

ಬಂಟ್ವಾಳ: ಖಾಸಗಿ ಕ್ಷೇತ್ರದಲ್ಲಿ ಅವಕಾಶಗಳಿರುವಂತೆಯೆ ಸರಕಾರಿ ಕ್ಷೇತ್ರದಲ್ಲಿ ಹಲವಾರು ಉದ್ಯೋಗ ಅವಕಾಶಗಳಿದ್ದು ಇವುಗಳತ್ತ ವಿದ್ಯಾರ್ಥಿಗಳಲ್ಲಿ ಅರಿವು ಮೂಡಿಸುವ ಕೆಲಸ ಆಗಬೇಕು ಎಂದು ಬಂಟ್ವಾಳ ಗ್ರಾಮೀಣ ಪೊಲೀಸ್ ಠಾಣಾಧಿಕಾರಿ ಪ್ರಸನ್ನ ಎಂ.ಎಸ್ ಅಭಿಪ್ರಾಯಪಟ್ಟರು. ಅವರು ಸಿದ್ಧಕಟ್ಟೆಯ ಸರಕಾರಿ ಪ್ರಥಮ ದರ್ಜೆ ಕಾಲೇಜಿನ ಉದ್ಯೋಗ ಭರವಸೆ ಕೋಶ ಹಾಗೂ ಬಂಟ್ವಾಳ ಗ್ರಾಮಾಂತರ ಪೊಲೀಸ್ ಠಾಣೆಯ ಜಂಟಿ ಆಶ್ರಯದಲ್ಲಿ ಆಯೋಜಿಸಿದ್ದ ಪೊಲೀಸ್ ಸಬ್ಇನ್ಸ್ಪೆಕ್ಟರ್ ಮತ್ತು ಕಾನ್ಸ್ಟೇಬಲ್ ಹುದ್ದೆಗಳ ನೇಮಕಾತಿ ಕುರಿತು ಅರಿವು ಕಾರ್ಯಾಗಾರದಲ್ಲಿ ಸಂಪನ್ಮೂಲ ವ್ಯಕ್ತಿಗಳಾಗಿ ಮಾತನಾಡುತ್ತಾ ಪೊಲೀಸ್ ಇಲಾಖೇಯಲ್ಲಿ ವಿವಿಧ ದರ್ಜೆಯಲ್ಲಿರುವ ವಿಫುಲ ಉದ್ಯೋಗಾವಕಾಶಗಳ ಕುರಿತು ವಿವರವಾದ ಮಾಹಿತಿ ನೀಡಿದರು. ಈ ಉದ್ಯೋಗವನ್ನು ಪಡೆಯುವಲ್ಲಿ ಅವಶ್ಯಕವಿರುವ ಕನಿಷ್ಟ ವಿದ್ಯಾರ್ಹತೆ, ಅರ್ಹತಾ ಪರೀಕ್ಷೆಯಲ್ಲಿರುವ ವಿವಿಧ ವಿಷಯಗಳು ಮತ್ತು ಅದರ ಸ್ವರೂಪ, ದೇಹದಾರ್ಡ್ಯತಾ ಪರೀಕ್ಷೆಯ ಸ್ವರೂಪ, ಮೌಖಿಕ ಸಂದರ್ಶನಕ್ಕಿರುವ ಮಹತ್ವದ ಕುರಿತು ಸವಿವರವಾಗಿ ವಿವರಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಪ್ರಾಂಶುಪಾಲರಾದ ಪ್ರೊ.ಸತ್ಯನಾರಾಯಣ ಭಟ್ ಮಾತನಾಡಿ ಇಂದಿನ ಉಪನ್ಯಾಸದಲ್ಲಿ ಒಬ್ಬ ನುರಿತ ಅಧ್ಯಾಪಕರಂತೆ ಮಾನ್ಯ ಠಾಣಾಧಿಕಾರಿಗಳು ಪೊಲೀಸ್ ಇಲಾಖೆಯಲ್ಲಿನ ಉದ್ಯೋಗಾವಕಾಶಗಳ ಕುರಿತು ಮಾಹಿತಿ ನೀಡಿರುತ್ತಾರೆ. ಇದು ವಿದ್ಯಾರ್ಥಿಗಳಿಗೆ ಬಹಳ ಉಪಯುಕ್ತವಾಗಿದ್ದು ಅವರ ಅಧ್ಯಯನ ನಂತರ ಉಪಯುಕ್ತವಾದ ಔದ್ಯೋಗಿಕ ಕೌಶಲಗಳನ್ನು ವೃದ್ಧಿಸುವಲ್ಲಿ ಕಾಲೇಜು ಇಂತಹ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುತ್ತಿದೆ ಎಂದರು.
ಪ್ರತೀಕ್ಷಾ ಮತ್ತು ತಂಡ ಪ್ರಾರ್ಥಿಸಿದ ಕಾರ್ಯಕ್ರಮವನ್ನು ಉದ್ಯೋಗ ಭರವಸೆ ಕೋಶದ ಸಂಚಾಲಕರಾದ ಹನುಮಂತಯ್ಯ ಜಿ.ಹೆಚ್ ಇವರು ನಿರ್ವಹಿಸಿದರು.








