Saturday, October 21, 2023

ತೆರಿಗೆಯೊಂದಿಗೆ ಕಸದ ಶುಲ್ಕ ವಸೂಲಿ ಕೈ ಬಿಡುವಂತೆ ಆಗ್ರಹಿಸಿ ಪ್ರತಿಭಟನೆಗೆ ನಿರ್ಧಾರ

Must read

ಬಂಟ್ವಾಳ: ಸ್ವಯಂಘೋಷಿತ ಆಸ್ತಿ ತೆರಿಗೆಯ ಜೊತೆಗೆ ಕಸಸಂಗ್ರಹಣೆಯ ಶುಲ್ಕವನ್ನು ವಸೂಲಿ ಮಾಡುವ ಪ್ರಸ್ತಾಪ ಮತ್ತೆ ಮುನ್ನಲೆಗೆ ಬಂದಿದ್ದು, ಪುರಸಭೆಯ ಮುಖ್ಯಾಧಿಕಾರಿಯ ಈ ಜನವಿರೋಧಿ ನೀತಿಯ ಬಗ್ಗೆ ಪುರವಾಸಿಗಳಿಂದ ಆಕ್ರೋಶ ವ್ಯಕ್ತವಾಗಿದ್ದು, ಸಮಾನ ಮನಸ್ಕ ಸಂಘಟನೆಗಳ ಸಮನ್ವಯ ಸಮಿತಿ ಪ್ರತಿಭಟನೆಗೆ ಮುಂದಾಗಿದೆ. ಈ ಸಮಿತಿಯ ವತಿಯಿಂದ ಜು.23 ರಂದು ಪುರಸಭೆಯ ಕಚೇರಿ ಮುಂದೆ ಪ್ರತಿಭಟನೆ ನಡೆಯಲಿದೆ ಎಂದು ಸಮಿತಿಯ ಪ್ರಕಟಣೆ ತಿಳಿಸಿದೆ. ಜನಪ್ರತಿನಿಧಿಗಳ ಆಡಳಿತ ಇಲ್ಲದಾಗಲೇ ಸರಕಾರದ ಸುತ್ತೋಲೆಯ ನೆಪದಲ್ಲಿ ಪುರಸಭೆಯ ಮುಖ್ಯಾಧಿಕಾರಿಯವರು ಸ್ವಯಂ ಘೋಷಿತ ಆಸ್ತಿ ತೆರಿಗೆಯ ಜೊತೆಯಲ್ಲಿ  ತೀರಾ ಅವೈಜ್ಞಾನಿಕ ವಾಗಿ ಕಸ ಸಂಗ್ರಹದ ಶುಲ್ಕ ವಸೂಲಿ ಮಾಡುತ್ತಿರುವುದು ಪುರಸಭೆಯ ಅಧಿಕಾರಿಯವರ ಜನವಿರೋಧಿ ಕ್ರಮವಾಗಿದೆ ಎಂದು ಸಮಿತಿ ಆರೋಪಿಸಿದೆ. ಪುರಸಭಾ ವ್ಯಾಪ್ತಿಯ ಕೆಲ ಭಾಗಗಳಿಗೆ ಈಗಲೂ ಕಸ ಸಂಗ್ರಹದ ವಾಹನಗಳು ತೆರಳದಿದ್ದರೂ, ಅಧಿಕಾರಿಗಳು ತೆರಿಗೆಯ ಜೊತೆ ಕಸದ ಶುಲ್ಕ ಪಾವತಿಸುವಂತೆ ಒತ್ತಡ ಹೇರುತ್ತಿದ್ದಾರೆ ಎಂದು ಸಮಿತಿ ಪ್ರಕಟಣೆಯಲ್ಲಿ ದೂರಿದೆ.   ತೆರಿಗೆಯ ಜೊತೆ ಕಸದ ಶುಲ್ಕ ವಸೂಲಿಯನ್ನು ತಕ್ಷಣ ನಿಲ್ಲಿಸುವಂತೆ ಆಗ್ರಹಿಸಿ ಸಮಾನಮನಸ್ಕ ಸಂಘಟನೆಗಳ ಸಮನ್ವಯ ಸಮಿತಿ ಬೀದಿಗಿಳಿದಿದ್ದು, ಪುರವಾಸಿಗಳಿಂದಲೂ  ಬೆಂಬಲ ವ್ಯಕ್ತವಾಗಿದೆ.

More articles

Latest article