟಿ ಚೆಂಬೂರು, ಪ್ರಧಾನ ಕಾರ್ಯದರ್ಶಿ ರೋಹಿತ್ ಡಿ. ಶೆಟ್ಟಿ ನಗ್ರಿಗುತ್ತು, ಸದಸ್ಯ ಕೃಷ್ಣ ಎಲ್. ಶೆಟ್ಟಿ ಮಾಹಿಮ್, ಜನ್ಮದಿನೋತ್ಸವ ಸಮಿತಿಯ ಅಧ್ಯಕ್ಷ ಲೋಕನಾಥ ಜಿ. ಶೆಟ್ಟಿ ತಾಳಿಪ್ಪಾಡಿಗುತ್ತು, ಪ್ರಧಾನ ಕೋಶಾಧಿಕಾರಿ ಎ. ಅಶೋಕ್ ಕುಮಾರ್ ಬಿಬೈ, ಒಡಿಯೂರು ಶ್ರೀ ಗ್ರಾಮ ವಿಕಾಸ ಯೋಜನೆಯ ಉಡುಪಿ ಅಧ್ಯಕ್ಷ ಪ್ರಭಾಕರ ಶೆಟ್ಟಿ, ಪಟ್ಲ ಮಹಾಬಲ ಶೆಟ್ಟಿ, ಲೀಲಾಕ್ಷ ಕರ್ಕೇರ, ಕುರೋಮೂಲೆ ಚಂದ್ರಶೇಖರ ಉಪಾಧ್ಯಾಯ, ಒಡಿಯೂರು ವಜ್ರಮಾತಾ ಮಹಿಳಾ ವಿಕಾಸ ಕೇಂದ್ರದ ಅಧ್ಯಕ್ಷೆ ಸರ್ವಾಣಿ ಪಿ. ಶೆಟ್ಟಿ, ಮಹಾರಾಷ್ಟ್ರ ಘಟಕ ಅಧ್ಯಕ್ಷೆ ರೇವತಿ ವಾಮಯ್ಯ ಶೆಟ್ಟಿ ಮತ್ತಿತರರು ಉಪಸ್ಥಿತರಿದ್ದರು.
ಯಶವಂತ ವಿಟ್ಲ ಸ್ವಾಗತಿಸಿದರು. ಒಡಿಯೂರು ಶ್ರೀ ಗ್ರಾಮ ವಿಕಾಸ ಯೋಜನೆಯ ನಿರ್ದೇಶಕ ಕಿರಣ್ ಉರ್ವ ವರದಿ ಮಂಡಿಸಿದರು. ಬಂಟ್ವಾಳ ವಿಸ್ತರಣಾಧಿಕಾರಿ ಸದಾಶಿವ ಅಳಿಕೆ ಪ್ರಸ್ತಾವನೆಗೈದರು. ಒಡಿಯೂರು ಶ್ರೀ ವಿವಿಧೋದ್ದೇಶ ಸೌಹಾರ್ದ ಸಹಕಾರಿ ನಿಯಮಿತದ ಅಧ್ಯಕ್ಷ ಎ. ಸುರೇಶ್ ರೈ ಸಹಕಾರಿ ಆಪ್ ಬಗ್ಗೆ ಮಾಹಿತಿ ನೀಡಿದರು. ಸದಾಶಿವ ಶೆಟ್ಟಿ ಕನ್ಯಾನ, ಲೀಲಾ ಪಾದೆಕಲ್ಲು, ವಿಜೇತ ಬಹುಮಾನಿತರ ಪಟ್ಟಿ ಓದಿದರು. ಸೇರಾಜೆ ಗಣಪತಿ ಭಟ್ ವಂದಿಸಿದರು. ಜಯಪ್ರಕಾಶ್ ಶೆಟ್ಟಿ ಮತ್ತು ಪ್ರಕಾಶ್ ಕೆ. ಶೆಟ್ಟಿ ಪೇಟೆಮನೆ ಕಾರ್ಯಕ್ರಮ ನಿರೂಪಿಸಿದರು.

LEAVE A REPLY

 Click this button or press Ctrl+G to toggle between Kannada and English

Please enter your comment!
Please enter your name here