ಮುಂಬಯಿ (ಗುರುಪುರ): ಈ ಮಗುವಿಗೆ ಹುಟ್ಟಿದ ನಾಲ್ಕು ತಿಂಗಳಿಂದಲೇ ಸಾವು-ನೋವಿನ ವಿಚಿತ್ರ ಕಾಯಿಲೆ ಅಂಟಿಕೊಂಡಿದೆ. ಒಂದೂವರೆ ಲಕ್ಷ ಮಕ್ಕಳಲ್ಲಿ ಅಪೂರ್ವ ಎಂಬಂತೆ ಒಬ್ಬರಲ್ಲಿ ಕಂಡು ಬರುವ ‘ಗೌಚರ್’ ಎಂಬ ಆನುವಂಶಿಕ ಕಾಯಿಲೆ ಎರಡೂವರೆ ವರ್ಷದ ಯೋಕ್ಷಾ ಶೆಟ್ಟಿಗೆ ಬಾಧಿಸಿದೆ. ಇದು ಜೀವನ ಪರ್ಯಂತ ಕಾಡುವ ಕಾಯಿಲೆಯಾಗಿದ್ದು, ಔಷಧಿ ದುಬಾರಿಯಾಗಿದೆ. ಆದ್ದರಿಂದಲೇ ಮಗು ಉಳಿಸಲು ಶತಾಯಗತ ಪ್ರಯತ್ನ ನಡೆಸುತ್ತಿರುವ ತಾಯಿ-ತಂದೆ ಈಗ ದೇವರ ಮೇಲೆ ಭಾರ ಹಾಕಿ, ಸಮಾಜದ ನೆರವಿನತ್ತ ಮುಖ ಮಾಡಿದ್ದಾರೆ.

ಅತ್ಯಂತ ಕಡು ಬಡತನದಲ್ಲಿರುವ ಯೋಕ್ಷಾಳ ತಂದೆ ಸಂತೋಷ್ ಶೆಟ್ಟಿ ಪೈಂಟರ್ ಕೆಲಸ ಮಾಡುತ್ತಿದ್ದರೆ, ತಾಯಿ ಪೂಜಾ ಮನೆಗೆಲಸ ಮಾಡುತ್ತಿದ್ದಾರೆ. ಇವರೊಂದಿಗೆ ಪೂಜಾಳ ತಾಯಿ ಇದ್ದಾರೆ. ಗುರುಪುರ ಮೂಳೂರು ಗ್ರಾಮದ ಮಠದ ಗುಡ್ಡೆಯಲ್ಲಿ ಮನೆ ಮಾಡಿಕೊಂಡಿರುವ ಈ ಕುಟುಂಬ, ಮಗುವಿಗೆ ಸೂಕ್ತ ಚಿಕಿತ್ಸೆ ಕೊಡಿಸಲು ಈವರೆಗೆ ಸಾಧ್ಯವಿರುವ ಎಲ್ಲ ಪ್ರಯತ್ನ ನಡೆಸಿದೆ. ಜನಪ್ರತಿನಿಧಿಗಳು, ಸಮಾಜ ಬಾಂಧವರು ಹಾಗೂ ಎನ್‌ಜಿಒಗಳ ಭೇಟಿ ಮಾಡಿ ಮಗು ಉಳಿಸಲು ಅಂಗಲಾಚಿ ಬೇಡಿಕೊಂಡಿದ್ದಾರೆ. ಮನವಿ ನೀಡಿದ್ದಾರೆ. ಇದಕ್ಕೆ ಕಳೆದ ಎರಡೂವರೆ ವರ್ಷದಿಂದ ಸೂಕ್ತ ಸ್ಪಂದನೆ ಸಿಕ್ಕಿಲ್ಲ. ಪರಿಣಾಮ, ಕುಟುಂಬದ ಮೇಲೆ ಬರಸಿಡಿಲು ಬಡಿದಂತಾಗಿದೆ. ಮಗುವಿಗಾಗಿ ಸಾಲಸೋಲ ಮಾಡಿ ಈಗಾಗಲೇ ಕೆಲವು ಲಕ್ಷ ಕರ್ಚು ಮಾಡಲಾಗಿದೆ.

ಮಗುವಿನ ಕಾಯಿಲೆ ನಿಯಂತ್ರಿಸಲು ಎರಡು ವಾರಕ್ಕೆ ಒಂದು ಬಾರಿಯಂತೆ ಜೀವನಪರ್ಯಂತ ‘ಸೆರೆಝಿಮ್’ ಎಂಬ ದುಬಾರಿ ಔಷಧಿ ನೀಡಬೇಕಾಗುತ್ತದೆ. ಹೊಟ್ಟೆಯೊಳಗಿನ ಈ ಕಾಯಿಲೆಗೆ ಆರಂಭದ ಚಿಕಿತ್ಸೆಗಾಗಿ 25ರಿಂದ ೩೦ ಲಕ್ಷ ರೂ ಆಗತ್ಯವಿದೆ ಎಂದು ವೈದ್ಯರು ಸೂಚಿಸಿದ್ದಾರೆ. ಬಡತನದ ಬೇಗೆಯಲ್ಲಿರುವ ಈ ಕುಟುಂಬಕ್ಕೆ ಇಷ್ಟೊಂದು ಹಣ ಕೂಡಿಸಲು ಸಾಧ್ಯವೇ ಇಲ್ಲ. ವೈದ್ಯರ ಸೂಚನೆ ಬಳಿಕ ಯೋಕ್ಷಾ ಕುಟುಂಬದ ಮೇಲೆ ಆಕಾಶವೇ ಬಿದ್ದಂತಾಗಿದೆ. ಇಷ್ಟಿದ್ದರೂ, ಮಗು ಉಳಿಸುವ ನಿಟ್ಟಿನಲ್ಲಿ ಉಸಿರಿರುವತನಕ ಪ್ರಯತ್ನಿಸುವೆ ಎನ್ನುವ ಪೂಜಾ ಹಾಗೂ ಆಕೆಯ ಕುಟುಂಬಿಕರೊಂದಿಗೆ ‘ಮಾನವೀಯತೆಗೆ ಸ್ಪಂದಿಸುವ ಈ ಸಮಾಜ’ ಕೈಜೋಡಿಸಬೇಡವೆ..? ನಮ್ಮ ಪ್ರಯತ್ನದೊಂದಿಗೆ ಕೈಜೋಡಿಸಿ ಎಂದು ದಯನೀಯವಾಗಿ ಬೇಡುವುದೊಂದು ಬಿಟ್ಟರೆ ಅನ್ಯ ದಾರಿ ಉಳಿದಿಲ್ಲ. ಸಂಪರ್ಕಿಸಿ : ಪೂಜಾ, ಸಿಂಡಿಕೇಟ್ ಬ್ಯಾಂಕ್ ಗುರುಪುರ ಶಾಖೆ, ಖಾತೆ ನಂಬ್ರ: 01242250005816. IFSC SYNB0000124 (ಐಎಫ್‌ಎಸ್‌ಸಿ): ಎಸ್‌ವೈಎನ್‌ಬಿ000124.

LEAVE A REPLY

 Click this button or press Ctrl+G to toggle between Kannada and English

Please enter your comment!
Please enter your name here